ಮಾದನ ಹಿಪ್ಪರಿ: ಸಮೀಪದ ದರ್ಗಾಶಿರೂರ ಗ್ರಾಮದಲ್ಲಿ ಡೊಂಬರ ಜನಾಂಗದವರು ಶವ ಹೂಳಲು ಸ್ಮಶಾನ ಭೂಮಿ ಇಲ್ಲದ ಕಾರಣ ಮಾದನ ಹಿಪ್ಪರಗಿ-ಆಳಂದ ರಸ್ತೆ ಮೇಲೆ ಶವವಿಟ್ಟು ಪ್ರತಿಭಟನೆ ನಡೆಸಿದರು.
ದರ್ಗಾಶಿರೂರ ಗ್ರಾಮದ ರೂಪಾ ಶಂಕರ ಶಿಂದೆ (45) ಶುಕ್ರವಾರ ನಿಧನರಾಗಿದ್ದರು. ಸುಮಾರು
ಐದಾರು ವರ್ಷಗಳಿಂದ ಸ್ಮಶಾನ ಭೂಮಿಗಾಗಿ ಹೋರಾಟ ಮಾಡುತ್ತ ಬಂದರೂ ಅಧಿಕಾರಿಗಳು ಮನವಿಗೆ ಸ್ಪಂದಿಸುತ್ತಿಲ್ಲ. ಈ ಹಿಂದೆ ಅವರಲ್ಲಿ ಯಾರಾದರೂ ಸತ್ತರೆ ಗ್ರಾಮದ ಕೆಲವರು ಹೊಲಗಳ ಬದುವಿನಲ್ಲಿ ಹೂಳುತ್ತ ಬಂದಿದ್ದರು. ಹೊಲಗಳ ಮಾಲೀಕರು ಇದಕ್ಕೆ ತಡೆಯೊಡ್ಡಿದರು. ನಂತರ ದಲಿತರ ಸ್ಮಶಾನ ಭೂಮಿಯಲ್ಲಿ ಶವಸಂಸ್ಕಾರ ಮಾಡಲಾಗುತ್ತಿತ್ತು. ಈಗ ಅದಕ್ಕು ತಡೆಯೊಡ್ಡಿದ್ದರಿಂದ ಶವವನ್ನು ರಸ್ತೆ ಮೇಲಿಟ್ಟು ಪ್ರತಿಭಟನೆ ನಡೆಸಿದರು.
ಸುಮಾರು ಒಂದು ತಾಸು ಆಳಂದ-ಸೊಲ್ಲಾಪುರ, ಅಕ್ಕಲಕೋಟ- ಸೊಲ್ಲಾಪುರಕ್ಕೆ ಹೋಗಿಬರುವ ಸಾರಿಗೆ ಸಂಸ್ಥೆ ಬಸ್ಸುಗಳು, ಲಾರಿಗಳು ರಸ್ತೆ ಮೇಲೆ ನಿಂತಿದ್ದವು. ಸ್ಥಳಕ್ಕೆ ನಿಂಬಾರಗಾ ಪೊಲೀಸ್ ಠಾಣೆ ಪಿಎಸ್‌ಐ ಸುರೇಶಕುಮಾರ, ಮಾದನ ಹಿಪ್ಪರಗಿ ಪೊಲೀಸ್ ಠಾಣೆ ಎಎಸ್‌ಐ ಮತ್ತು ಮಾದನ ಹಿಪ್ಪರಗಿ ನಾಡ ಕಾರ್ಯಾಲಯದ ಕಂದಾಯ ನೀರಿಕ್ಷಕ ಪ್ರಭುಲಿಂಗ ತಟ್ಟೆ ಸ್ಥಳಕ್ಕೆ ದೌಡಾಯಿಸಿ ಪ್ರತಿಭನಕಾರರನ್ನು ಮಾತನಾಡಿಸಿದರು.
ಸಮಸ್ಯೆ ಆಲಿಸಿದ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ರಸ್ತೆ ತಡೆ ತೆರವುಗೊಳಿಸಿದರು. ನಂತರ ದರ್ಗಾಶಿರೂರ ಗ್ರಾಮಕ್ಕೆ ಮೂರು ಎಕರೆ ಜಮೀನು ನೀಡುವ ಪ್ರಸ್ತಾವನೆ ಸಹಾಯಕ ಆಯುಕ್ತರ ಕಚೇರಿಯಲ್ಲಿದೆ. ಇದಕ್ಕೆ ಆಯುಕ್ತರ ಸಹಿ ಆಗುವುದಷ್ಟೇ ಬಾಕಿ ಇದೆ. ಆದ್ದರಿಂದ ಇದೊಂದು ಸಾರಿ ದಲಿತರ ಸ್ಮಶಾನ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಬೇಕು ಎಂದು ದಲಿತ ಮುಖಂಡರ ಮನವೊಲಿಸಿದರು. ಗ್ರಾಮದ ಸಾಮಾಜಿಕ ಕಾರ್ಯಕರ್ತ ರಾಜಕುಮಾರ ಮುಲಗೆ ಡೊಂಬರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.