ಬೆಂಗಳೂರು: ಪೊರಕೆ ಹಿಡಿದು ರಸ್ತೆ ಗುಡಿಸುವ ಪೌರಕಾರ್ಮಿಕರ ಕೈಗೆ ಕಸ ಗುಡಿಸುವ ಯಂತ್ರಗಳನ್ನು ನೀಡಲಾಗುತ್ತಿದೆ. ಧೂಳಿನ ನಡುವೆ ರಸ್ತೆ ಗುಡಿಸುತ್ತಿದ್ದ ಪೌರಕಾರ್ಮಿಕರು ಯಂತ್ರಗಳ ಮೂಲಕ ಸಲೀಸಾಗಿ ರಸ್ತೆ ಗುಡಿಸುವ ವ್ಯವಸ್ಥೆಯನ್ನು ಬಿಬಿಎಂಪಿ ಜಾರಿಗೊಳಿಸಲಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 14 ಸಾವಿರ ಕಿ.ಮೀ. ರಸ್ತೆಗಳಿವೆ. ಅದರಲ್ಲಿ 1,400 ಕಿಮೀ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಾಗಿವೆ. ಉಳಿದ ರಸ್ತೆಗಳು ವಾರ್ಡ್ ರಸ್ತೆಗಳಾಗಿವೆ. ಈ ರಸ್ತೆಗಳನ್ನು ಪೌರಕಾರ್ಮಿ ಕರು ಪ್ರತಿ ದಿನ ಗುಡಿಸಿ, ರಸ್ತೆ ಬದಿ ಶೇಖರಣೆಯಾಗಿರುವ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುತ್ತಾರೆ. ಅದರ ಜತೆಗೆ ಪ್ರಮುಖ ರಸ್ತೆಗಳಲ್ಲಿ ಶೇಖರಣೆಯಾದ ಮಣ್ಣು ಸೇರಿ ಇನ್ನಿತರ ತ್ಯಾಜ್ಯ ಸಂಗ್ರಹಕ್ಕಾಗಿ ಹಾಗೂ ರಸ್ತೆ ಗುಡಿಸುವುದಕ್ಕಾಗಿ ಈಗಾ ಗಲೇ 26 ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರವನ್ನು ಬಿಬಿಎಂಪಿ ನೇಮಿಸಿದೆ. ಅದರ ಜತೆಗೆ ಹೊಸದಾಗಿ 51 ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳನ್ನು ಖರೀದಿಸಲಾಗುತ್ತಿದೆ. ಅದರ ಜತೆಗೆ ಪೌರಕಾರ್ಮಿಕರು ಪೊರಕೆ ಹಿಡಿದು ಕಸ ಗುಡಿಸುವುದನ್ನು ತಪ್ಪಿಸಲು ಮ್ಯಾನ್ಯುಯಲ್ ಸ್ವೀಪಿಂಗ್ ಯಂತ್ರಗಳ ಖರೀದಿಗೆ ಬಿಬಿಎಂಪಿ ಮುಂದಾಗಿದೆ.
ನಗರದಲ್ಲಿ ಧೂಳು ಸೇರಿ ಇನ್ನಿತರ ಕಾರಣ ಗಳಿಂದಾಗಿ ವಾಯು ಮಾಲಿನ್ಯ ಹೆಚ್ಚುತ್ತಿದೆ. ಅದನ್ನು ತಡೆವ ಸಲುವಾಗಿ ಪ್ರತಿನಿತ್ಯ ಪೌರಕಾರ್ಮಿಕರು ಪೊರಕೆ ಹಿಡಿದು ರಸ್ತೆ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ಅದರೂ, ಸಮರ್ಪಕವಾಗಿ ಧೂಳು ಶೇಖರಣೆ ಮಾಡಿ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಅದರ ಜತೆಗೆ ರಸ್ತೆ ಬದಿಯಲ್ಲಿ ಶೇಖರಣೆಯಾಗುವ ಮರದ ಎಲೆಗಳನ್ನು ಸರಿಯಾಗಿ ಸಂಗ್ರಹಿಸಿ ವಿಲೇವಾರಿ ಮಾಡುವುದೂ ಪೌರಕಾರ್ಮಿಕರಿಗೆ ಹೊರೆಯಾಗುತ್ತಿದೆ. ಪೊರಕೆಯಲ್ಲಿ ಧೂಳು, ತ್ಯಾಜ್ಯ ಸಂಗ್ರಹಣೆ ಕಷ್ಟವಾಗುತ್ತಿದೆ. ಇದನ್ನು ಮನಗಂಡಿರುವ ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ರಸ್ತೆ ಗುಡಿಸುವ ಸಲುವಾಗಿ ಸಣ್ಣ ಪ್ರಮಾಣದ ಸ್ವೀಪಿಂಗ್ ಯಂತ್ರವನ್ನು ಖರೀದಿಸಲು ನಿರ್ಧರಿಸಿದೆ.
ಗುಣಮಟ್ಟ ಪರೀಕ್ಷೆ ನಂತರ ಖರೀದಿ: ಸದ್ಯ 815 ಸ್ವೀಪಿಂಗ್ ಯಂತ್ರ ಖರೀದಿಗೆ ಬಿಬಿಎಂಪಿಯಿಂದ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಟೆಂಡರ್‌ನಲ್ಲಿ ಪಾಲ್ಗೊಂಡು ಯಂತ್ರ ಪೂರೈಕೆಗೆ ಆಯ್ಕೆಯಾಗುವ ಸಂಸ್ಥೆ, ಯಂತ್ರ ಪೂರೈಕೆಗೂ ಮುನ್ನ ಗುಣಮಟ್ಟ ಪರೀಕ್ಷೆ ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದೆ. ಅದರಲ್ಲೂ ಸರ್ಕಾರದಿಂದ ಪ್ರಮಾಣೀಕರಿಸಿದ ಸಂಸ್ಥೆ ಯಿಂದಲೇ ಗುಣಮಟ್ಟ ಪರೀಕ್ಷೆಗೊಳಪಡಿಸ ಬೇಕಿದೆ. ಅದಾದ ನಂತರ ಬಿಬಿಎಂಪಿ ಕೂಡ ಜಂಟಿಯಾಗಿ ಗುಣಮಟ್ಟ ಪರೀಕ್ಷೆಗೊಳಪಡಿಸಲಿದೆ. ಅಲ್ಲದೆ, ಯಂತ್ರಕ್ಕೆ 1 ವರ್ಷ ವಾರಂಟಿಯನ್ನು ನೀಡಬೇಕಿದೆ. ಅಷ್ಟರೊಳಗೆ ಯಂತ್ರದಲ್ಲಿ ದೋಷ ಕಂಡು ಬಂದರೆ ಗುತ್ತಿಗೆದಾರರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ.
815 ಸ್ವೀಪಿಂಗ್ ಯಂತ್ರಗಳ ಖರೀದಿ : ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ಒಟ್ಟು 815 ಮ್ಯಾನ್ಯುಯಲ್ ಪುಶ್ ಆಪರೇಟಿವ್ ಸ್ವೀಪಿಂಗ್ ಯಂತ್ರಗಳನ್ನು ಖರೀದಿಸಲಾಗುತ್ತಿದೆ. ಪ್ರತಿ ಯಂತ್ರವು 50 ಲೀ. ಧೂಳು ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ. 815 ಯಂತ್ರಗಳ ಖರೀದಿಗಾಗಿ ಬಿಬಿಎಂಪಿ 3.30 ಕೋಟಿ ರೂ. ವ್ಯಯಿಸುತ್ತಿದೆ. ಹೀಗೆ ಖರೀದಿಸಲಾಗುವ ಯಂತ್ರಗಳನ್ನು ವಾರ್ಡ್ ಕಚೇರಿಯಲ್ಲಿ ಇಡಲಾಗುತ್ತದೆ. ಪ್ರತಿ ಯಂತ್ರವು 30 ಕೆ.ಜಿ. ತೂಕವಿರಲಿದೆ. ಯಂತ್ರದ ಕೆಳಭಾಗದಲ್ಲಿ ಟ್ರಾಲಿ ಮಾದರಿ ಚಕ್ರಗಳನ್ನು ಅಳವಡಿಸಲಾಗಿರುತ್ತದೆ. ಹೀಗಾಗಿ ಯಂತ್ರವನ್ನು ಸ್ಟಾರ್ಟ್ ಮಾಡಿದ ಕೂಡಲೇ ತನ್ನಿಂದ ತಾನೇ ರಸ್ತೆಯಲ್ಲಿ ಸಾಗಲಿದೆ. ಅದರಿಂದ ಪೌರಕಾರ್ಮಿಕರು ಯಂತ್ರವನ್ನು ವಾರ್ಡ್ ಕಚೇರಿಗೆ ತರುವುದು ಮತ್ತು ತೆಗೆದುಕೊಂಡು ಹೋಗುವುದು ಸುಲಭವಾಗಲಿದೆ. ಯಂತ್ರಗಳ ಬಳಕೆಗೆ ಪೌರಕಾರ್ಮಿಕರಿಗೆ ತರಬೇತಿಯನ್ನೂ ನೀಡಲಾಗುತ್ತದೆ.
ಸ್ವಚ್ಛ ಭಾರತ ಅಭಿಯಾನಕ್ಕೆ ನೆರವು: ಬಿಬಿಎಂಪಿ ಘನತ್ಯಾಜ್ಯ ವಿಭಾಗ ಶುಭ್ರ ಬೆಂಗಳೂರು ಯೋಜನೆ ಅಡಿಯಲ್ಲಿ ಈಗಾಗಲೆ 51 ಟ್ರಕ್ ಮೌಂಟೆಡ್ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಖರೀದಿಗೆ ಮುಂದಾಗಿದೆ. ಅದರ ಜತೆಗೆ ಇದೀಗ 815 ಮ್ಯಾನ್ಯುಯಲ್ ಸ್ವೀಪಿಂಗ್ ಯಂತ್ರಗಳನ್ನು ಖರೀದಿಸುತ್ತಿದೆ. ಸ್ವತ್ಛತೆಗೆ ಯಂತ್ರಗಳನ್ನು ಬಳಕೆ ಮಾಡುತ್ತಿರುವುದು ಸ್ವಚ್ಛ ಭಾರತ ಅಭಿಯಾನದಲ್ಲಿ ಉತ್ತಮ ಸ್ಥಾನ ಪಡೆಯಲು ಸಹಕಾರಿಯಾಗಲಿದೆ ಎಂಬುದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳ ಅಭಿಪ್ರಾಯವಾಗಿದೆ.
-ಗಿರೀಶ್ ಗರಗ