Advertisement

ಬೇಳಂಜೆ ಪ್ರಶಸ್ತಿಗೆ ಮಾಧವ ನಾಯ್ಕ

06:04 PM Feb 21, 2020 | mahesh |

ಯಕ್ಷಗಾನ ಲೋಕದಲ್ಲಿ ಮದ್ದಳೆಯ ನುಡಿತದಲ್ಲಿ ನವೀನತೆಯ ಜೊತೆಗೆ ಗೀತವನ್ನು ಸುಸ್ಪಷ್ಟವಾಗಿ ನುಡಿಸಿ ಪ್ರೇಕ್ಷಕರಿಗೆ ಮೋಡಿ ಮಾಡಿದ ಗಾರುಡಿಗ ಎಂದೆನಿಸಿಕೊಂಡವರು ದಿ. ಬೇಳಂಜೆ ತಿಮ್ಮಪ್ಪ ನಾಯ್ಕರು.46ನೇ ವಯಸ್ಸಿನಲ್ಲಿ ನಿಧನರಾದ ಬೇಳಂಜೆಯವರ ಸಂಸ್ಮರಣಾರ್ಥವಾಗಿ ಶ್ರೀ ದುರ್ಗಾಪರಮೇಶ್ವರಿ ಮರಾಟಿ ಸಮುದಾಯ ಕಲಾ ಸಂಘ, ಮೂಡು ಅಂಜಾರು ಹಿರಿಯಡ್ಕ ಹಾಗೂ ದಿ.ಬೇಳಂಜೆ ತಿಮ್ಮಪ್ಪ ನಾಯ್ಕರ ಮಕ್ಕಳ ಸಂಯುಕ್ತ ಆಶ್ರಯದಲ್ಲಿ ಕೊಡಮಾಡುವ ಈ ಸಾಲಿನ ಬೇಳಂಜೆ ದಿ. ತಿಮ್ಮಪ್ಪ ನಾಯ್ಕ ಪ್ರಶಸ್ತಿಗೆ ಚೇರ್ಕಾಡಿ ಪೇತ್ರಿ ಮಾಧವ ನಾಯ್ಕರು ಆಯ್ಕೆಯಾಗಿದ್ದಾರೆ.

Advertisement

ಚೇರ್ಕಾಡಿ ಪೇತ್ರಿ ಮಾಧವ ನಾಯ್ಕರು ಬಡಗು ನಡುತಿಟ್ಟಿನ ಸಂಪ್ರದಾಯಬದ್ಧ ವೇಷಗಾರಿಕೆಯಲ್ಲಿ ಖ್ಯಾತನಾಮರಾಗಿದ್ದು, ಸೋದರ ಮಾವ ಬೇಳಂಜೆ ದಿ. ತಿಮ್ಮಪ್ಪ ನಾಯ್ಕರಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತು ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟುವ ಮೂಲಕ ಕಲಾಸೇವೆಯನ್ನು ಆರಂಭಿಸಿ ಮುಂದೆ ಕೊಲ್ಲೂರು,ಸೌಕೂರು, ಮಂದರ್ತಿ, ಮೇಳಗಳಲ್ಲಿ ತಿರುಗಾಟ ಮಾಡಿದವರು . ಹೆರಂಜಾಲು ವೆಂಕಟರಮಣ ಗಾಣಿಗರಿಂದ ಹೆಚ್ಚಿನ ಪರಿಣತಿ ಹೊಂದಿದ ಇವರು ಹಾರಾಡಿ ರಾಮ ಗಾಣಿಗ, ಗುರು ವೀರಭದ್ರ ನಾಯಕ್‌ ,ಗೋರ್ಪಾ ಡಿ ವಿಠ್ಠಲ ಪಾಟೀಲ್‌ , ಮುಂತಾದ ಮೇರು ಕಲಾವಿದರ ಒಡನಾಟ ದಿಂದ ಪರಿಪೂರ್ಣ ಕಲಾವಿದರಾಗಿ ರೂಪುಗೊಂಡರು.

ಯಕ್ಷಗಾನರಂಗದ ಮುಮ್ಮೇಳದ ವಿವಿಧ ಮಜಲುಗಳನ್ನು ಹಂತ ಹಂತವಾಗಿ ಏರಿ ಬಣ್ಣದ ವೇಷದತ್ತ ಒಲವು ಹೊಂದಿ ಮುಂದೆ ಖ್ಯಾತ ಬಣ್ಣದ ವೇಷಧಾರಿಯಾದರು .ರಾವಣ, ಮೈರಾವಣ, ಹಿಡಿಂಬಾಸುರ ,ಘಟೋತ್ಕಚ, ಹಿಡಿಂಬೆ ,ಶೂರ್ಪನಖೀ ,ಮುಂತಾದ ಬಣ್ಣದ ವೇಷಗಳನ್ನು ರಂಗದಲ್ಲಿ ಪರಿಪೂರ್ಣವಾಗಿ ಅಭಿವ್ಯಕ್ತಿಗೊಳಿಸಿ ಪ್ರಸಿದ್ಧರಾದ ಇವರು ಕಿರಾತ ಪಾತ್ರಗಳಲ್ಲಿ ಉಪಯೋಗಿಸುವ ಎರಡು ಕೋರೆ ಮುಂಡಾಸುಗಳನ್ನು ಕಟ್ಟುವಲ್ಲಿ ಸಿದ್ಧಹಸ್ತರು.ಇಂದಿಗೂ ಬಣ್ಣದ ವೇಷದ ಬಣ್ಣಗಾರಿಕೆಯ ಬಗ್ಗೆ ಅಧಿಕಾರಯುತವಾಗಿ ಮಾಹಿತಿ ನೀಡಬಲ್ಲ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.

– ಸುರೇಂದ್ರ ಪಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next