Advertisement

ಮದನಿನಗರ ಘರ್ಷಣೆ ಪ್ರಕರಣ: 7 ಸೆರೆ

10:01 AM Apr 15, 2019 | Team Udayavani |

ಉಳ್ಳಾಲ: ಮಂಗಳೂರಿನಲ್ಲಿ ಶನಿವಾರ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ಬಸ್ಸಿಗೆ ನುಗ್ಗಿ ದಾಂಧಲೆ, ವಾಹನಗಳಿಗೆ ಕಲ್ಲು ತೂರಾಟ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 50ಕ್ಕೂ ಅಧಿಕ ಮಂದಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧಿ ಇಬ್ಬರು ಬಾಲಕರು ಸಹಿತ ಏಳು ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

ಕುಪ್ಪೆಪದವು ಕಿಲಿಂಜೂರು ನಿವಾಸಿ ಸಲ್ಮಾನ್‌ ಫಾರಿಷ್‌ (21), ಜಪ್ಪಿ ಎಂ. ಆರ್‌. ಭಟ್‌ ಲೇನಿನ ಮಹಮ್ಮದ್‌ ಸಿನಾನ್‌ (19), ಮಹಾಂಕಾಳಿ ಪಡುವಿನ ಮಹಮ್ಮದ್‌ ಅರ್ಫಾಝ್ (27), ಮದನಿನಗರ ಶಾಂತಿಬಾಗ್‌ನ ನೌಫಾಲ್‌ ಯಾನೆ ಕಿಡ್ನಿ ನೌಫಾಲ್‌ (20), ಅಡ್ಯಾರು ಕೆಂಪುಗುಡ್ಡೆ ಕಣ್ಣೂರಿನ ಮಹಮ್ಮದ್‌ ರಫೀಜ್‌ ಯಾನೆ ಅಫ್ರೀದ್‌ (20) ಹಾಗೂ ಇಬ್ಬರು ಬಾಲಕರು ಬಂಧಿತರು.

ಇವರ ವಿರುದ್ಧ ಬಸ್ಸಿನ ಒಳಗೆ ನುಗ್ಗಿ ದಾಂಧಲೆ, ಕಲ್ಲು ತೂರಾಟ, ಭಯದ ವಾತಾವರಣ, ಕೊಲೆ ಯತ್ನ, ಮಾನಭಂಗ ಯತ್ನ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕ್ಷುಲ್ಲಕ ವಿಚಾರ ಕಾರಣ: ಮಂಗಳೂರಿನಿಂದ ಕೊಣಾಜೆ ಕಡೆಗೆ ತೆರಳುತ್ತಿದ್ದಕಾರು ಹಾಗೂ ಜಪ್ಪು ನಿವಾಸಿಗಳಿದ್ದ ಸ್ಕೂಟರ್‌ ನಡುವೆ ಓವರ್‌ ಟೇಕ್‌ ಮಾಡುವ ವಿಚಾರವಾಗಿ ವಾಗ್ವಾದ ನಡೆದಿತ್ತು. ಈ ಸಂದರ್ಭ ಹೊಡೆದಾಟ ನಡೆದಿತ್ತು. ರ್ಯಾಲಿಯಿಂದ ವಾಪಸಾಗುತ್ತಿದ್ದ ಬಸ್ಸಿನಲ್ಲಿದ್ದ ಯುವಕರ ತಂಡ ಘರ್ಷಣೆ ತಡೆಯಲು ಯತ್ನಿಸಿದಾಗ ಗುಂಪೊಂದು ಬಸ್ಸು ಹಾಗೂ ಕಾರಿಗೆ ಕಲ್ಲು ತೂರಾಟ ನಡೆಸಿ ಮಹಿಳೆಯರ ಮೇಲೆ ಕೈ ಮಾಡಿತ್ತು. ಗಾಯಗೊಂಡಿರುವ ನಾಲ್ವರು ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ಬಸ್ಸು ಹಾಗೂ ಒಂದು ಕಾರಿಗೆ ಹಾನಿಯಾಗಿತ್ತು.

ಬಂದೋಬಸ್ತು: ಸ್ಥಳ‌ದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಮೂವರು ಇನ್‌ಸ್ಪೆಕ್ಟರ್‌ಗಳು, 3 ಪಿಸಿಆರ್‌ ವಾಹನಗಳು ಸ್ಥಳದಲ್ಲಿವೆ.’

Advertisement

ಘಟನೆ ದುರದೃಷ್ಟಕರ: ಸಚಿವ ಯು.ಟಿ. ಖಾದರ್‌
ಮಂಗಳೂರು: ದೇರಳಕಟ್ಟೆ ಸಮೀಪದ ಮದನಿ ನಗರದಲ್ಲಿ ಶನಿವಾರ ವಾಹನ ಳಿಗೆ ಕಲ್ಲು ತೂರಾಟ ಮಾಡಿರುವ ಘಟನೆ ದುರದೃಷ್ಟಕರ. ಇದರ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ .  ಘಟನೆಯಲ್ಲಿ ಎರಡೂ ಕಡೆಯವರು ಗಾಯಗೊಂಡಿದ್ದಾರೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ನೈಜ ಆರೋಪಿಗಳ ಬಂಧನಕ್ಕೆ ಶ್ರಮಿಸುತ್ತಿದ್ದಾರೆ. ಬಿಜೆಪಿಯವರು ಈ ಘಟನೆಯನ್ನು ಚುನಾವಣ ಲಾಭಕ್ಕೆ ಬಳಸಿಕೊಳ್ಳುತ್ತಿದ್ದು, ಇದು ಅವರಿಗೆ ಶೋಭೆ ತರುವುದಿಲ್ಲ. ಸೋಲಿನ ಭೀತಿಯಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ. ಘಟನೆಯನ್ನು ಶಮನಗೊಳಿಸಿ ಶಾಂತಿ ಕಾಪಾಡಲು ಬಿಜೆಪಿಯವರು ಶ್ರಮಿಸ ಬೇಕಿತ್ತು. ಆದರೆ ಹಾಗೆ ಮಾಡದಿರುವುದು ಖಂಡನೀಯ. ಘಟನೆಗೆ ಸಂಬಂಧಿಸಿ ತನ್ನ ಮೇಲೆ ಆರೋಪ ಮಾಡಿರುವುದನ್ನು ಕ್ಷೇತ್ರದ ಜನರು ನಂಬುವುದಿಲ್ಲ ಎಂಬ ವಿಶ್ವಾಸ ತನಗಿದೆ ಎಂದು ಯು.ಟಿ. ಖಾದರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next