Advertisement

ಮದಕರಿ ಕನಸು ಕುರುಕ್ಷೇತ್ರ ಭವಿಷ್ಯ

12:27 AM Aug 02, 2019 | mahesh |

“ಕುರುಕ್ಷೇತ್ರ’ ಚಿತ್ರದ ಬಳಿಕ ಸೆಟ್ಟೇರಲು ಸಿದ್ಧವಾಗುತ್ತಿರುವ ಮತ್ತೂಂದು ಬಹುನಿರೀಕ್ಷಿತ ಚಿತ್ರ “ಗಂಡುಗಲಿ ಮದಕರಿನಾಯಕ’. ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರವನ್ನು ಕನ್ನಡದ ಹಿರಿಯ ನಿರ್ದೇಶಕ ಎಸ್‌.ವಿ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಈ ಚಿತ್ರದ ತಯಾರಿಯ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಪೌರಾಣಿಕ, ಐತಿಹಾಸಿಕ ಸಿನಿಮಾಗಳ ಮಹತ್ವದ ಕುರಿತು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಮಾತನಾಡಿದ್ದಾರೆ…

Advertisement

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ “ಗಂಡುಗಲಿ ಮದಕರಿನಾಯಕ’ ಚಿತ್ರ ಸೆಟ್ಟೇರಬೇಕಿತ್ತು. ಆದರೆ, ಕಾರಣಾಂತರಗಳಿಂದ ತಡವಾಗಿದೆ. ಕನ್ನಡ ಚಿತ್ರರಂಗದ ಪಾಲಿಗೆ ಇದು ಮತ್ತೂಂದು ನಿರೀಕ್ಷೆಯ ಸಿನಿಮಾ. ಒಬ್ಬ ಸ್ಟಾರ್‌ ನಟ ಈ ತರಹದ ಸಿನಿಮಾಗಳ ಕಡೆಗೆ ಆಸಕ್ತಿ ವಹಿಸುವುದು ಕೂಡಾ ಚಿತ್ರರಂಗದ ಇವತ್ತಿನ ಕಾಲಘಟ್ಟದಲ್ಲಿ ಉತ್ತಮ ಬೆಳವಣಿಗೆ. ಆ ವಿಚಾರದಲ್ಲಿ ದರ್ಶನ್‌ ಅವರ ನಿಲುವನ್ನು ಮೆಚ್ಚಬೇಕು. ಐತಿಹಾಸಿಕ, ಪೌರಾಣಿಕ ಸಿನಿಮಾಗಳ ವಿಚಾರದಲ್ಲಿ ದರ್ಶನ್‌ ತಮ್ಮದೇ ಆದ ನಿಲುವೊಂದನ್ನು ಇಟ್ಟುಕೊಂಡಿದ್ದಾರೆ. ಅದು ಆ ಸಿನಿಮಾಗಳಿಗೆ ಮೊದಲ ಆದ್ಯತೆ ಕೊಡುವುದು. ಸರತಿ ಸಾಲಿನಲ್ಲಿ ಎಷ್ಟೇ ಕಮರ್ಷಿಯಲ್‌ ಸಿನಿಮಾಗಳಿದ್ದರೂ, ಐತಿಹಾಸಿಕ, ಪೌರಾಣಿಕ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡಿ, ಡೇಟ್‌ ಕೊಡುವುದು. ಅದೇ ಕಾರಣದಿಂದ “ಕುರುಕ್ಷೇತ್ರ’ ಕೂಡಾ ಅವರು ಒಪ್ಪಿಕೊಂಡ ಕಮರ್ಷಿಯಲ್‌ ಸಿನಿಮಾಗಳಿಗಿಂತ ಬೇಗನೇ ಮುಗಿಸಿಕೊಟ್ಟರು. ಆ ನಂತರ ಬಂದ “ಮದಕರಿ’ಗೂ ಡೇಟ್‌ ಅಡೆಸ್ಟ್‌ ಮಾಡಿದ್ದಾರೆ. “ರಾಬರ್ಟ್‌’ ಜೊತೆ ಜೊತೆಗೆ ಮಾಡಲು ನಿರ್ಧರಿಸಿದ್ದಾರೆ. ಈಗ ಈ ಸಿನಿಮಾ ಸ್ವಲ್ಪ ತಡವಾಗಿದ್ದು ನಿಜ. ಹಾಗಾದರೆ, ಯಾಕೆ ಎಂಬ ಪ್ರಶ್ನೆಗೆ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಉತ್ತರಿಸಿದ್ದಾರೆ. “ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದರಿಂದ, ಕಥೆಗೆ ಸಾಕಷ್ಟು ಆಯಾಮಗಳು ಇರುತ್ತವೆ. ಎಲ್ಲಾ ಆಯಾಮಗಳಲ್ಲೂ ಚರ್ಚಿಸಿ, ಬಳಿಕ ನಾವು ಯಾವ ರೀತಿ ಚಿತ್ರದಲ್ಲಿ ಹೇಳಬೇಕು ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ಹಾಗಾಗಿ ಚಿತ್ರದ ಸ್ಕ್ರಿಪ್ಟ್ ಕೆಲಸಗಳಿಗಾಗಿಯೇ ಸಾಕಷ್ಟು ಸಮಯ ಹಿಡಿಯುತ್ತದೆ. ಇನ್ನು ಅದನ್ನು ದೃಶ್ಯರೂಪಕ್ಕೆ ತರುವಾಗಲೂ ಸಾಕಷ್ಟು ಸವಾಲುಗಳು ಎದುರಾಗುತ್ತವೆ. 1700 ಇಸವಿ ಕಥೆ ಆಗಿದ್ದರಿಂದ ಜನ-ಜೀವನ ಶೈಲಿ ಎಲ್ಲವೂ ಅಂದಿನ ಕಾಲಘಟ್ಟಕ್ಕೆ ತಕ್ಕಂತೆ ರಿ-ಕ್ರಿಯೇಟ್‌ ಮಾಡಬೇಕು. ಲೊಕೇಶನ್ಸ್‌, ಕಾಸ್ಟೂಮ್ಸ್‌, ಪಾತ್ರಗಳು, ಅದನ್ನು ನಿಭಾಯಿಸಬಲ್ಲ ಕಲಾವಿದರು ಹೀಗೆ ಪ್ರತಿಯೊಂದನ್ನು ಕಥೆಗೆ ಮ್ಯಾಚ್‌ ಆಗುವಂತೆ ಹುಡುಕಿ ಚಿತ್ರೀಕರಣ ಮಾಡಬೇಕು. ಇದೆಲ್ಲಾ ಪ್ರಕ್ರಿಯೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಅವಸರಕ್ಕೆ ಬಿದ್ದು ಇದನ್ನೆಲ್ಲ ಮಾಡಲಾಗದು’ ಎನ್ನುತ್ತಾರೆ.

ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರು ಕನ್ನಡ ಚಿತ್ರರಂಗದ ಹಿರಿಯ, ಅನುಭವಿ ನಿರ್ದೇಶಕ. ಬೇರೆ ಬೇರೆ ಜಾನರ್‌ನ ಸಿನಿಮಾಗಳನ್ನು ಮಾಡಿದ್ದಾರೆ. ಅದೇ ಅನುಭವದೊಂದಿಗೆ ಅವರು, “ಕನ್ನಡದಲ್ಲಿ ಎಲ್ಲಾ ಜಾನರ್‌ನ ಸಿನಿಮಾಗಳು ಬರಬೇಕು’ ಎನ್ನುತ್ತಾರೆ. ಜೊತೆಗೆ “ಕುರುಕ್ಷೇತ್ರ’ದಂತಹ ಪೌರಾಣಿಕ ಚಿತ್ರಗಳನ್ನು ಮಾಡುವತ್ತ ಕನ್ನಡ ಚಿತ್ರರಂಗ ಮತ್ತೆ ಆಸಕ್ತಿ ತೋರಿರುವುದು ಒಳ್ಳೆಯ ಬೆಳವಣಿಗೆ ಎನ್ನುವುದು ಸಿಂಗ್‌ ಬಾಬು ಅವರ ಮಾತು. ಈ ತರಹದ ಸಿನಿಮಾಗಳಿಂದಾಗಿ ಕನ್ನಡ ಚಿತ್ರರಂಗದ ವ್ಯಾಪ್ತಿ ಮತ್ತಷ್ಟು ವಿಸ್ತಾರವಾಗುತ್ತದೆ ಎನ್ನುತ್ತಾರೆ ಬಾಬು.

“”ಕುರುಕ್ಷೇತ್ರ’ ಚಿತ್ರ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಪ್ರಯೋಗ. ನಮ್ಮಲ್ಲಿ ಮೊದಲು ಪೌರಾಣಿಕ ಚಿತ್ರಗಳು, ಐತಿಹಾಸಿಕ ಚಿತ್ರಗಳು, ನಂತರ ಸಾಮಾಜಿಕ ಚಿತ್ರಗಳು ಅಂಥ ಚಿತ್ರರಂಗದಲ್ಲಿ ಕಾಲಕಾಲಕ್ಕೆ ಚಿತ್ರಗಳು ಕೂಡ ಬದಲಾಗುತ್ತಾ ಬಂದಿವೆ. ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿರುವುದರಿಂದ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದು.

ಇಂಥ ಚಿತ್ರಗಳು ಬರುವುದರಿಂದ, ಇದರದ್ದೇ ಆದ ಒಂದು ಪ್ರೇಕ್ಷಕ ವರ್ಗ ಕೂಡಾ ಸೃಷ್ಟಿಯಾಗುತ್ತದೆ. ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದಲೂ ಇಂಥ ಚಿತ್ರಗಳು ಮಹತ್ವ ಪಡೆಯುತ್ತವೆ. ನಾವು ಇತಿಹಾಸಗಳಲ್ಲಿ, ಕಥೆಗಳಲ್ಲಿ ಕೇಳಿದ್ದನ್ನು ದೃಶ್ಯ ರೂಪದಲ್ಲಿ ಎಷ್ಟು ಪರಿಣಾಮಕಾರಿಯಾಗಿ ತೆರೆಮೇಲೆ ಹೇಳುತ್ತೇವೆ ಎನ್ನುವುದರ ಮೇಲೆ ಈ ಚಿತ್ರಗಳ ಸಕ್ಸಸ್‌ ನಿರ್ಧಾರವಾಗುತ್ತದೆ. ಹಿಂದಿ, ತೆಲುಗು ಮೊದಲಾದ ಭಾಷೆಗಳಲ್ಲಿ ಇಂಥ ಪ್ರಯತ್ನಗಳು ಗೆದ್ದಿರುವ ಉದಾಹರಣೆ ಸಾಕಷ್ಟಿವೆ. “ಬಾಹುಬಲಿ’, “ಬಾಜಿರಾವ್‌ ಮಸ್ತಾನಿ’, “ಪದ್ಮಾವತ್‌’ ಹೀಗೆ ಯಶಸ್ವಿಯಾದ

Advertisement

ಸಾಕಷ್ಟು ಚಿತ್ರಗಳ ಉದಾಹರಣೆಗಳು ಸಿಗುತ್ತವೆ. ನಮ್ಮಲ್ಲಿ ಈಗ ನಿಧಾನವಾಗಿ ಚಿತ್ರರಂಗ ಇಂಥ ಚಿತ್ರಗಳಿಗೆ ತೆರೆದುಕೊಳ್ಳುತ್ತಿದೆ. ಇಂತಹ ಇನ್ನಷ್ಟು ಚಿತ್ರಗಳು ತೆರೆಗೆ ಬರಬೇಕು’ ಎನ್ನುತ್ತಾರೆ ಬಾಬು. ಕಮರ್ಷಿಯಲ್‌ ಸಿನಿಮಾಗಳ ಜೊತೆ ಜೊತೆಗೆ ಈ ತರಹದ ಸಿನಿಮಾಗಳು ಬರಬೇಕು, ಎನ್ನುವ ಅವರು, ಕನ್ನಡದಲ್ಲೇ ಸಾಕಷ್ಟು ಕಥೆಗಳು ಸಿಗುತ್ತವೆ ಎನ್ನುತ್ತಾರೆ. “ಕನ್ನಡದಲ್ಲಿ ಹುಡುಕುತ್ತಾ ಹೋದರೆ, “ಕುರುಕ್ಷೇತ್ರ’, “ವೀರಮದಕರಿನಾಯಕ’ನಂತಹ ಚಿತ್ರಗಳನ್ನು ಮಾಡುವಂಥ ನೂರಾರು ಕಥೆಗಳು ಸಿಗುತ್ತವೆ. ಅವೆಲ್ಲವನ್ನೂ ಸೂಕ್ತ ತಯಾರಿ ಮಾಡಿಕೊಂಡು, ಇವತ್ತಿನ ತಂತ್ರಜ್ಞಾನದಲ್ಲಿ ಎಲ್ಲವನ್ನೂ ಸಾಧ್ಯವಾಗಿಸಿ ತೆರೆಗೆ ತರಬಹುದು. ಇದು ಕನ್ನಡ ಚಿತ್ರರಂಗದ ವ್ಯಾಪ್ತಿ-ವಿಸ್ತಾರಕ್ಕೂ ಸಹಾಯಕವಾಗಬಲ್ಲದು. ಇಂಥ ಚಿತ್ರಗಳನ್ನು ಮಾಡಿದಾಗ ಬೇರೆ ಭಾಷೆಗಳಲ್ಲೂ ಕನ್ನಡ ಚಿತ್ರವನ್ನು ನೋಡುತ್ತಾರೆ. ಇದೆಲ್ಲ ಒಳ್ಳೆಯ ಬೆಳವಣಿಗೆ. ಕನ್ನಡದಲ್ಲಿ ಪೌರಾಣಿಕ, ಐತಿಹಾಸಿಕ ಚಿತ್ರಗಳ ಚಾನಲ್‌ ಓಪನ್‌ ಆಗಬೇಕು’ ಎನ್ನುತ್ತಾರೆ ಸಿಂಗ್‌ ಬಾಬು.

ಜಿ. ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next