Advertisement

ನಾಯರ್‌ ಬಿಜೆಪಿ ಸೇರ್ಪಡೆ

08:29 AM Oct 29, 2018 | |

ತಿರುವನಂತಪುರಂ: ಶಬರಿಮಲೆ ಪ್ರಕರಣದಲ್ಲಿ ಭಕ್ತರ ಪರ ಹೆಬ್ಬಂಡೆಯಂತೆ ನಿಲ್ಲುವ ಮಹತ್ವದ ನಿರ್ಧಾರ ಕೈಗೊಂಡು ಕೇರಳದ ಎಡಪಕ್ಷಗಳ ನೇತೃತ್ವದ ಸರಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಬಿಜೆಪಿ, ಈಗ ಗಣ್ಯರನ್ನು ಪಕ್ಷಕ್ಕೆ ಸೆಳೆಯುತ್ತಿದೆ. ಇಸ್ರೋ ಮಾಜಿ ನಿರ್ದೇಶಕ ಜಿ.ಮಾಧವನ್‌ ನಾಯರ್‌ ಹಾಗೂ ನಾಲ್ವರು ರವಿವಾರ ತಿರುವನಂತಪುರದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Advertisement

ಬಿಜೆಪಿ ಸೇರಿದ ನಾಲ್ವರ ಪೈಕಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಹಾಗೂ ಮಾಜಿ ಕಾಂಗ್ರೆಸ್ಸಿಗ ಜಿ. ರಾಮನ್‌ ನಾಯರ್‌, ಮಲಂಕಾರ ಚರ್ಚ್‌ನ ಥಾಮಸ್‌ ಜಾನ್‌ ಕೂಡ ಸೇರಿದ್ದಾರೆ. ಶಬರಿಮಲೆ ವಿಚಾರ ದಲ್ಲಿ ಸರಕಾರದ ನಿಲುವನ್ನು ವಿರೋಧಿಸಿ, ಬಿಜೆಪಿ ಶನಿವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ರಾಮನ್‌ ನಾಯರ್‌ರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ರವಿವಾರ ಇವರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಪಕ್ಷಕ್ಕೆ ಇದು ಮಹತ್ವದ ಇಮೇಜ್‌ ತಂದುಕೊಡುವ ಸಾಧ್ಯತೆಯಿದೆ ಎನ್ನಲಾಗಿದೆ.

ರಾಹುಲ್‌ ಈಶ್ವರ್‌ ಬಂಧನ: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಹೋರಾಡುತ್ತಿರುವ ಅಯ್ಯಪ್ಪ ಧರ್ಮ ಸೇನಾ ಸಂಘಟನೆ ಅಧ್ಯಕ್ಷ ರಾಹುಲ್‌ ಈಶ್ವರ್‌ರನ್ನು ರವಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ. ಯಾವುದಾದರೂ ಮಹಿಳೆ ದೇಗುಲವನ್ನು ತಲುಪಲು ಯತ್ನಿಸಿದರೆ ದೇಗುಲದ ಬಳಿ ರಕ್ತ ಚೆಲ್ಲಿ ದೇಗುಲ ಮುಚ್ಚಲೂ ಸಿದ್ಧವಿದ್ದೇವೆ ಎಂದು ರಾಹುಲ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು ಎನ್ನಲಾಗಿದೆ.

ಶಾಗೆ ಸರಕಾರ‌ದ ತಿರುಗೇಟು: ಇನ್ನೂ ಉದ್ಘಾಟನೆಯಾಗದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲು ಅಮಿತ್‌ ಶಾಗೆ ನಾವು ಅವಕಾಶ ನೀಡಿರುವುದು ನಮ್ಮ ಸರಕಾರವು ಅತಿಥಿಗಳಿಗೆ ನೀಡುವ ಸತ್ಕಾರವನ್ನು ತೋರಿಸುತ್ತದೆ. ಈ ಅನುಕೂಲ ಬಳಸಿಕೊಂಡ ಶಾ, ಎಲ್‌ಡಿಎಫ್ ಸರಕಾರವನ್ನು ಉರುಳಿಸುವ ಬೆದರಿಕೆ ಒಡ್ಡುತ್ತಾರೆ ಎಂದು ಹಣಕಾಸು ಸಚಿವ ಟಿ.ಎಂ.ಥಾಮಸ್‌ ಹೇಳಿದ್ದಾರೆ.

ಶಾ ಹೇಳಿಕೆ ಪ್ರಚೋದನಾಕಾರಿ: ಕಾಂಗ್ರೆಸ್‌, ಬಿಎಸ್‌ಪಿ
ಸುಪ್ರೀಂಕೋರ್ಟ್‌ ನೀಡಿದ ಹಲವು ತೀರ್ಪುಗಳನ್ನು ಸರಕಾರಗಳು ಅನುಷ್ಠಾನಕ್ಕೆ ತಂದಿಲ್ಲ. ಆದರೆ ಶಬರಿಮಲೆ ಪ್ರಕರಣವನ್ನು ಉತ್ಸಾಹದಿಂದ ಕೇರಳ ಸರಕಾರ ಜಾರಿಗೊಳಿಸಲು ನಿರ್ಧರಿಸಿದೆ ಎಂದು ಶನಿವಾರ ಅಮಿತ್‌ ಶಾ ಹೇಳಿರುವುದನ್ನು ಬಿಎಸ್‌ಪಿ ಹಾಗೂ ಕಾಂಗ್ರೆಸ್‌ ಖಂಡಿಸಿವೆ. ಅಲ್ಲದೆ ಇದು ಪ್ರಚೋದನಾಕಾರಿ ಹೇಳಿಕೆ ಎಂದು ಟೀಕಿಸಿವೆ. ಸಂಸ್ಥೆಗಳ ಗೌರವ ಹಾಳು ಮಾಡುವುದು ಹಾಗೂ ಅವುಗಳನ್ನು ಮುಚ್ಚುವುದೇ ಬಿಜೆಪಿಯ ಗುರಿ. ಸಿಬಿಐ, ಇಸಿ, ಸಿವಿಸಿ ಹಾಗೂ ಸಿಐಸಿ ವಿಚಾರದಲ್ಲೂ ಹೀಗೆಯೇ ನಡೆದಿದೆ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಹೇಳಿದ್ದಾರೆ. ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುವುದಕ್ಕೆ ಅಮಿತ್‌ ಶಾ ಅವರ ಹೇಳಿಕೆಯೇ ಸಾಕ್ಷಿ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಕಿಡಿಕಾರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next