Advertisement

ಮಾಡಾವು-ಪೆರ್ಲಂಪಾಡಿ ರಸ್ತೆ: ಹೊರಳಾಡುತ್ತಿವೆ ಜಲ್ಲಿಕಲ್ಲುಗಳು

03:59 PM Apr 27, 2019 | Team Udayavani |

ಸವಣೂರು/ಕುಂಬ್ರ ಎ. 26: ರಸ್ತೆಯಲ್ಲಿ ಡಾಮರು ಇಲ್ಲ. 5.5 ಕಿ.ಮೀ. ಉದ್ದಕ್ಕೂ ಹೊಂಡ-ಗುಂಡಿಗಳು. ರಸ್ತೆಗೆ ಹಾಕಿದ್ದ ದೊಡ್ಡ ಗಾತ್ರದ ಜಲ್ಲಿಗಳು ಮೇಲೆದ್ದು ಹೊರಳಾಡುತ್ತಿದೆ. ಮಳೆ ಬಂದರೆ ಕೆಸರು, ವಾಹನಗಳ ಚಕ್ರ ಹೂತು ಹೋಗುವಷ್ಟು ಮಣ್ಣು ಇದೆ.

Advertisement

ಇದು ಮಾಡಾವಿನಿಂದ ಪೆರ್ಲಂಪಾಡಿಗೆ ಸಂಪರ್ಕ ಕಲ್ಪಿಸುವ ಜಿ.ಪಂ. ರಸ್ತೆ. ಈ ರಸ್ತೆಯನ್ನು ಜನಪ್ರತಿನಿಧಿಗಳು ಮರೆತು ಬಿಟ್ಟಿದ್ದಾರೆ. ಆದರೆ ಸಂಚಾರ ಮಾಡುವಾಗ ಆಗುವ ವ್ಯಥೆ, ನೋವನ್ನು ಜನ ಮರೆತಿಲ್ಲ. ಮರೆಯಲು ಸಾಧ್ಯವೂ ಇಲ್ಲ.

ಬಸ್ಸು ಬರುವುದೇ ಇಲ್ಲ:

ಸುಮಾರು 5.5 ಕಿ.ಮೀ. ಉದ್ದದ ಡಾಮರ್‌ ರಸ್ತೆಯಲ್ಲೊಮ್ಮೆ ಸಂಚರಿಸಿದರೆ ಇದು ಡಾಮರು ರಸ್ತೆ ಹೌದೇ ಎನ್ನುವಂತಿದೆ. ಅಲ್ಲಲ್ಲಿ ಅಲ್ಪ-ಸ್ವಲ್ಪ ಡಾಮರು ಕಾಣುವುದು ಬಿಟ್ಟರೆ ಎಲ್ಲೆಡೆ ಮಣ್ಣು ರಸ್ತೆಯೇ ಕಾಣುತ್ತದೆ. ಮಾತ್ರವಲ್ಲದೆ ರಸ್ತೆ ಮಧ್ಯೆ ದೊಡ್ಡ ಗುಂಡಿಗಳು ನಿರ್ಮಾಣವಾಗಿದೆ. ರಸ್ತೆಯಲ್ಲಿ ಬಸ್‌ ಸಂಚಾರವೂ ಇಲ್ಲದಾಗಿದ್ದು, ಜನ ಸಾಮಾನ್ಯರ ಮತ್ತು ವಿದ್ಯಾರ್ಥಿಗಳ ಪೇಚಾಟಕ್ಕೂ ಕಾರಣವಾಗಿದೆ. ವರ್ಷಗಳ ಹಿಂದೆ ಪುತ್ತೂರಿನಿಂದ ಮಾಡಾವುಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸನ್ನು ಈ ಭಾಗದ ಉಪ್ಪಳಿಗೆಯವರೆಗೆ ವಿಸ್ತರಿಸಿ ವ್ಯವಸ್ಥೆ ಕಲ್ಪಿಸಲಾಗಿತ್ತಾದರೂ, ಈಗ ಅದೂ ಇಲ್ಲದಾಗಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದ ರಿಂದ ಬಸ್ಸು ಸಂಚಾರ ಬಿಡಿ ಸೈಕಲ್ ಸಂಚಾರಕ್ಕೂ ಸಾಧ್ಯವಿಲ್ಲದ ಸ್ಥಿತಿ ಇದೆ.

ಜನಪ್ರತಿನಿಧಿಗಳೇ ಗಮನಹರಿಸಿ:

Advertisement

ಕಳೆದ ಹಲವು ವರ್ಷಗಳಿಂದ ದುರಸ್ತಿ ಕಾಣದೆ ನೆನೆಗುದಿಗೆ ಬಿದ್ದಿದ್ದ ಮಾಡಾವು-ಪೆರ್ಲಂಪಾಡಿ ಸಿದ್ಧಮೂಲೆ ರಸ್ತೆ ದುರಸ್ತಿಯ ಬಗ್ಗೆ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ನೂರಕ್ಕೂ ಅಧಿಕ ಮನೆ ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಮಾಡಾವುನಿಂದ ಸಿದ್ಧಮೂಲೆ ಪೆರ್ಲಂಪಾಡಿ ರಸ್ತೆಗೆ ಬಂದು ಆ ಮೂಲಕ ಅಮ್ಚಿನಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸೇರಬಹುದು. ಯಾವ ಜನಪ್ರತಿನಿಗಳು ಸ್ವಂತ ಹಣವನ್ನು ರಸ್ತೆಗೆ ಹಾಕುತ್ತಿಲ್ಲ. ತಮ್ಮ ಕ್ಷೇತ್ರದ ಜನರ ಬೇಡಿಕೆಯನ್ನು ಈಡೇರಿಸಲು ಜನರಿಂದ ಆಯ್ಕೆಯಾದವರು ಶ್ರಮಿಸ ಬೇಕು. ಅದಕ್ಕೆಂದೇ ಜನ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಈ ರಸ್ತೆಗೆ ಅನುದಾನ ಇರಿಸಲು ನಿಮ್ಮಿಂದ ಸಾಧ್ಯವಾಗದೇ ಇದ್ದಲ್ಲಿ ಗ್ರಾಮಸ್ಥರಿಗೆ ತಿಳಿಸಿ ನಾವೇ ಅದಕ್ಕೊಂದು ಪರಿಹಾರವನ್ನು ಕಾಣಿಸುತ್ತೇವೆ. ನಿಮ್ಮ ಭರವಸೆಯನ್ನು ನಂಬಿ ನಾವು ಹತ್ತಾರು ವರ್ಷಗಳಿಂದ ಮೋಸ ಹೋಗಿದ್ದೇವೆ. ರಸ್ತೆ ನೋಡಲು ಬರುವುದಾದರೆ ಬನ್ನಿ ಎಂದು ಸ್ಥಳೀಯ ಜನರು ಆಕ್ರೋಶದಿಂದ ಜನಪ್ರತಿನಿಧಿಗಳ ವಿರುದ್ಧ ಮಾತನಾಡುತ್ತಾರೆ.

ವಿದ್ಯಾರ್ಥಿಗಳಿಗೆ ಭಾರಿ ತೊಂದರೆ:

ಈ ಭಾಗದಲ್ಲಿ ಅದೆಷ್ಟೋ ಮನೆಗಳಿವೆ. ಪುತ್ತೂರು, ಪೆರ್ಲಂಪಾಡಿ, ಬೆಳ್ಳಾರೆ ಕಡೆಗೆ ಈ ಭಾಗದಿಂದ ನಿತ್ಯ ಪ್ರಯಾಣಿಕರು ಪ್ರಯಾಣಿಸುತ್ತಾರೆ. ರಸ್ತೆಯ ಸದ್ಯದ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ. ಈ ಭಾಗದ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ತೆರಳಬೇಕಾಗಿದೆ. ಮೊದಲೇ ಬಸ್‌ ಸೌಲಭ್ಯವಿಲ್ಲದ ರಸ್ತೆಯಲ್ಲಿ ಇತರ ಬಾಡಿಗೆ ವಾಹನಗಳ ಸಂಚಾರವೂ ಇಲ್ಲದಾಗಿದೆ. ಪುತ್ತೂರು, ಬೆಳ್ಳಾರೆ ಮೊದಲಾದ ಕಡೆಗಳಿಗೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಅತೀವ ತೊಂದರೆ ಎದುರಿಸುತ್ತಿದ್ದಾರೆ. ರಸ್ತೆಯ ದುರಸ್ತಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪುತ್ತೂರು-ಸುಳ್ಯ ಗಡಿಭಾಗದ ವಿಚಾರದಲ್ಲಿ ರಸ್ತೆ ಅಭಿವೃದ್ದಿ ಕಾಣದಾಯಿತೋ ಅಥವಾ ಜನಪ್ರತಿನಿಗಳ  ನಿರ್ಲಕ್ಷ್ಯಕ್ಕೆ ಒಳಗಾಯಿತೋ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next