ರಟ್ಟೀಹಳ್ಳಿ: ತಾಲೂಕಿನ ಐತಿಹಾಸಿಕ ಮದಗ ಮಾಸೂರು ಕೆರೆ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಾಸೂರು ಘಟಕದ ಅಧ್ಯಕ್ಷ ನಾಗನಗೌಡ ಪಾಟೀಲ್ ಆಗ್ರಹಿಸಿದ್ದಾರೆ.
ಮೈದುಂಬಿದ ಮದಗ ಕೆರೆಗೆ ರೈತ ಮುಖಂಡರೊಂದಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ ನಂತರ ಮಾತನಾಡಿದರು. ಈ ವೇಳೆ ಕೆರೆ ಆವರಣದಲ್ಲಿ ಕೆಲವು ರೈತರು ಕೆರೆ ಜಾಗ ಒತ್ತುವರಿ ಮಾಡಿಕೊಂಡು ಬಿತ್ತನೆ ಮಾಡಿರುವುದನ್ನು ಗಮನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ರಟ್ಟೀಹಳ್ಳಿ ತಾಲೂಕಿನ ಚಟ್ನಳ್ಳಿ ಗ್ರಾಮದ ಬಳಿಯ ತುಂಗಭದ್ರಾ ನದಿಯಿಂದ ಶಿಕಾರಿಪುರ ತಾಲೂಕಿಗೆ ಕೆರೆ ತುಂಬಿಸುವ ಯೋಜನೆ ರೂಪಿಸಿ ಕೆಲಸ ಆರಂಭಿಸಿದ್ದಾರೆ. ಆದರೆ, ಅವರ ಕ್ಷೇತ್ರದ ರೈತರು ಐತಿಹಾಸಿಕ ಮದಗ ಕೆರೆಯನ್ನು ಒತ್ತುವರಿ ಮಾಡಿಕೊಂಡು ಕೆರೆ ಆವರಣದಲ್ಲಿ ಬಿತ್ತನೆ ಮಾಡಿಕೊಂಡಿದ್ದಾರೆ. ಈಗ ಬರುತ್ತಿರುವ ಮಳೆಗೆ ಕೆರೆ ಆವರಣದಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತಿದೆ. ಕೆರೆ ತುಂಬಿದರೆ ಎಲ್ಲ ರೈತರಿಗೂ ಅನುಕೂಲವಾಗುತ್ತದೆ. ಆದರೆ, ಕೆರೆ ತುಂಬಿದರೆ ಕೆರೆಯಲ್ಲಿರುವ ಬೆಳೆಗಳು ಹಾಳಾಗುತ್ತವೆ ಎಂದು ಕೆಲವು ರೈತರು ಕೆರೆ ನೀರನ್ನು ಹೊರಹಾಕುತ್ತಿರುವುದು ಕಂಡು ಬರುತ್ತದೆ. ಈ ಬಗ್ಗೆ ಯಾರೊಬ್ಬರೂ ಏಕೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿರುವ ಐತಿಹಾಸಿಕ ಏಕೈಕ ಕೆರೆ ಎಂದರೆ ಮದಗದ ಕೆರೆ. ಈ ಕೆರೆಯಿಂದ ಫಾಲ್ಸ್ ಕೂಡ ಕಾಣಬಹುದಾಗಿದೆ. ಈ ಸ್ಥಳ ಅಭಿವೃದ್ಧಿ ಮಾಡಬೇಕು. ಸಾಲುಮರದ ತಿಮ್ಮಕ್ಕ ಉದ್ಯಾನವನ ಅಭಿವೃದ್ಧಿಪಡಿಸಬೇಕು. ಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಬೇಕು. ಕೆರೆ ಉಳಿಸುವ ನಿಟ್ಟಿನಲ್ಲಿ ಕೆರೆ ಹೂಳೆತ್ತಬೇಕು. ಈ ಬಗ್ಗೆ ಸರ್ಕಾರ ಹಾಗೂ ತಾಲೂಕಿನ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಹೋರಾಟಗಾರ ಮಲ್ಲೇಶಪ್ಪ ಗುತ್ತೆಣ್ಣನವರ ಮಾತನಾಡಿ, ಬೇಸಿಗೆಯಯೂ ಮದಗ ಕೆರೆಯಲ್ಲಿ ನೀರನ್ನು ಕಾಣಬಹುದಾಗಿತ್ತು. ಬರುಬರುತ್ತಾ ಕೆರೆ ಜಾಗ ಒತ್ತುವರಿ ಮಾಡಿಕೊಂಡು ಕೆರೆ ಆವರಣದಲ್ಲಿ ಬಿತ್ತನೆ ಮಾಡುತ್ತಿರುವುದು ಕಂಡು ಬರುತ್ತದೆ. ಕೆರೆ ಉಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ. ಒಂದು ಕಡೆ ಸರ್ಕಾರ ಕೆರೆಗಳನ್ನು ತುಂಬಿಸಲು ಹೊರಟಿದೆ. ಆದರೆ ಶಿಕಾರಿಪುರ ತಾಲೂಕಿನ ಕೆಲವು ರೈತರು ಕೆರೆ ಒಡಲು ಬರಿದು ಮಾಡಲು ಹೊರಟ್ಟಿದ್ದಾರೆ. ಇದರ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ. ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅ ಧಿಕಾರಿಗಳು ಇತ್ತಕಡೆ ಗಮನ ಹರಿಸಬೇಕು ಎಂದರು.
ನಮ್ಮ ಕ್ಷೇತ್ರದವರೇ ಆದ ಕೃಷಿ ಸಚಿವರು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಶಿಕಾರಿಪುರ-ರಟ್ಟಿàಹಳ್ಳಿ ಕ್ಷೇತ್ರದಲ್ಲಿ ಮದಗ ಮಾಸೂರು ಕೆರೆ ಬರುತ್ತದೆ. ಹಾಗಾಗಿ, ಈ ಕೆರೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು. ಕೆರೆ ಅಭಿವೃದ್ಧಿಯಾದರೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ತಾಲೂಕಿನ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಈರನಗೌಡ ಬೇವಿನಮರದ, ಈರಪ್ಪ ಹೊನ್ನಳ್ಳಿ, ಬಸವರಾಜ ಹೊನ್ನಳ್ಳಿ, ಸತೀಶ ಕಮ್ಮಾರ, ಬಸವರಾಜ ಪೊಲೀಸ್‌ಪಾಟೀಲ್ ಮತ್ತಿತರರು ಇದ್ದರು.