ಬೆಂಗಳೂರು: ಬಿಡಿಎ ವತಿಯಿಂದ ನಾಗರಬಾವಿಯ ಮಾಳಗಾಲದಲ್ಲಿ ಈಗಾಗಲೇ ನಿರ್ಮಿಸಿರುವ ಫ್ಲ್ಯಾಟ್‌ಗಳ ದರ ಏರಿಕೆ ಮಾಡಲು ಬಿಡಿಎ ತೀರ್ಮಾನಿಸಿದೆ. ಮಾಳಗಾಲದಲ್ಲಿ ಫ್ಲ್ಯಾಟ್‌ಗಳನ್ನು ನಿರ್ಮಿಸುವ ಸಲುವಾಗಿ ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬ್ಯಾಂಕ್‌ನಲ್ಲಿ ಸಾಲ ಪಡೆದಿತ್ತು.
ಈಗ ಬಡ್ಡಿ ದರಲ್ಲಿ ಸಾಕಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬಿಡಿಎ ತನಗಾಗಿರುವ ಆರ್ಥಿಕ ಹೊರೆಯನ್ನು ತನ್ನ ಖರೀದಿದಾರರ ಮೇಲೆ ವರ್ಗಾಯಿಸಲು ನಿರ್ಧರಿಸಿದೆ. ಹೀಗಾಗಿ, ಅ.1ರಿಂದ ಮಾಳಗಾಲದ ಫ್ಲ್ಯಾಟ್ ದರ 2ಲಕ್ಷ ರೂ.ಏರಿಕೆಯಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಡಿಎ ಹಿರಿಯ ಅಧಿಕಾರಿಯೊಬ್ಬರು, 2015ರಲ್ಲಿ ಬಿಡಿಎ ಬ್ಯಾಂಕಿನಿಂದ ಹಣ ತಂದು ಮಾಳಗಾಲದಲ್ಲಿ 360 ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಿತ್ತು. ಈಗ ಬ್ಯಾಂಕಿನ ಬಡ್ಡಿ ದರದಲ್ಲಿ ಭಾರೀ ಏರಿಕೆಯಾಗಿದೆ. ಜತೆಗೆ ಕಟ್ಟಡ ನಿರ್ಮಾಣ ಸಾಮಗ್ರಿ ದರ ಕೂಡ ಹೆಚ್ಚಾಗಿದೆ. ಹೀಗಾಗಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಣದ ಹೊರೆಯನ್ನು ಖರೀದಿದಾರರ ಮೇಲೆ ವರ್ಗಾಯಿಸಲು ತೀರ್ಮಾನ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ 2 ಬಿಎಚ್‌ಕೆಯ ಫ್ಲ್ಯಾಟ್‌ಗಳ ಮೇಲೆ 40 ಲಕ್ಷ ರೂ.ನಿಗದಿಪಡಿಸಿತ್ತು. ಈಗ ಹೆಚ್ಚುವರಿಯಾಗಿ 2 ಲಕ್ಷ ರೂ.ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ 42ಲಕ್ಷ ರೂ.ಗೆ ಏರಿಕೆ ಆಗಲಿದೆ ಎಂದಿದ್ದಾರೆ.ಆದರೆ, ಈ ದರ ಏರಿಕೆ ಕೇವಲ ಮಾಳಗಾಳ ಫ್ಲ್ಯಾಟ್‌ಗೆ ಮಾತ್ರ ಸೀಮಿತವಾಗಲಿದೆ. ಉಳಿದ ಫ್ಲ್ಯಾಟ್‌ಗಳಲ್ಲಿ ಈಗಿರುವ ದರ ಹಾಗೇ ಮುಂದುವರಿಯಲಿದೆ ಎಂದಿದ್ದಾರೆ.
ಎರಡು ನೂರು ಫ್ಲ್ಯಾಟ್ ಮಾರಾಟ: ಮಾಳಗಾಲದಲ್ಲಿ ನಿರ್ಮಿಸಲಾಗಿರುವ 360 ಫ್ಲ್ಯಾಟ್‌ಗಳ ಪೈಕಿ ಈಗಾಗಲೇ 200 ಫ್ಲ್ಯಾಟ್‌ಗಳು ಖರೀದಿಯಾಗಿವೆ. ಇನ್ನು ಕೇವಲ 160 ಫ್ಲ್ಯಾಟ್‌ಗಳ ಮಾರಾಟವಾಗಬೇಕಿದ್ದು, ಇವುಗಳಿಗೆ ಗ್ರಾಹಕರಿಂದ ಭಾರೀ ಬೇಡಿಕೆ ಇದೆ. ಉಳಿದಿರುವ ನಿವಾಸಗಳನ್ನು ಬಿಡಿಎ ಈ ತಿಂಗಳಾಂತ್ಯದವರೆಗೂ, ಮೂಲ ಬೆಲೆಗಳಲ್ಲೇ ಮಾರಾಟ ಮಾಡಲಿದೆ. ಆದರೆ, ಮುಂದಿನ ತಿಂಗಳಿಂದ ಮಾಳಗಾಳ ಪ್ಲ್ರಾಟ್ ಖರೀದಿಸಲು ಮುಂದಾಗುವವರು 2 ಲಕ್ಷ ರೂ. ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.
ಗ್ರಾಹಕರನ್ನು ಸೆಳೆಯಲು ತಂತ್ರ: ಮೈಸೂರು ರಸ್ತೆಯ ಸಮೀಪದ ಕೊಮ್ಮಘಟ್ಟ ಮತ್ತು ಕಣಮಿಣಿಕೆಯಲ್ಲಿ ಬಿಡಿಎ ನಿರ್ಮಿಸಿರುವ ಫ್ಲ್ಯಾಟ್‌ಗಳಿಗೆ ಬೇಡಿಕೆ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಖರೀದಿದಾರರನ್ನು ಸೆಳೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ.
ಒಂದು ಫ್ಲ್ಯಾಟ್ ಖರೀದಿಸುವವರಿಗೆ ಶೇ.5ರಷ್ಟು ಮತ್ತು 10ಕ್ಕಿಂತಲೂ ಹೆಚ್ಚು ಫ್ಲ್ಯಾಟ್‌ಗಳನ್ನು ಖರೀದಿಸಿದರೆ ಶೇ.10ರಷ್ಟು ರಿಯಾಯಿತಿ ನೀಡಲು ಈಗಾಗಲೇ ತೀರ್ಮಾನ ಕೈಗೊಂಡಿದೆ. ಈ ಸೈಟ್‌ಗಳ ಮೇಲೆ ಯಾವುದೇ ರೀತಿಯ ಬೆಲೆ ಏರಿಕೆ ಅನ್ವಯಿಸುವುದಿಲ್ಲ ಎಂದು ಬಿಡಿಎ ಸ್ಪಷ್ಟಪಡಿಸಿದೆ. ಕೊಮ್ಮಘಟ್ಟದಲ್ಲಿ 2 ಬಿಎಚ್‌ಕೆಯ 500 ಮತ್ತು ಕಣಮಿಣಿಕೆಯಲ್ಲಿ 950 ಫ್ಲ್ಯಾಟ್‌ಗಳು ಮಾರಾಟಕ್ಕೆ ಲಭ್ಯ ಇದೆ.