Advertisement
ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಕೆಲಸ ಸೇರಿದಂತೆ ಇನ್ನಿತರೆ ಕೆಲಸಗಳು ಭರದಿಂದಲೇ ಸಾಗುತ್ತಿವೆ. ಒಂದು ಮೂಲದ ಪ್ರಕಾರ ಚಿತ್ರದ ಅವಧಿ ಮೂರು ಗಂಟೆಗೂ ಹೆಚ್ಚು ಕಾಲ ಬರುತ್ತಿದೆ ಎನ್ನಲಾಗಿದ್ದು, ಅದನ್ನು ಇನ್ನಷ್ಟು ಕಡಿಮೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಚಿತ್ರದ ಅವಧಿಯನ್ನು ಸುಮಾರು 2.30 ಗಂಟೆಗೆ ಇಳಿಸಬೇಕೆಂಬ ನಿಟ್ಟಿನಲ್ಲಿ ಯಾವ ದೃಶ್ಯಗಳಿರಬೇಕು, ಯಾವೆಲ್ಲಾ ಸಂಭಾಷಣೆ ಬೇಕು, ಬೇಡ ಎಂಬ ಬಗ್ಗೆಯೂ ಬಿರುಸಿನ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
Related Articles
Advertisement
ಹಾಗೆ ನೋಡಿದರೆ, ದರ್ಶನ್ “ರಾಬರ್ಟ್’ಗಾಗಿ ಗಡ್ಡ ಬಿಟ್ಟಿದ್ದು, ಅದನ್ನು ತೆಗೆಯುವವರೆಗೂ ಚಿತ್ರ ಶುರುವಾದಂತೆ ಕಾಣಲ್ಲ. ಚಿತ್ರದುರ್ಗ ಕೋಟೆಯನ್ನು ಆಳಿದ 13 ಜನ ಪಾಳೇಗಾರರ ಪೈಕಿ ಒಬ್ಬ ಮದಕರಿ ನಾಯಕ ಮಾತ್ರ ಗಡ್ಡ ಬಿಟ್ಟಿದ್ದರು ಎಂಬ ಮಾಹಿತಿ ಇದೆ. ಅವರನ್ನು ಗಡ್ಡದ ಮದಕರಿನಾಯಕ ಎಂದೇ ಕರೆಯಲಾಗುತ್ತಿತ್ತು. ಆದರೆ, “ಗಂಡುಗಲಿ ಮದಕರಿ ನಾಯಕ’ನಿಗೆ ಮೀಸೆಯೇ ಮುಖ್ಯ.
ದರ್ಶನ್ ಗಡ್ಡ ತೆಗೆದ ನಂತರವಷ್ಟೇ ಚಿತ್ರೀಕರಣ. ಆದರೂ, ಚಿತ್ರತಂಡ ಹೈದರಾಲಿ ದೃಶ್ಯಗಳನ್ನು ಚಿತ್ರೀಕರಿಸುವ ಯೋಜನೆಯನ್ನೂ ಹಾಕಿಕೊಂಡಿದೆಯಾದರೂ, ಆ ದೃಶ್ಯದಲ್ಲೂ “ಗಂಡುಗಲಿ ಮದಕರಿ ನಾಯಕ’ ಇರುತ್ತಾರೆ ಎನ್ನಲಾಗಿದೆ. ಆದರೆ, ಆ ದೃಶ್ಯಕ್ಕೆ ದರ್ಶನ್ ಅವರ “ಗಡ್ಡ’ ಅಡ್ಡಿಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಹೈದರಾಲಿ ದೃಶ್ಯಗಳನ್ನು ಚಿತ್ರೀಕರಿಸುವ ಸಲುವಾಗಿ, ಹೈದರಾಬಾದ್‌ನ ರಾಮೋಜಿ ಫಿಲ್ಮ್ಸಿಟಿಗೆ ಭೇಟಿ ಕೊಟ್ಟು ಅರಮನೆ ಸೆಟ್ ನೋಡಿ ಬಂದಿದ್ದಾರೆ.
ಅದರೊಂದಿಗೆ ಮುಂಬೈಗೂ ಹೋಗಿ ಈ ಹಿಂದೆ ಹಿಂದಿಯ “ಬಾಜಿರಾವ್ ಮಸ್ತಾನಿ’ ಚಿತ್ರೀಕರಣಗೊಂಡಿದ್ದ ಸೆಟ್‌ಗೂ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಅದೇನೆ ಇರಲಿ, “ಗಂಡುಗಲಿ ಮದಕರಿ ನಾಯಕ’ ಮಹತ್ವಾಕಾಂಕ್ಷೆಯ ಚಿತ್ರ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಮತ್ತೂಂದು ಬಹು ನಿರೀಕ್ಷೆಯ ಚಿತ್ರವೂ ಹೌದು. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಈ ಚಿತ್ರ ದೊಡ್ಡ ಚಾಲೆಂಜ್. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಈಗಾಗಲೇ ಚಿತ್ರಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಚಿತ್ರೀಕರಣಕ್ಕೆ ಹೋಗಲು ಅಣಿಯಾಗಿದ್ದಾರೆ. ಸ್ಕ್ರಿಪ್ಟ್ ಕೆಲಸ ಅಂತಿಮ ಹಂತದಲ್ಲಿದೆ.
ಕಳೆದ ವರ್ಷ ದರ್ಶನ್ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಈ ವರ್ಷ ಸಾಲು ಸಾಲು ಚಿತ್ರಗಳಿವೆ. “ಯಜಮಾನ’ ರಿಲೀಸ್‌ಗೆ ರೆಡಿಯಾಗಿದೆ. “ಕುರುಕ್ಷೇತ್ರ’ ಕೂಡ ಬರಲಿದೆ. ಅದರ ಬೆನ್ನ ಹಿಂದೆ “ಒಡೆಯ’ ಬಂದರೂ ಅಚ್ಚರಿ ಇಲ್ಲ. “ರಾಬರ್ಟ್’ ಕೂಡ ಅಷ್ಟೊತ್ತಿಗೆ ರೆಡಿಯಾಗುವುದು ಪಕ್ಕಾ. ಎಲ್ಲವೂ ಸರಿಯಾಗಿ ನಡೆದರೆ, “ಗಂಡುಗಲಿ ಮದಕರಿ ನಾಯಕ’ ಕೂಡ ಈ ವರ್ಷದ ಅಂತ್ಯದಲ್ಲಿ ಬಂದರೂ ಅಚ್ಚರಿ ಇಲ್ಲ. ಒಟ್ಟಾರೆ, ದರ್ಶನ್ ಅಭಿಮಾನಿಗಳು ಈ ವರ್ಷ “ಡಿಬಾಸ್ ಫಿಲ್ಮ್ ಫೆಸ್ಟಿವಲ್’ ಆಚರಿಸಿದರೆ ಅಚ್ಚರಿ ಇಲ್ಲ.