Advertisement

ಪತಿಯ ಕೃಷಿ ಕಾಯಕಕ್ಕೆ ಹೆಗಲು ನೀಡಿದ ಎಂ.ಎ. ಪದವೀಧರೆ ಪತ್ನಿ

10:25 PM Jan 06, 2020 | Team Udayavani |

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

Advertisement

ಕೋಟ: ಕೋಟ ಮಣೂರಿನ ನಿವಾಸಿ ಶಿವಾನಂದ ಅಡಿಗ ಮೂಲತಃ ಕೃಷಿ ಕುಟುಂಬದವರು. ಇವರ ತಂದೆ ನರಸಿಂಹ ಅಡಿಗರು ಈ ಭಾಗದ ಯಶಸ್ವಿ ಕೃಷಿಕರಾಗಿದ್ದಾರೆ. ಬಿ.ಕಾಂ. ಪದವಿ ಮುಗಿಸಿದ ಅಡಿಗರು ಬೇರೆ ಉದ್ಯೋಗದತ್ತ ಮುಖ ಮಾಡದೆ ತಂದೆಯೊಂದಿಗೆ ಕೃಷಿಯಲ್ಲೇ ಮುಂದುವರಿದರು. ಇದೀಗ 26 ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿರುವ ಇವರು 7 ಎಕ್ರೆ ಜಮೀನಿನಲ್ಲಿ ತೆಂಗು,ಅಡಿಕೆ, ಭತ್ತ, ಶೇಂಗಾ, ಉದ್ದು, ಅವಡೆ, ಕಾಳುಮೆಣಸು ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಇವರ ಕೃಷಿ ಕಾಯಕಕ್ಕೆ ಎಂ.ಎ. ಪದವೀಧರೆ ಪತ್ನಿ ಶುಭ ಅಡಿಗ ಬೆನ್ನೆಲುಬಾಗಿ ಸಹಕರಿಸುತ್ತಿದ್ದಾರೆ ಹಾಗೂ ತಂದೆ ನರಸಿಂಹ ಅಡಿಗರು ವೃದ್ಧಾಪ್ಯದಲ್ಲೂ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.

ಕೃಷಿ ಅನುಭವಕ್ಕಾಗಿ
ರಾಜ್ಯ ಪರ್ಯಟನೆ
ಬೇರೆ -ಬೇರೆ ಜಿಲ್ಲೆಗಳಲ್ಲಿ ಯಾವ ವಿಧಾನದಲ್ಲಿ ಕೃಷಿ ಮಾಡುತ್ತಾರೆ. ಅಲ್ಲಿನ ಧನಾತ್ಮಕ ಅಂಶಗಳಾವು, ಯಾವ ರೀತಿ ಹೊಸ-ಹೊಸ ವಿಧಾನಗಳನ್ನು ಅನುಸರಿಸುತ್ತಾರೆ ಎನ್ನುವುದನ್ನು ಅಧ್ಯಯನ ಮಾಡುವ ಸಲುವಾಗಿ ಇವರು 2018ರಲ್ಲಿ ಕರ್ನಾಟಕ ರಾಜ್ಯ ಪರ್ಯಟನೆ ಆರಂಭಿಸಿದರು. ಇದೀಗ 19ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಗತಿಪರ ರೈತರು, ಕೃಷಿ ಪಂಡಿತರ ಜತೆಗೆ ಮಾಹಿತಿ ವಿನಿಮಯ ನಡೆಸಿದ್ದಾರೆ. 2020ರ ಅಂತ್ಯದೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸುತ್ತಿ ತನ್ನ ಅನುಭವವನ್ನು ದಾಖಲೀಕರಣಗೊಳಿಸಿ ರೈತರಿಗೆ ಅಧ್ಯಯನ ಮಾಡಲು ಅನುಕೂಲಗೊಳಿಸುವ ಆಸೆ ಇವರಿಗಿದೆ.

ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ
ಕೃಷಿಯ ಕುರಿತು ಉತ್ತಮ ಅನುಭವ ಹೊಂದಿರುವ ಇವರು ಕೃಷಿ ಮೇಳ ಹಾಗೂ ಕೃಷಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರೈತರಿಗೆ ಮಾಹಿತಿ ನೀಡುತ್ತಾರೆ ಮತ್ತು ಹಲವು ಮಂದಿ ರೈತರು ನೇರವಾಗಿ ಇವರಿಂದ ಮಾಹಿತಿ ಪಡೆದುಕೊಳ್ಳುತ್ತಾರೆ.

Advertisement

ಪ್ರತಿ ವರ್ಷ ಭತ್ತದ ತಿರಿ
ಇವರ ಮನೆಯಲ್ಲಿ ಇಂದಿಗೂ ಭತ್ತದ ತಿರಿ ನಿರ್ಮಿಸುವ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ. 2017ನೇ ಸಾಲಿನಲ್ಲಿ 600 ಮುಡಿ (180) ಕ್ವಿಂಟಾಲ್‌ ಭತ್ತವನ್ನು ಬಳಸಿ, 10 ಫೀಟ್‌ ಉದ್ದ, 46ಪೀಟ್‌ ಸುತ್ತಲತೆಯ ಭಾರೀ ಗಾತ್ರದ ತಿರಿಯನ್ನು 40ಮಂದಿ ಕಾರ್ಮಿಕರೊಂದಿಗೆ ನಿರ್ಮಿಸಿ ಇತ್ತೀಚಿನ ದಿನದಲ್ಲಿ ದಾಖಲೆ ನಿರ್ಮಿಸಿದ್ದರು ಹಾಗೂ ತಿರಿ ನಿರ್ಮಾಣದ ವಿವಿಧ ಹಂತಗಳನ್ನು ಸಂಪೂರ್ಣ ದಾಖಲೀಕರಣ ಮಾಡಿದ್ದರು. ಇವರ ಕೃಷಿ ಸಾಧನೆಯನ್ನು ಕೃಷಿ ಇಲಾಖೆ ಗೌರವಿಸಿದೆ ಹಾಗೂ ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿದೆ.

ಕೃಷಿಕರಿಗೆ ಕಿವಿಮಾತು
ಯಾವುದೇ ಕೃಷಿ ಮಾಡಬೇಕಾದರು ಆರಂಭದಲ್ಲೇ ಮಾಹಿತಿ ಪಡೆಯಬೇಕು ಹಾಗೂ ಕಾಲ-ಕಾಲಕ್ಕೆ ಬೆಳೆಯ ನಿರ್ವಹಣೆಗೆ ಒತ್ತು ನೀಡಬೇಕು. ಒಂದಷ್ಟು ಪ್ರಯೋಗಾತ್ಮಕ ಗುಣ, ಇತರ ಪ್ರಗತಿಪರ ರೈತರೊಂದಿಗೆ ಚರ್ಚೆ ನಡೆಸಿ ಅವರಲ್ಲಿನ ಉತ್ತಮ ಅಂಶವನ್ನು ಅಳವಡಿಸಿಕೊಳ್ಳುವುದರ ಜತೆಗೆ ನಮ್ಮಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಆದರೆ ಬೆಳೆಗಳ ಸರಿಯಾದ ನಿರ್ವಹಣೆ ಮಾಡಿದರೆ ಈ ಸಮಸ್ಯೆಗಳು ಎದುರಾಗುವುದಿಲ್ಲ. ಆಗ ಕೃಷಿಯಲ್ಲಿ ಯಶಸ್ಸು ಸಾಧ್ಯ ಎನ್ನುವುದು ಕೃಷಿಕರಿಗೆ ಇವರ ಕಿವಿ ಮಾತಾಗಿದೆ.

ಕೀಳರಿಮೆ ಬೇಡ
ಕೃಷಿ ಬಗ್ಗೆ ಯಾರಿಗೂ ಕೀಳರಿಮೆ ಸರಿಯಲ್ಲ. ಯಾಕೆಂದರೆ ಯಾವುದೇ ಐಟಿ-ಬಿಟಿ ಉದ್ಯೋಗಿಗಳಿಗೆ ಕಡಿಮೆ ಇಲ್ಲದಂತೆ ಕೃಷಿಯಿಂದ ಕೋಟ್ಯಂತರ ರೂ ಆದಾಯ ಗಳಿಸಬಹುದು ಎನ್ನುವುದನ್ನು ಕವಿತಾ ಮಿಶ್ರಾರಂತಹ ಯಶಸ್ವಿ ರೈತರು ತೋರಿಸಿಕೊಟ್ಟಿದ್ದಾರೆ. ನಾನು ಕೂಡ ಅವರ ಕ್ಷೇತ್ರಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದೇನೆ. ಸಮಗ್ರ ಅಧ್ಯಯನ, ಪ್ರಯೋಗಶೀಲತೆ, ಕಠಿನ ಪರಿಶ್ರಮದೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡರೆ ಯಾವ ಉದ್ಯೋಗಕ್ಕೆ ಕಡಿಮೆ ಇಲ್ಲದಂತೆ ಹೇರಳವಾದ ಲಾಭ ಗಳಿಸಬಹುದು. ಯುವಜನತೆ ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳಬೇಕು. ಈ ಕ್ಷೇತ್ರಕ್ಕೆ ಉತ್ತಮ ಭವಿಷ್ಯ ಖಂಡಿತಾ ಇದೆ. ಸರಕಾರದ ಸಹಕಾರ ರೈತರಿಗೆ ಅಗತ್ಯವಾಗಿ ಬೇಕು.
-ಶಿವಾನಂದ ಅಡಿಗ ಮಣೂರು, ಕೃಷಿಕ

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next