Advertisement

ಶಾಸಕ ಮಧುಗಿಲ್ಲ ಬಿಎಸ್‌ವೈ ವಿರುದ್ಧ ಮಾತಾಡೋ ನೈತಿಕತೆ

03:25 PM Jul 26, 2017 | |

ಶಿಕಾರಿಪುರ: ಕಳೆದ ನಾಲ್ಕು ದಶಕಗಳಿಂದ ಜನಪರ ಹೋರಾಟದ ಮೂಲಕ ರಾಜಕೀಯದಲ್ಲಿ ತೊಡಗಿಸಿಕೊಂಡು ಶಾಸಕ, ಸಂಸದ, ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ ಬಿ.ಎಸ್‌. ಯಡಿಯೂರಪ್ಪನವರ ವಿರುದ್ಧ ಮಾತಾಡುವ ನೈತಿಕತೆ ಶಾಸಕ ಮಧು ಬಂಗಾರಪ್ಪ ಅವರಿಗಿಲ್ಲ ಎಂದು ಶಾಸಕ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಪಟ್ಟಣದ ಮಂಗಳಭವನದಲ್ಲಿ ಬಿಜೆಪಿ ವಿಸ್ತಾರಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ ತಂದೆ ಬಂಗಾರಪ್ಪ ಅವರ ಸಾವಿನ ಅನುಕಂಪ, ಅವರ ಹೆಸರಿನ ಮೇಲೆ ಗೆದ್ದು ಬಂದು ಶಾಸಕರಾಗಿರುವ ಮಧು ಬಂಗಾರಪ್ಪ ಯಡಿಯೂರಪ್ಪನವರ ವಿರುದ್ಧ ಲಘು ದಾಟಿಯಲ್ಲಿ ಮಾತನಾಡಿದ್ದು ಖಂಡನೀಯ ಎಂದು ಮಧು ವಿರುದ್ಧ ಹರಿಹಾಯ್ದರು. 

ಯಡಿಯೂರಪ್ಪನವರು ಆರೆಸ್ಸೆಸ್‌ ಪ್ರಚಾರಕರಾಗಿ ಸಂಘಟನೆಯ ಮಹತ್ವನ್ನು ಅರಿತವರು. ಕೇವಲ ಪುರಸಭಾ
ಸದಸ್ಯರಾಗಿ ರಾಜಕಾರಣ ಪ್ರವೇಶಿಸಿದ ಅವರು ನಾಲ್ಕೂವರೆ ದಶಕಗಳ ಕಾಲ ಜನಪರವಾಗಿ ತೊಡಗಿಸಿಕೊಂಡಿದ್ದಾರೆ.
ಅವರ ಸರ್ಕಾರ ಅಧಿಕಾರದಲ್ಲಿದ್ದಾಗ 2 ಬಾರಿ ರೈತರ ಸಾಲ ಮನ್ನಾ ಮಾಡಿದ್ದರು. ಮುಖ್ಯಮಂತ್ರಿಗಳಾಗಿದ್ದಾಗ ಅವರು ತಂದ ಜನಪರ ಯೋಜನೆಗಳನ್ನು ವಿರೋಧಿಗಳು ಕೂಡಾ ಮೆಚ್ಚಿದ್ದಾರೆ. ಎಲ್ಲಾ ಜಾತಿ, ಮತ, ಧರ್ಮಗಳಿಗೆ ಸರಿ ಸಮನಾದ ಸ್ಥಾನ ನೀಡಿದ್ದು ಯಡಿಯೂರಪ್ಪನವರ ಸಾಧನೆಯಾಗಿದೆ. ಸೊರಬ ಕ್ಷೇತ್ರ ಪ್ರದಿನಿಧಿಸಿದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪನವರ ಕಾಲದಿಂದಲೂ ಯಾವುದೇ ರೀತಿಯ ಅಭಿವೃದ್ದಿಯನ್ನೇ ಕಾಣದ ಸೊರಬ ತಾಲೂಕನ್ನು ಸಂಪೂರ್ಣ ಅಭಿವೃದ್ಧಿಪಡಿಸಿದ್ದು ಬಿ.ಎಸ್‌.
ಯಡಿಯೂರಪ್ಪನವರು ಎಂಬುದನ್ನು ನೆನಪಿಟ್ಟುಕೊಳ್ಳಬೇಕಿತ್ತು ಎಂದರು.
 
ಇತ್ತೀಚಿಗೆ ಶಾಸಕರಾದವರಿಗೆ ರಾಜಕೀಯದಲ್ಲಿ ಅನುಭವ ಕಡಿಮೆ ಇರುತ್ತದೆ. ಮಧು ಬಂಗಾರಪ್ಪವರು ತಂದೆಯ ಸಾವಿನ ಅನುಕಂಪ ಪಡೆದು ಗೆದ್ದು ಬಂದ ಶಾಸಕರಾದವರು. ಆದರೆ ಬಿ.ಎಸ್‌. ಯಡಿಯೂರಪ್ಪನವರು ಜನತೆಯ ಶ್ರೀರಕ್ಷೆಯಿಂದ, ಆಶೀರ್ವಾದದಿಂದ ಗೆದ್ದು ಬಂದವರು. ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಮಧು ಬಂಗಾರಪ್ಪನವರಿಗೆ ಇಲ್ಲ ಎಂದರು.

ಮುಂದಿನ ದಿನಗಳಲ್ಲಿ ಬರಗಾಲವನ್ನು ಎದುರಿಸಲು ತಾಲೂಕಿನ ತಾಳಗುಂದ , ಉಡಗಣಿ, ಹೋಬಳಿಗಳಿಗೆ ವರದಾ ನದಿಯಿಂದ ಹೊಂಕಣ ಏತ ನೀರಾವರಿ ಮೂಲಕ ನೀರು ತರುವ ಯೋಜನೆ ರೂಪಿಸಲಾಗಿದೆ. ಅಂಜನಾಪುರ ಜಲಾಶಯಕ್ಕೆ ತುಂಗಾ ಏತ ನೀರಾವರಿ ಯೋಜನೆ ಅಡಿಯಲ್ಲಿ ಅಯನೂರು ಸಮೀಪದ ಗೌಡನ ಕೆರೆಯಿಂದ ನೀರು ತರಲು 100 ಕೋಟಿ ರೂಗಳ ಯೋಜನೆ ತಯಾರಾಗಿದೆ. ಹೊಸೂರು ಹೋಬಳಿಗೆ ಹೊನ್ನಾಳಿ ತಾಲೂಕಿನ ತುಂಗಾ ನದಿಯಿಂದ ನೀರುತರುವ ಯೊಜನೆಯನ್ನು ರೂಪಿಸಿದ್ದು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೇವಲ 18 ಅಡಿ ಎತ್ತರವಿದ್ದ ಅಂಜನಾಪುರ ಜಲಾಶಯವನ್ನು 21 ಅಡಿಗೆ ಎರಿಸಿದ್ದರಿಂದ ನೀರಿನ ಹರಿವು ಜಾಸ್ತಿಯಾಗಿ ಸಾವಿರಾರು ಎಕರೆ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ದೊರೆಯುತ್ತದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ ಮಾತನಾಡಿ, ಈ ತಾಲೂಕಿನಿಂದ ನೀವು ಆಯ್ಕೆ ಮಾಡಿ ಕಳಿಸಿದ ಯಡಿಯೂರಪ್ಪನವರು ಸಂಘಟನೆಯ ಮೂಲಕ ಕೆಲಸ ಮಾಡಿ ಸರ್ಕಾರ ರಚಿಸುವವರೆಗೆ ವಿರಮಿಸಲಿಲ್ಲ. ತಾಲೂಕಿನ ಜನರಲ್ಲಿ ಅಂತಹ ದೈತ್ಯ ಶಕ್ತಿಯಿದೆ. ಈಗ ಮಾಡುತ್ತಿರುವ ವಿಸ್ತಾರಕ ಯೋಜನೆಯಿಂದ ಕಾಂಗ್ರೆಸ್‌- ಜೆಡಿಎಸ್‌ ನವರಿಗೆ ನಡುಕ ಹುಟ್ಟಿದೆ ಎಂದರು. 

Advertisement

ಈ ಸಂದರ್ಭದಲ್ಲಿ ವಿಸ್ತಾರಕರನ್ನು ಸನ್ಮಾನಿಸಲಾಯಿತು ಪಕ್ಷದ ತಾಲೂಕು ಘಟಕದ ಉಪಾಧ್ಯಕ್ಷ ಅಂಬಾರಗೊಪ್ಪ ಶೇಖರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಸ್‌. ಗುರುಮೂರ್ತಿ, ಡಿ.ಎಸ್‌. ಅರುಣ್‌, ಎಂ.ಬಿ. ಚನ್ನವೀರಪ್ಪ, ಉಮಾಶಂಕರ ಟಿ.ಎಸ್‌., ಮೋಹನ, ಜಿಪಂ ಸದಸ್ಯೆ ಮಮತಾ ಸಾಲಿ, ಅರುಂಧತಿ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next