ಬೆಂಗಳೂರು: “ಜವಾಬ್ದಾರಿ ಸ್ಥಾನದಲ್ಲಿರುವ ನಾನು, ಎಷ್ಟೇ ಒತ್ತಡ ಬಂದರೂ ನನ್ನ ಕ್ಷೇತ್ರದಲ್ಲೇ ಸರ್ಕಾರಿ ಭೂಮಿ ಕಬಳಿಕೆಗೆ ಬಿಟ್ಟಿಲ್ಲ. ಅರ್ಜಿಗಳ ಸಮಿತಿಯ ಅಧ್ಯಕ್ಷನಾಗಿಯೂ ಸರ್ಕಾರಿ ಭೂಮಿ ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹೀಗಿರುವಾಗ ನಾನು ಭೂಕಬಳಿಕೆಗೆ ಸಹಕಾರ ನೀಡಿದ್ದೇನೆ ಎಂದು ಆರೋಪಿಸಿರುವ ಎನ್.ಆರ್.ರಮೇಶ್ ಅವರನ್ನು ಹುಚ್ಚ, ಮೂರ್ಖ, ಅಜ್ಞಾನಿ… ಏನೆನ್ನಬೇಕೋ ಅರ್ಥವಾಗುತ್ತಿಲ್ಲ’.
“ಮುನ್ನೂರು ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಸಲು ಯತ್ನಿಸುತ್ತಿರುವ ಭೂಗಳ್ಳರಿಗೆ ಕೃಷ್ಣಾ ರೆಡ್ಡಿ ಸಹಕಾರ ನೀಡಿದ್ದಾರೆ’ ಎಂದು ಆರೋಪಿಸಿರುವ ಬಿಜೆಪಿ ನಗರ ಜಿಲ್ಲಾ ವಕ್ತಾರ ಎನ್.ಆರ್.ರಮೇಶ್ ಮೇಲಿನ ಆಕ್ರೋಶವನ್ನು ವಿಧಾನಸಭೆ ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರು ಹೊರಹಾಕಿದ ಪರಿಯಿದು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್.ಆರ್.ರಮೇಶ್ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುವ ಜತೆಗೆ ಕ್ರಿಮಿನಲ್ ಹಾಗೂ ಮಾನಹಾನಿ ಮೊಕದ್ದಮೆ ಸಹ ದಾಖಲಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉಪ ಸಭಾಧ್ಯಕ್ಷ ಸ್ಥಾನದಿಂದ ನನ್ನನ್ನು ಇಳಿಸುವ ಸಂಚು ನಡೆಯುತ್ತಿದೆ. ಇದರ ಭಾಗವಾಗಿಯೇ ಇಂತಹ ಆರೋಪ ಮಾಡಿರಬಹುದು. ಆದರೆ, ಸಮಯ ಬಂದಾಗ ನಾನೇ ರಾಜೀನಾಮೆ ನೀಡುತ್ತೇನೆ. ಇಂತಹ ಆರೋಪಗಳಿಗೆ ಹೆದರುವುದಿಲ್ಲ ಎಂದ ಅವರು, ಇಂತಹವರನ್ನೂ ಬಿಜೆಪಿ ವಕ್ತಾರರನ್ನಾಗಿ ಮಾಡಿರುವುದು ದುರಂತ ಎಂದರು. ಬನಶಂಕರಿ 3ನೇ ಹಂತದ ಭವಾನಿ ಹೌಸಿಂಗ್ ಕೋ ಆಪರೇಟೀವ್ ಸೊಸೈಟಿ ಲಿಮಿಟೆಡ್, ಜನವರಿ ತಿಂಗಳಲ್ಲಿ ಅರ್ಜಿಗಳ ಸಮಿತಿಗೆ ಮನವಿ ಸಲ್ಲಿಸಿದ್ದು, ತಮ್ಮ ಲೇ ಔಟ್‌ನಲ್ಲಿ ಪಾಲಿಕೆಯವರು ನ್ಯಾಯಾಲಯದ ತಡೆಯಾಜ್ಞೆ ಹಾಗೂ ಆದೇಶ ಉಲ್ಲಂಘಿಸಿ ಅಕ್ರಮವಾಗಿ ಕಾಮಗಾರಿ ನಡೆಸುತ್ತಿದ್ದಾರೆ.
ಅನ್ಯಾಯ ಸರಿಪಡಿಸಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಸಮಿತಿಗೆ ಸಲ್ಲಿಕೆಯಾಗುವ ಎಲ್ಲ ಅರ್ಜಿಗಳಂತೆ ಸದರಿ ಅರ್ಜಿಯನ್ನು ಫೆಬ್ರವರಿ ಅಧಿವೇಶನ ಸಂದರ್ಭದಲ್ಲಿ ಸದನದಲ್ಲಿ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಇಲಾಖೆ, ಬಿಡಿಎ, ಬಿಬಿಎಂಪಿ ಮಾಹಿತಿ ನೀಡಿದೆ. ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಿ ಅರ್ಜಿ ಕುರಿತು ತೀರ್ಮಾನಿಸಲಾಗುವುದು. ಸರ್ಕಾರದ ಎಲ್ಲ ನಿಯಮ ಸೊಸೈಟಿಗಳು ಪಾಲಿಸಬೇಕು. ನಾನು ಸರ್ಕಾರಿ ಸ್ವತ್ತು ರಕ್ಷಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇನೆ. ಯಾವ ಅಧಿಕಾರಿಯ ಮೇಲೂ ಒತ್ತಡ ಹಾಕಿಲ್ಲ. ಆದರೂ ನನ್ನ ಮೇಲೆ ವಿನಾಕಾರಣ ಆರೋಪ ಮಾಡಲಾಗಿದೆ ಎಂದು ದೂರಿದರು.