Advertisement

ಭೇದ ಮಾಡಲ್ಲ; ಓಲೈಕೆಗೆ ಹೋಗಲ್ಲ

03:50 AM Mar 26, 2017 | Team Udayavani |

ಲಕ್ನೋ/ಗೋರಖ್‌ಪುರ: “ಜಾತಿ, ಧರ್ಮ ಅಥವಾ ಲಿಂಗದ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಎಲ್ಲರ ಅಭಿವೃದ್ಧಿಯೇ ನನ್ನ ಹೊಣೆ. ಹಾಗಂತ, ಯಾರನ್ನೂ ಓಲೈಕೆಯೂ ಮಾಡುವುದಿಲ್ಲ,’ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

Advertisement

ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮದೇ ಕ್ಷೇತ್ರವಾದ ಗೋರಖ್‌ಪುರದಲ್ಲಿ ಶನಿವಾರ ಮೊದಲ ಬಾರಿಗೆ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. “ನಾವು ಉತ್ತರಪ್ರದೇಶದ 22 ಕೋಟಿ ಮಂದಿಗಾಗಿ ಕೆಲಸ ಮಾಡುತ್ತೇವೆ. ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುತ್ತೇವೆ. ರೈತರು, ಕಾರ್ಮಿಕರಿಗೆ ಉತ್ತಮ ವಾತಾವರಣ ಕಲ್ಪಿಸುತ್ತೇವೆ. ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸುತ್ತೇವೆ. ಬಿಜೆಪಿಯ ಪ್ರಣಾಳಿಕೆಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುತ್ತೇವೆ. ನನ್ನ ಆಡಳಿತದಲ್ಲಿ ಗೂಂಡಾಗಿರಿ ಇರುವುದಿಲ್ಲ. ಮಧ್ಯರಾತ್ರಿಯಲ್ಲೂ ಮಹಿಳೆ ಯಾರ ಭಯವೂ ಇಲ್ಲದೆ ನಡೆದಾಡುವಂತೆ ಮಾಡುತ್ತೇವೆೆ’ ಎಂದಿದ್ದಾರೆ.

ಕಸಾಯಿಖಾನೆ ಬಂದ್‌: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದಂತೆ, ರಾಜ್ಯಾದ್ಯಂತ ಇರುವ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸುತ್ತೇನೆ ಎಂದೂ ಯೋಗಿ ಹೇಳಿದ್ದಾರೆ. ಇದೇ ವೇಳೆ, ವಿವಾದಕ್ಕೆ ಕಾರಣವಾಗಿರುವ ರೋಮಿಯೋ-ನಿಗ್ರಹ ಪಡೆಯನ್ನು ಶ್ಲಾ ಸಿರುವ ಯೋಗಿ, ಇದು ಮಹಿಳೆಯರ ಸುರಕ್ಷತೆಗಾಗಿ ಕೆಲಸ ಮಾಡುತ್ತದೆ ಎಂದಿದ್ದಾರೆ. ಅಲ್ಲದೆ, ಪರಸ್ಪರ ಸಮ್ಮತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತ ಜೋಡಿಗೆ ತೊಂದರೆ ಕೊಡದಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದೂ ಹೇಳಿದ್ದಾರೆ.

1 ಲಕ್ಷ ನೆರವು: ಕೈಲಾಶ್‌ ಮಾನಸಸರೋವರ ಯಾತ್ರೆ ಕೈಗೊಳ್ಳುವ ಮಂದಿಗೆ 1 ಲಕ್ಷ ರೂ. ನೆರವು ನೀಡುವುದಾಗಿಯೂ ಸಿಎಂ ಯೋಗಿ ಘೋಷಿಸಿದ್ದಾರೆ. ಜತೆಗೆ, ಲಕ್ನೋ, ಗಾಜಿಯಾಬಾದ್‌ ಅಥವಾ ನೋಯ್ಡಾದಲ್ಲಿ ಕೈಲಾಶ್‌ ಮಾನಸಸರೋವರ ಭವನ ನಿರ್ಮಿಸುವ ಭರವಸೆಯನ್ನೂ ಅವರು ನೀಡಿದ್ದಾರೆ.

ಸೆಲ್ಫಿ ತೆಗೆದ ಪೊಲೀಸರ ಅಮಾನತು: ಸಾಮೂಹಿಕ ಅತ್ಯಾಚಾರ ಮತ್ತು ಆ್ಯಸಿಡ್‌ ದಾಳಿ ಸಂತ್ರಸ್ತೆಯ ಮುಂದೆಯೇ ಸೆಲ್ಫಿ ಕ್ಲಿಕ್ಕಿಸಿಕೊಂಡ ಮೂವರು ಮಹಿಳಾ ಪೇದೆಗಳನ್ನು ಅಮಾನತು ಮಾಡಿ ಉತ್ತರಪ್ರದೇಶ ಸರಕಾರ ಶನಿವಾರ ಆದೇಶಿಸಿದೆ. ಸಂತ್ರಸ್ತೆಯು ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆಯ ಭದ್ರತೆಗೆ ನಿಯೋಜಿಸಲಾಗಿದ್ದ ಪೇದೆಗಳು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

Advertisement

ಐಪಿಎಸ್‌ ಅಧಿಕಾರಿ ಅಮಾನತು: ಯೋಗಿ ಆದಿತ್ಯನಾಥ್‌ ಸರಕಾರವು ನಿರ್ದಿಷ್ಟ ಸಮುದಾಯ(ಯಾದವ)ದ ಪೊಲೀಸ ರನ್ನು ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡುತ್ತಿದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ ಐಪಿಎಸ್‌ ಅಧಿಕಾರಿ ಹಿಮಾನುÏ ಕುಮಾರ್‌ರನ್ನು ಶನಿವಾರ ಅಮಾನತು ಮಾಡಲಾಗಿದೆ. ಅಶಿಸ್ತಿನ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿರುವುದಾಗಿ ಇಲಾಖೆ ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿ ಮತ್ತೆ ಟ್ವೀಟ್‌ ಮಾಡಿರುವ ಕುಮಾರ್‌, “ಸತ್ಯ ಗೆಲ್ಲಲೇಬೇಕು’ ಎಂದಿದ್ದಾರೆ.

ಮೂವರು ಸಸ್ಪೆಂಡ್‌: ಇನ್ನೊಂದೆಡೆ, ಗಾಜಿಯಾಬಾದ್‌ನಲ್ಲಿ “ರೋಮಿಯೋ ನಿಗ್ರಹ’ದ ಹೆಸರಿನಲ್ಲಿ ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದುಕೊಂಡ ಮೂವರು ಪೊಲೀಸ ರನ್ನು ಶನಿವಾರ ಸಸ್ಪೆಂಡ್‌ ಮಾಡಲಾಗಿದೆ. ಪೊಲೀಸರು ಜೋಡಿಯನ್ನು ಪಿಸಿಆರ್‌ ವ್ಯಾನ್‌ನಲ್ಲಿ ಕರೆದೊಯ್ಯುವಾಗ, ಅದರೊಳಗೆ ಮಹಿಳಾ ಪೇದೆ ಇರಲಿಲ್ಲ. ಹೀಗಾಗಿ, ನಿಯಮ ಉಲ್ಲಂ ಸಿದ ಆರೋಪದಲ್ಲಿ ಅವರನ್ನು ಅಮಾನತು ಮಾಡಿ ರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

“ನಾವು ಗಂಗಾಜಲ ಸಿಂಪಡಿಸ್ತೇವೆ’
“2020ರಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದಾಗ ಅಗ್ನಿಶಾಮಕದಳವು ಸಿಎಂ ನಿವಾಸದ ಮೇಲೆ ಗಂಗಾಜಲ ಸಿಂಪಡಿಸಲಿದೆ.’ ಉತ್ತರಪ್ರದೇಶ ಸಿಎಂ ನಿವಾಸದಲ್ಲಿ ನಡೆದ ಶುದ್ಧೀಕರಣ ಪ್ರಕ್ರಿಯೆಯನ್ನು ಮಾಜಿ ಸಿಎಂ ಅಖೀಲೇಶ್‌ ಯಾದವ್‌ ವ್ಯಂಗ್ಯವಾಡಿದ ಪರಿಯಿದು. ಲಕ್ನೋದಲ್ಲಿ ಶನಿವಾರ ನಡೆದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಖೀಲೇಶ್‌ ಈ ಮಾತುಗಳನ್ನಾಡಿದ್ದಾರೆ. ಜತೆಗೆ, “ಮನೆ ಶುದ್ಧೀಕರಣ ಮಾಡಿದ್ದಕ್ಕೆ ಆಕ್ಷೇಪವಿಲ್ಲ. ಅಲ್ಲಿ ಕೆಲವು ನವಿಲುಗಳಿವೆ. ಅವುಗ ಳನ್ನು ಸುರಕ್ಷಿತವಾಗಿ ನೋಡಿ ಕೊಂಡರೆ ಸಾಕು’ ಎಂದೂ ಹೇಳಿದ್ದಾರೆ ಅಖೀಲೇಶ್‌. ಪಕ್ಷ ಸೋಲುಂಡ ಬಳಿಕ ನಡೆದ ಮೊದಲ ಕಾರ್ಯಕಾರಿಣಿಯಲ್ಲಿ ಅಖೀಲೇಶ್‌ವೊಬ್ಬರೇ ಸಿಎಂ ಯೋಗಿಯನ್ನು ತರಾಟೆಗೆ ತೆಗೆದುಕೊಂಡರು. ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌, ಚಿಕ್ಕಪ್ಪ ಶಿವಪಾಲ್‌ ಯಾದವ್‌, ಹಿರಿಯ ನಾಯಕ ಅಜಂ ಖಾನ್‌ ಗೈರಾಗಿದ್ದರು. ಇದೇ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್‌ ಅವರು ಅಖೀಲೇಶ್‌ ಮತ್ತು ರಾಹುಲ್‌ ವಯಸ್ಸಿನ ಕುರಿತು ಆಡಿದ್ದ ಮಾತುಗಳಿಗೆ ತಿರುಗೇಟು ನೀಡಿದ ಅಖೀಲೇಶ್‌, “ವಯಸ್ಸಿನಲ್ಲಿ ಯೋಗಿ ನನಗಿಂತ ಒಂದು ವರ್ಷ ದೊಡ್ಡವರಿರಬಹುದು. ಆದರೆ, ಕೆಲಸದಲ್ಲಿ ಅವರು ನನಗಿಂತ ಹಲವು ವರ್ಷ ಹಿಂದಿದ್ದಾರೆ,’ ಎಂದರು. ಅಲ್ಲದೆ, ಒಂದು ನಿರ್ದಿಷ್ಟ ಜಾತಿಯ ಪೊಲೀಸರನ್ನು ಸಿಎಂ ಯೋಗಿ ವರ್ಗಾವಣೆ ಮಾಡುತ್ತಿದ್ದಾರೆ ಎಂದೂ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next