Advertisement

ಶೀರ್ಷಿಕೆ ವಿವಾದ ಶ್ರೀಮುರಳಿ ಆಗ್ತಾರ ಮದಗಜ?

05:58 PM Sep 27, 2018 | Sharanya Alva |

ಶ್ರೀಮುರಳಿ ಈಗ “ಭರಾಟೆ’ ಧ್ಯಾನದಲ್ಲಿದ್ದಾರೆ. ಅದರ ನಡುವೆಯೇ ಹೊಸದೊಂದು  ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ಶ್ರೀಮುರಳಿ ಮದಗಜ’ ಎಂದು ನಾಮಕರಣ ಮಾಡಲಾಗಿದೆ. “ಅಯೋಗ್ಯ’ ಚಿತ್ರದ ಮೂಲಕ ನಿರ್ದೇಶಕರಾದ ಮಹೇಶ್‌, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉಮಾಪತಿ ಈ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯಕ್ಕೆ ಶ್ರೀಮುರಳಿ ಅವರ ಮುಂದಿನ ಚಿತ್ರ “ಶ್ರೀಮುರಳಿ ಮದಗಜ’ ಎಂಬುದಷ್ಟೇ ಈ ಹೊತ್ತಿನ ಸುದ್ದಿ. ಕಥೆ ಏನು, ತಂತ್ರಜ್ಞರು ಯಾರೆಲ್ಲಾ ಇರುತ್ತಾರೆ, ಯಾವಾಗ ಶುರುವಾಗಲಿದೆ ಎಂಬಿತ್ಯಾದಿ ವಿಷಯಕ್ಕೆ ಈಗ ಉತ್ತರವಿಲ್ಲ.

Advertisement

ಬುಧವಾರವಷ್ಟೇ ನಿರ್ದೇಶಕ ಮಹೇಶ್‌ ಅವರು, ಶ್ರೀಮುರಳಿ ಚಿತ್ರ ಮಾಡುತ್ತಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರಕ್ಕೆ “ಶ್ರೀಮುರಳಿ ಮದಗಜ’ ಎಂಬ ಶೀರ್ಷಿಕೆ ಇಟ್ಟಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ಆದರೆ, ಈ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಅತ್ತ, ಶೀರ್ಷಿಕೆ ವಿವಾದ ಎದ್ದಿದೆ. ಹೌದು, ನಿರ್ಮಾಪಕ ಡಿ.ಕೆ. ರಾಮಕೃಷ್ಣ (ಪ್ರವೀಣ್‌) ಅವರು ತಮ್ಮ ಮಾನಸ ಚಿತ್ರ ಬ್ಯಾನರ್‌ನಲ್ಲಿ ಕಳೆದ ವರ್ಷವೇ
“ಮದಗಜ’ ಶೀರ್ಷಿಕೆ ನೋಂದಾಯಿಸಿದ್ದು, ಯಾವುದೇ ಕಾರಣಕ್ಕೂ ತಮ್ಮ ಶೀರ್ಷಿಕೆಯನ್ನು ಬಿಟ್ಟುಕೊಡುವುದಿಲ್ಲ. ವಾಣಿಜ್ಯ ಮಂಡಳಿ ತಮ್ಮ ಶೀರ್ಷಿಕೆ ಹೋಲುವ ಬೇರೆ ಯಾವುದೇ ಶೀರ್ಷಿಕೆ ಕೊಡಬಾರದು ಎಂದು ಮಂಡಳಿಗೆ ಬುಧವಾರ ದೂರು ನೀಡಿದ್ದಾರೆ.

ಅಧ್ಯಕ್ಷರಿಗೆ ನೀಡಿರುವ ದೂರಿನ ಪತ್ರದಲ್ಲಿ, “2017 ಸೆಪ್ಟೆಂಬರ್‌ 27 ರಂದು “ಮದಗಜ’ ಶೀರ್ಷಿಕೆ ನೋಂದಾಯಿಸಲಾಗಿದೆ. ಮಂಡಳಿ ನಿಯಮಾನುಸಾರ ಒಮದು ಶೀರ್ಷಿಕೆಗೆ ಅನುಮೋದಿಸಿದ ಬಳಿಕ ಅದೇ ಶೀರ್ಷಿಕೆ ಹೋಲುವ ಮತ್ತೂಂದು ಶೀರ್ಷಿಕೆ ನೀಡಲು
ಅವಕಾಶ ಇರುವುದಿಲ್ಲ. ಆದರೆ, ಮಂಡಳಿಯಲ್ಲಿ “ವೀರ ಮದಗಜ’,”ಶ್ರೀಮುರಳಿ ಮದಗಜ’ ಎಂಬ ಶೀರ್ಷಿಕೆ ನೋಂದಾಯಿಸಲಾಗಿದೆ. ನಾನು “ಮದಗಜ’ ಚಿತ್ರ ನಿರ್ಮಿಸುತ್ತಿದ್ದು, ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ಒಂದೇ ಹೆಸರನ್ನು ಹೋಲುವ ಶೀರ್ಷಿಕೆಗೆ ಅವಕಾಶ ಕೊಟ್ಟರೆ ಮಂಡಳಿ ತನ್ನ ನಿಯಮವನ್ನು ಗಾಳಿಗೆ ತೂರಿದಂತಾಗುತ್ತದೆ. ಹಾಗಾಗಿ ಚಿತ್ರದ ಶೀರ್ಷಿಕೆ ಹೋಲುವ ಯಾವುದೇ ಶೀರ್ಷಿಕೆಗೆ ಅವಕಾಶ ಕೊಡಬಾರದು’ ಎಂದು ನಿರ್ಮಾಪಕ ರಾಮಕೃಷ್ಣ ವಿವರಿಸಿದ್ದಾರೆ.

ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ನಿರ್ದೇಶಕ ಮಹೇಶ್‌, “ನಾನು ಈ ಹಿಂದೆಯೇ ಯೋಗರಾಜ್‌ಭಟ್‌ ಮೂವೀಸ್‌ ಬ್ಯಾನರ್‌ನಲ್ಲಿ “ಮದಗಜ’ ಶೀರ್ಷಿಕೆ ನೋಂದಾಯಿಸಿದ್ದೆ. ಅದರ ಅವಧಿ ಮುಗಿದಿತ್ತು. ಮುಗಿದರೂ ಒಂದು ತಿಂಗಳ ಕಾಲ ಅವಕಾಶ ಇರುತ್ತದೆ. ಆದರೆ, ಮಂಡಳಿಯಿಂದ ಯಾವುದೇ ಮಾಹಿತಿ ಇಲ್ಲದೆ, ಆ ಶೀರ್ಷಿಕೆಯನ್ನು ಬೇರೆ ಬ್ಯಾನರ್‌ಗೆ ವರ್ಗಾಯಿಸಲಾಗಿದೆ. ಅಲ್ಲದೆ, ಮಂಡಳಿಯಲ್ಲಿ ಚುನಾಯಿತರಾಗಿರುವ ಯಾರೂ ಶೀರ್ಷಿಕೆಗಳನ್ನು ವರ್ಗಾವಣೆ ಮಾಡಿಕೊಳ್ಳುವಂತಿಲ್ಲ ಎಂಬ ನಿಯಮವಿದೆ. ನನ್ನ ಗಮನಕ್ಕೂ ಬಾರದೆ, ಶೀರ್ಷಿಕೆ
ವರ್ಗಾವಣೆಯಾಗಿದೆ. ಹೋಗಲಿ, “ಮದಗಜ’ ಶೀರ್ಷಿಕೆ ಅವರೇ ಇಟ್ಟುಕೊಳ್ಳಲಿ.

ನಾನು “ಶ್ರೀಮುರಳಿ ಮದಗಜ’ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡ್ತೀನಿ. ಕೆಲ ವರ್ಷಗಳ ಹಿಂದೆ ಆದಿತ್ಯ ಅಭಿನಯದ “ವಿಲನ್‌’ ಬಂದಿತ್ತು. ಈಗ “ದಿ ವಿಲನ್‌’ ಅಂತ ಇಟ್ಟುಕೊಂಡು ಚಿತ್ರ ಮಾಡಿಲ್ಲವೇ?, “ಕಿರಾತಕರು’ ಶೀರ್ಷಿಕೆ ಒಬ್ಬರು ಇಟ್ಟುಕೊಂಡರೆ ಮತ್ತೂಬ್ಬರು “ಮೈ ನೇಮ್‌ ಈಸ್‌ ಕಿರಾತಕ’, “ಕಿರಾತಕ ಇನ್‌ ದುಬೈ’ ಹೀಗೆಲ್ಲಾ ಶೀರ್ಷಿಕೆ ಇಟ್ಟುಕೊಂಡಿಲ್ಲವೇ? ಇದೂ ಹಾಗೆಯೇ, “ಮದಗಜ’ ಅವರೇ ಇಟ್ಟುಕೊಳ್ಳಲಿ, ನಾನು “ಶ್ರೀಮುರಳಿ ಮದಗಜ’ ಶೀರ್ಷಿಕೆಯಡಿ ಚಿತ್ರ ಮಾಡ್ತೀನಿ. “ಭರಾಟೆ’ ಚಿತ್ರ ಮುಗಿದ ನಂತರ ಚಿತ್ರ ಶುರುವಾಗಲಿದೆ’ ಎಂಬುದು ನಿರ್ದೇಶಕ ಮಹೇಶ್‌ ಮಾತು.

Advertisement

ಇದೆಲ್ಲಾ ಸರಿ, ಶ್ರೀಮುರಳಿ ಶೀರ್ಷಿಕೆ ವಿವಾದ ಕುರಿತು ಏನಂತಾರೆ? ಶೀರ್ಷಿಕೆ ವಿವಾದ ಬಗ್ಗೆ ನನಗೇನೂ ಗೊತ್ತಿಲ್ಲ. ಅದು ನಿರ್ದೇಶಕ ಮತ್ತು ನಿರ್ಮಾಪಕರಿಗೆ ಬಿಟ್ಟಿದ್ದು. ಯಾರೇ ಇರಲಿ, ಪ್ರೀತಿಯಿಂದ ಕೇಳಿದರೆ ಕೊಟ್ಟೇ ಕೊಡುತ್ತಾರೆ. “ಶ್ರೀಮುರಳಿ ಮದಗಜ’ ಚಿತ್ರದ ಒನ್‌ಲೈನ್‌ ಕೇಳಿದೆ
ಚೆನ್ನಾಗಿದೆ. ಕಥೆಯಲ್ಲಿ ಫೋರ್ಸ್‌ ಇದೆ. ಅದಕ್ಕೆ ಅದೇ ಶೀರ್ಷಿಕೆ ಪಕ್ಕಾ ಎನಿಸಿದ್ದರಿಂದ ನಿರ್ದೇಶಕರು ಇಟ್ಟಿದ್ದಾರಷ್ಟೇ’ ಎಂದು ಹೇಳಿ ಸುಮ್ಮನಾಗುತ್ತಾರೆ ಶ್ರೀಮುರಳಿ.

Advertisement

Udayavani is now on Telegram. Click here to join our channel and stay updated with the latest news.

Next