Advertisement

ಮಡಾಮಕ್ಕಿಯ ಬೆಪ್ಡೆ: ರಸ್ತೆ ಇದ್ದರೂ ಮರೀಚಿಕೆಯಾದ ಬಸ್‌

12:14 AM Jun 20, 2019 | Sriram |

ಗೋಳಿಯಂಗಡಿ: ಕುಂದಾಪುರ ತಾಲೂಕಿನ ತೀರಾ ಗ್ರಾಮೀಣ ಪ್ರದೇಶವಾಗಿರುವ ಮಡಾಮಕ್ಕಿಯ ಬೆಪ್ಡೆ ಎನ್ನುವ ಊರಿಗೆ ಇನ್ನೂ ಯಾವುದೇ ಸಾರ್ವಜನಿಕ ಸಂಪರ್ಕ ಸಾರಿಗೆ ವ್ಯವಸ್ಥೆಯೇ ಇಲ್ಲ. ಉತ್ತಮವಾದ ರಸ್ತೆ ಸೌಕರ್ಯವಿದ್ದರೂ, ಬಸ್‌ ಬೇಡಿಕೆ ಮಾತ್ರ ಈ ವರೆಗೆ ಕೇವಲ ಕನಸಾಗಿಯೇ ಉಳಿದಿದೆ.

Advertisement

ಮಡಾಮಕ್ಕಿ ಗ್ರಾಮ ಈಗ ಹೆಬ್ರಿ ತಾಲೂಕಿನ ಭಾಗವಾದರೂ, ಇನ್ನೂ ಕುಂದಾಪುರ ತಾಲೂಕಿನೊಂದಿಗೆಯೇ ಹೆಚ್ಚಿನ ನಂಟನ್ನು ಬೆಸೆದುಕೊಂಡಿದೆ. ಇಲ್ಲಿನ ಶೇಡಿಮನೆ ಸಮೀಪದ ಬೆಪ್ಡೆಗೆ ಹಲವು ದಶಕಗಳಿಂದ ಈವರೆಗೆ ಬಸ್‌ ಸೌಕರ್ಯವಿಲ್ಲದೆ ಜನ ಆರೇಳು ಕಿ.ಮೀ. ನಡೆದುಕೊಂಡೇ ಬಸ್‌ ಹತ್ತಬೇಕಾದ ಸ್ಥಿತಿಯಿದೆ. ಹಲವು ವರ್ಷಗಳಿಂದ ಇಲ್ಲಿನ ಜನರು ಬಸ್‌ಗಾಗಿ ಬೇಡಿಕೆ ಇಡುತ್ತಿದ್ದರೂ ಇನ್ನೂ ಈಡೇರಿಲ್ಲ.

ಅಂತರವೆಷ್ಟು?
ಬೆಪ್ಡೆಯ ಜನರಿಗೆ ಬಸ್‌ಗಾಗಿ ಆರ್ಡಿಗೆ 8 ಕಿ.ಮೀ., ಗೋಳಿಯಂಗಡಿಗೆ 16 ಕಿ.ಮೀ. ಹಾಗೂ ಹೆಬ್ರಿಗೆ 16 ಕಿ.ಮೀ. ದೂರ ಬರಬೇಕಾಗಿದೆ. ಶೇಡಿಮನೆಗೆ ಇಲ್ಲಿಂದ 6 ಕಿ.ಮೀ. ದೂರವಿದೆ. ಜತೆಗೆ 3.5 ಕಿ.ಮೀ. ದೂರದ ಗುಡ್ಡೆಯಂಗಡಿಗೆ ತೆರಳಿದರೆ ಬಸ್‌ ಸಿಗುತ್ತದೆ.

ಮನವಿ ಸಲ್ಲಿಸಲಾಗಿತ್ತು
2 ವರ್ಷಗಳ ಹಿಂದೊಮ್ಮೆ ಈ ಭಾಗದ ಸಾರ್ವಜನಿಕರು, ಸಂಘ- ಸಂಸ್ಥೆಗಳೆಲ್ಲ ಒಟ್ಟಾಗಿ ಸಹಿ ಅಭಿಯಾನದ ಮೂಲಕ ಬಸ್‌ ಸೌಕರ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಯಿಟ್ಟುಕೊಂಡು ಪಂಚಾಯñಗೆ ಹಾಗೂ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರು. ಆಗ ಬಸ್‌ ವ್ಯವಸ್ಥೆ ಆರಂಭಿಸುವ ಸೂಚನೆಯೂ ಸಿಕ್ಕಿತ್ತು. ಆದರೆ ಆ ಬಳಿಕ ಈ ಪ್ರಸ್ತಾವ ಅಲ್ಲಿಗೆ ಬಿದ್ದು ಹೋಯಿತು ಎನ್ನುವುದು ಬೆಪ್ಡೆಯ ಉಷಾ ಮಾತು.

ಇನ್ನಾದರೂ ಸಾರಿಗೆ ಇಲಾಖೆ ಈ ಬಗ್ಗೆ ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎನ್ನುವುದ ಇಲ್ಲಿನ ನಾಗರಿಕರ ಅಭಿಪ್ರಾಯ.

Advertisement

45 ನಿಮಿಷ ನಡಿಗೆ
ಬೆಪ್ಡೆಯಲ್ಲಿ ಬಡಾ ಬೆಪ್ಡೆ ಹಾಗೂ ತೆಂಕ ಬೆಪ್ಡೆ ಎನ್ನುವ ಎರಡು ಊರುಗಳಿವೆ. ಸುಮಾರು 75 ರಿಂದ 80 ಮನಗಳಿವೆ. ಇಲ್ಲಿ ಕೇವಲ ಕಿ.ಪ್ರಾ.ಶಾಲೆ ಮಾತ್ರವಿದೆ. ಇಲ್ಲಿಂದ ಆರ್ಡಿ, ಹೆಬ್ರಿ, ಗೋಳಿಯಂಗಡಿಯ ಶಾಲಾ – ಕಾಲೇಜುಗಳಿಗೆ ತೆರಳುವ ಸುಮಾರು 30-35 ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲ 4-5 ಕಿ.ಮೀ. ನಡೆದುಕೊಂಡೇ ಹೋಗಬೇಕಾಗಿದೆ. ಇಲ್ಲದಿದ್ದರೆ ರಿಕ್ಷಾ ಬಾಡಿಗೆ ಮಾಡಿಕೊಂಡು ಹೋಗಬೇಕು. 30 ನಿಮಿಷ, 45 ನಿಮಿಷ ಬೆಳಗ್ಗೆ ಹಾಗೂ ಸಂಜೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದು, ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

2 ಹೊತ್ತು ಬಸ್‌ ಬರಲಿ
ಬೆಳಗ್ಗೆ ಮಕ್ಕಳು ಶಾಲೆಗೆ ಹೋಗುವಾಗ ಹಾಗೂ ಸಂಜೆ ವಾಪಾಸು ಬರುವಾಗ 2 ಹೊತ್ತಾದರೂ ಈ ಊರಿಗೆ ಬಸ್‌ ಬರಲಿ. ಈಗಾಗಲೇ ಕುಂದಾಪುರದಿಂದ ಶೇಡಿಮನೆಷುವರೆಗೆ ಹಲವು ಬಸ್‌ಗಳು ನಿತ್ಯ ಸಂಚರಿಸುತ್ತವೆ. ಅದನ್ನೇ ಬೆಪ್ಡೆಯವರೆಗೆ ಮುಂದುವರಿಸಿದರೆ ನಮ್ಮೂರಿಗೆ ಬಹಳಷ್ಟು ಅನುಕೂಲವಾಗಲಿದೆ. ಈ ಬಗ್ಗೆ ಯಾರಾದರೊಂದು ಮುತುವರ್ಜಿ ವಹಿಸಿ ಮಾಡಿಕೊಡಲಿ.
-ಶ್ರೀನಿವಾಸ ಶೆಟ್ಟಿ, ಬೆಪ್ಡೆ

ಪ್ರಯತ್ನಿಸಲಾಗುವುದು
ಈಗ ಶೇಡಿಮನೆಯವರೆಗೆ ಬಸ್‌ ಹೋಗುತ್ತದೆ. ಮಡಾಮಕ್ಕಿಯ ಬೆಪ್ಡೆಗೆ ಬಸ್‌ ಸೌಕರ್ಯ ಕಲ್ಪಿಸುವ ಕುರಿತಂತೆ ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುವುದು. ಸದ್ಯ ಯಾವುದೇ ಹೊಸ ಯೋಜನೆಗಳಿಲ್ಲ. ಆದರೆ ಈ ಬಗ್ಗೆ ವರದಿ ತಯಾರಿಸಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗುವುದು.
-ರಾಜೇಶ್‌ ಮೊಗವೀರ,
ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next