Advertisement
ಗ್ರಾಮದ ಶ್ರೀ ಆಂಜನೇಯ ದೇವಸ್ಥಾನ ಆವರಣದ ಮರಗಳ ಮೇಲೆ ಕುಳಿತಿಕೊಳ್ಳುವ ಮಂಗಗಳು ದೇವಸ್ಥಾನಕ್ಕೆ ಬರುವವರನ್ನು ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ದಾಳಿ ನಡೆಸುತ್ತಿವೆ. ಕೈ ಕಾಲುಗಳಿಗೆ ಬಾಯಿ ಹಾಕಿ ಮಾಂಸ ಕಂಡವನ್ನು ಹೀರುತ್ತಿವೆ.ಹುಚ್ಚಾಟದ ಮಂಗಗಳ ದಾಳಿಗೆ ತುತ್ತಾದವರು ರಕ್ತಗಾಯಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೆಲವರು ಗಂಭೀರ ಗಾಯಗೊಂಡು ವಾರಗಟ್ಟಲೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ನೀಲಪ್ಪ ಪೂಜಾರಿ ಎಂಬುವವರ ಮೇಲೆ ಶನಿವಾರ ಸಂಜೆ ಆಕ್ರಮಣ ಮಾಡಿರುವ ಮಂಗವೊಂದು ಹಿಗ್ಗಾಮುಗ್ಗಾ ಕಚ್ಚಿ ಗಾಯಗೊಳಿಸಿದೆ. ಕಾಲಿಗೆ ಬಾಯಿ ಹಾಕಿ ನರಗಳನ್ನು ತುಂಡು ಮಾಡಿದೆ. ತೀವ್ರ ರಕ್ತ ಸ್ರಾವದಿಂದ ನರಳುತ್ತಿದ್ದ ನೀಲಪ್ಪ ಪೂಜಾರಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೀಗೆ ಪದೇಪದೇ ಮಂಗಗಳು ಗ್ರಾಮಸ್ಥರ ಮೇಲೆರಗಿ ಗಾಯಗೊಳಿಸುತ್ತಿವೆ. ಸಣ್ಣಪುಟ್ಟ ಗಾಯಗಳಾದವರು ವಾಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಗ್ರಾಮದಲ್ಲಿ ಬೀಡುಬಿಟ್ಟಿರುವ ಹತ್ತಾರು ಮಂಗಗಳಲ್ಲಿ, ಒಂದು ಮಂಗ ಹುಚ್ಚಾಟ ನಡೆಸುತ್ತಿದೆ.