ದಾವಣಗೆರೆ: ಇಡೀ ಜಗತ್ತೇ ಗೌರವಿಸುವ ಮೇಡಂ ಕ್ಯೂರಿ ಶ್ರೇಷ್ಠ ವಿಜ್ಞಾನಿ, ಮಹಾನ್ ಮಾನವತಾವಾದಿ, ಸಮಾಜಮುಖೀ ಎಂದು ಬಳ್ಳಾರಿಯ ಉಪನ್ಯಾಸಕಿ ಡಾ| ಸುಚೇತ ಪೈ ಬಣ್ಣಿಸಿದ್ದಾರೆ.
ಶನಿವಾರ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಸೇಂಟ್‌ಪಾಲ್ಸ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಮೇಡಂ ಮೇರಿ ಕ್ಯೂರಿಯವರ 84ನೇ ಸ್ಮರಣೆ
ದಿನಾಚರಣೆಯಲ್ಲಿ ಮಾತನಾಡಿದ ಅವರು, ತಮ್ಮ ಪತಿ ಕ್ಯೂರಿಯೊಂದಿಗೆ ಅನೇಕ ಸಂಶೋಧನೆ ನಡೆಸಿ, ಇಡೀ ಮಾನವಕುಲಕ್ಕೆ ಮೇರಿ ಮಹತ್ತರ ಕಾಣಿಕೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.
ಮೂಲತಃ ವಿಜ್ಞಾನಿಯಾಗಿದ್ದರೂ ಮೇಡಂ ಮೇರಿ ಕ್ಯೂರಿ ಪ್ರಯೋಗಾಲಯಕ್ಕೆ ಮಾತ್ರವೇ ಸೀಮಿತವಾಗದೆ ಸಮಾಜದ ಏಳಿಗೆಗೆ ಶ್ರಮಿಸಿದರು. ಸುಧೀರ್ಘ ಸಂಶೋಧನೆಯ ಫಲವಾಗಿ ಕಂಡು ಹಿಡಿದಂತಹ ರೇಡಿಯಂನ ಹಕ್ಕುದಾರಿಕೆಯನ್ನ ಅವರು ಪಡೆದುಕೊಳ್ಳಲೇ ಇಲ್ಲ. ಅದು ಪ್ರಕೃತಿಯಿಂದ ದೊರೆತಿರುವುದು. ಹಾಗಾಗಿ ಅದನ್ನು ಮನಕುಲಕ್ಕೆ ಉಪಯೋಗಿಸಿ ಎಂಬುದಾಗಿ ಹೇಳಿದಂತಹ ಮಹಾನ್ ಮಾನವತಾವಾದಿ, ಸಮಾಜಮುಖೀ ಚಿಂತಕಿ ಎಂದು ತಿಳಿಸಿದರು.
ಎಐಎಂಎಸ್‌ಎಸ್ ಜಿಲ್ಲಾ ಸಂಚಾಲಕಿ ಜ್ಯೋತಿ ಕುಕ್ಕುವಾಡ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲೂ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ, ಶೋಷಣೆ, ಕಿರುಕುಳ ನಡೆಯುತ್ತಲೆ ಇವೆ. ಚಿಕ್ಕ ಮಕ್ಕಳು, ವಿದ್ಯಾರ್ಥಿನಿಯರು, ಯುವತಿಯರು, ವಯೋವೃದ್ಧೆಯರ ಮೇಲೂ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಸರ್ಕಾರ ಅಗತ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮೇಡಂ ಮೇರಿ ಕ್ಯೂರಿಯವರಂತಹ ಮಹಾನ್ ಚೇತನಗಳ ಸ್ಫೂರ್ತಿಯುತ ಜೀವನ, ಬದ್ಧತೆ, ಸಾಮಾಜಿಕ ಕಳಕಳಿಯಂತಹ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ. ಇಡೀ ಕೆಟ್ಟ ವ್ಯವಸ್ಥೆಯ ವಿರುದ್ಧ ಮಹಿಳೆಯರು ಸಂಘಟಿತ ಹೋರಾಟ ನಡೆಸಬೇಕಿದೆ ಎಂದರು.
ಸೇಂಟ್‌ಪಾಲ್ಸ್ ಪಿಯು ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಭಾರತಿ, ಕಾಲೇಜು ಆಡಳಿತಾಧಿಕಾರಿ ಸಿಸ್ಟರ್ ಅಲೆನಾ, ಪ್ರಾಚಾರ್ಯ ಮೇಘನಾಥ್ ಇತರರು ಇದ್ದರು.