Advertisement

ಮಾ. 2ಕ್ಕೆ ಅವಧೂತ ಶುಕಮುನಿಸ್ವಾಮಿ ಜಾತ್ರೆ

06:28 PM Feb 18, 2022 | Team Udayavani |

ದೋಟಿಹಾಳ: ತಾತನ ಜಾತ್ರೆ ಮತ್ತು ಪಲ್ಲಕ್ಕಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸೋಣ. ಪಲ್ಲಕ್ಕಿ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ವರ್ಷ ಹಳೆ ನೆನಪುಗಳನ್ನು ಮರೆತು ಜಿಲ್ಲೆಯಲ್ಲಿ ಒಂದು ಮಾದರಿ ರೀತಿಯಲ್ಲಿ ತಾತನ ಜಾತ್ರೆ ಆಚರಣೆ ಮಾಡೋಣ ಎಂದು ಸಿಪಿಐ ನಿಂಗಪ್ಪ ರುದ್ರಗೊಳ ಹೇಳಿದರು.

Advertisement

ಶ್ರೀ ಅವಧೂತ ಶುಕಮುನಿಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪಲ್ಲಕ್ಕಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿ, ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ. ಇದಕ್ಕಾಗಿ ಇಲಾಖೆಯಿಂದ ವಿಶೇಷವಾಗಿ ಒಂದು ತಂಡ ರಚನೆ ಮಾಡಲಾಗುತ್ತದೆ. ಮದ್ಯಪಾನ ಮಾಡಿ ಪಲ್ಲಕಿ ಉತ್ಸವದಲ್ಲಿ ಭಾಗವಹಿಸಬಾರದು.

ಇಲಾಖೆಯಿಂದ ವಿಶೇಷವಾಗಿ ಒಂದು ತಂಡ ರಚನೆ ಮಾಡಲಾಗುತ್ತದೆ. ಇದರಲ್ಲಿ ಎರಡು ಕ್ಯಾಮೆರಾಗಳಿಂದ ಪಲ್ಲಕ್ಕಿ ಉತ್ಸವ ಆರಂಭದಿಂದ ಕೊನೆಯವರಿಗೆ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಒಂದು ವೇಳೆ ಸಾರ್ವಜನಿಕರು ಭಕ್ತಿಯ ನೆಪದಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿ ಮಾಡಿದರೆ ಅಂತಹವರನ್ನು ಕಾನೂನು ಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಮಠದ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಹಾಗೂ ತಹಶೀಲ್ದಾರ್‌ ಎಂ. ಸಿದ್ದೇಶ ಅವರು ಮಾತನಾಡಿ, ಕಳೆದ ವರ್ಷ ಕೋವಿಡ್‌-19 ಅಲೆಯಿಂದಾಗಿ ಸುತ್ತಮುತ್ತ ಹಳ್ಳಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಸಲು ಅನುಮತಿ ನೀಡಿರಲಿಲ್ಲ. ಆದರೆ ಈ ವರ್ಷ ಹಳ್ಳಿಗಳಿಗೂ ಪಲ್ಲಕ್ಕಿ ಉತ್ಸವ ಹೋಗಲು ಅನುಮತಿ ನೀಡಲಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಕಂಡ ಕಂಡಲ್ಲಿ ಪಲ್ಲಕ್ಕಿ ಗದ್ದುಗೆ ಹಾಕಿಸುವಂತಿಲ್ಲ. ಕೇವಲ ಎರಡು ಗ್ರಾಮಗಳಲ್ಲಿ ಆಯ್ದ ದೇವಸ್ಥಾನದಲ್ಲಿ ಮಾತ್ರ ಪಲ್ಲಕ್ಕಿಯ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ.

ಹಿಂದಿನ ಜಾತ್ರಾ ಮಹೋತ್ಸವದಂತೆ ಪಲ್ಲಕ್ಕಿ ಉತ್ಸವದಲ್ಲಿ ಏಳು ಸಂಘ ಸಂಸ್ಥೆಗಳಿಗೆ ಜವಾಬ್ದಾರಿ ಒಪ್ಪಿಸಲಾಗುತ್ತದೆ. ಅವರೇ ಮುಂದುವರಿಸಿಕೊಂಡು ಹೋಗುತ್ತಾರೆ. ಇವರಿಗೆ ಟ್ರಸ್ಟ್‌ ವತಿಯಿಂದ ಟೀ ಶರ್ಟ್‌ಗೆ ಹಣ ನೀಡಲಾಗುತ್ತದೆ. ಇದರಿಂದ ಸಂಘದ ಸದಸ್ಯರನ್ನು ಗುರುತಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

Advertisement

ಈ ಸಭೆಯಲ್ಲಿ ಶೇಖಪ್ಪ ದೊಡ್ಡಮನಿ, ಬಾಲಜಿ ಭೋವಿ, ಬಸವರಾಜ ಶೆಟ್ಟರ್‌, ಬಾಲಪ್ಪ ಸರೂರು, ಗ್ರಾಪಂ ಸದಸ್ಯ ಶಿವನಗೌಡ ಪೊಲೀಸಪಾಟೀಲ್‌, ವಿಷ್ಣು ಅಂಗಡಿ ಅವರು ತಾತನ ಜಾತ್ರೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮಠದಲ್ಲಿ ನಡೆಯುವ ದಾಸೋಹ ಕಾರ್ಯಕ್ರಮವನ್ನು  ಬಾಲಾಜಿ ಭೋವಿ ಅವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆಸಲು ಒಪ್ಪಿಕೊಂಡರು. ಪ್ರತಿದಿನ ದಾಸೋಹಕ್ಕೆ ಬೇಕಾದ ಪದಾರ್ಥಗಳನ್ನು ಟ್ರಸ್ಟ್‌ನಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮದ ಶ್ರೀ ಅವಧೂತ ಶುಕಮುನಿಸ್ವಾಮಿ ದೇವಸ್ಥಾನವು ಮುಜುರಾಯಿ ಇಲಾಖೆಗೆ ಒಳಪಟ್ಟಿದ್ದು, ಫೆ. 23ರಿಂದ ಮಾ. 4ವರಗೆ ತಾತನ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆಯು ಮಾ. 2 (ಬುಧವಾರ) ರಂದು ಸಂಜೆ 5ಗಂಟೆ ಮಹಾರಥೋತ್ಸವ ಜರುಗಿವುದು ಎಂದು ಹೇಳಿದರು. ಸಭೆಯಲ್ಲಿ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿ, ಗ್ರಾಮಲೆಕ್ಕಾ ಧಿಕಾರಿ ಎಸ್‌. ಸಂಗಮೇಶ, ದೋಟಿಹಾಳ-ಕೇಸೂರ ಗ್ರಾಪಂ ಸದಸ್ಯರು, ದೋಟಿಹಾಳ ಮತ್ತು ಕೇಸೂರ ಗ್ರಾಪಂಗಳ ಪಿಡಿಒ, ಎರಡು ಗ್ರಾಮಗಳ ಗ್ರಾಪಂ ಸದಸ್ಯರು, ಅವಳಿ ಗ್ರಾಮಗಳ ಮುಖಂಡರು, ಯುವಕರು, ಕಂದಾಯ ಇಲಾಖೆ ಸಿಬ್ಬಂದಿ, ಸ್ಥಳೀಯ ಸಂಘ, ಸದಸ್ಯರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರು ಸೇರಿದಂತೆ ಇತರರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next