Advertisement

ವಿವೇಕಾನಂದ ಕಾಲೇಜು: ಪತ್ರಿಕೋದ್ಯಮ ಎಂ.ಎ. ತರಗತಿಗೆ ಚಾಲನೆ

03:00 AM Aug 02, 2017 | Karthik A |

ಪುತ್ತೂರು: ಇಂದು ಪತ್ರಿಕೋದ್ಯಮದ ವ್ಯಾಪ್ತಿ ಪ್ರಪಂಚದಾದ್ಯಂತ ವಿಸ್ತರಿಸಿದೆ. ಜಗತ್ತಿನ ವಿದ್ಯಮಾನಗಳನ್ನು ಅರಿಯುವ, ಪ್ರಾಪಂಚಿಕ ಜ್ಞಾನವನ್ನು ವಿಸ್ತರಿಸುವ ಕೇಂದ್ರ ವಾಗಿ ಪತ್ರಿಕೋದ್ಯಮ ಬೆಳೆದುನಿಂತಿದೆ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಅವರು ಹೇಳಿದರು. ಅವರು ಕಾಲೇಜಿನಲ್ಲಿ  ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಆರಂಭಗೊಂಡಿರುವ ಪತ್ರಿಕೋದ್ಯಮ ಎಂ.ಎ. ತರಗತಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಆ ಕ್ಷೇತ್ರಕ್ಕೆ ಅಡಿಯಿರಿಸುವ ಯುವ ಮನಸ್ಸುಗಳು ಸಾಕಷ್ಟು ಪೂರ್ವ ತಯಾರಿ ಮಾಡುವ ಹಿನ್ನೆಲೆಯಲ್ಲಿ ಪತ್ರಿಕೋದ್ಯಮ ಅಧ್ಯಯನ ಸಹಕಾರಿಯೆನಿಸುತ್ತದೆ ಎಂದರು.

Advertisement

ಆಧುನಿಕ ದಿನಗಳಲ್ಲಿ  ಮಾಹಿತಿ ಸುಲಭ ಸಾಧ್ಯವಾಗಿ ಲಭ್ಯವಾಗುತ್ತಿದೆ. ಇದಕ್ಕೆ ಕಾರಣ ಮಾಧ್ಯಮದ ಬೆಳವಣಿಗೆ ಅನ್ನುವುದು ಸರ್ವವಿಧಿತ. ಇಂತಹ ಮಾಧ್ಯಮಗಳಿಗೆ ದೇಶಭಕ್ತ, ಉತ್ಕೃಷ್ಟ ಪತ್ರ ಕರ್ತರು ಅಡಿಯಿರಿಸಿದಾಗ ಮಾಧ್ಯಮ ಶ್ರೀಮಂತಗೊಳ್ಳುತ್ತದೆ ಎಂದರು. ಸಾಮಾಜಿಕ ಕಾಳಜಿ, ಜಾಗೃತಿಯನ್ನು ಮೂಡಿಸುವ ಹೊಣೆ ಪತ್ರಕರ್ತರಿಗಿದೆ ಎಂಬುದು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು  ಆವರು ಹೇಳಿದರು.

ಕಾರ್ಯ ಮುಖ್ಯ
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಮಾತನಾಡಿ, ಕಾಲೇಜಿನಲ್ಲಿ  ಪದವಿ ಹಂತದ ಪತ್ರಿಕೋದ್ಯಮ ವಿಭಾಗ ಹತ್ತು ವರ್ಷಗಳನ್ನು ಪೂರೈಸಿದೆ. ಇಂತಹ ಸಂದರ್ಭದಲ್ಲಿ ಆರಂಭಗೊಳ್ಳುತ್ತಿರುವ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಹಿಂದೆ ಸಾಕಷ್ಟು ಶ್ರಮ, ಕನಸುಗಳಿವೆ. ಒಂದು ತರಗತಿಯ ಸಾಧನೆ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ನಿರ್ಧರಿತಗೊಳ್ಳುವುದಿಲ್ಲ. ಬದಲಾಗಿ ಇರುವವರು ಮಾಡಿದ ಕಾರ್ಯವನ್ನು ಅವಲಂಬಿಸಿದೆ ಎಂದರು.

ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ  ಪ್ರೊ| ಕೃಷ್ಣ ಕಾರಂತ್‌, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ| ವಿಜಯಸರಸ್ವತಿ, ರಸಾಯನಶಾಸ್ತ್ರ ಎಂ.ಎಸ್ಸಿ. ವಿಭಾಗದ ಮುಖ್ಯಸ್ಥೆ ಪ್ರೊ| ಸವಿತಾ, ಕನ್ನಡ ವಿಭಾಗ ಮುಖ್ಯಸ್ಥ ಡಾ| ಶ್ರೀಧರ ಎಚ್‌.ಜಿ., ಪ್ರಾಧ್ಯಾಪಕರಾದ ಹರಿಪ್ರಸಾದ್‌, ಡಾ| ವಿಜಯಗಣಪತಿ ಕಾರಂತ್‌, ಅನನ್ಯಾ ವಿ., ಗಣೇಶ್‌ ಪ್ರಸಾದ್‌, ಸೌಜನ್ಯಾ ಉಪಸ್ಥಿತರಿದ್ದರು. ರಾಕೇಶ್‌ ಕುಮಾರ್‌ ಕಮ್ಮಜೆ ಪ್ರಸ್ತಾವನೆಗೈದು, ಸ್ವಾಗತಿಸಿದರು. ಭವ್ಯಾ ಪಿ. ಆರ್‌. ನಿಡ್ಪಳ್ಳಿ  ವಂದಿಸಿದರು. ಪೂಜಾ ಪಕ್ಕಳ ಕಾರ್ಯಕ್ರಮ ಅವರು ನಿರೂಪಿಸಿದರು.

ಭಾವನೆಗಳ ಮಿಳಿತ
ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿ ಸೇಡಿಯಾಪು ಜನಾರ್ದನ ಭಟ್‌ ಮಾತನಾಡಿ, ಇಂದು ಮಾಧ್ಯಮದ ಹೊರತಾದ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಕಷ್ಟವಾಗುವವರೆಗೆ ನಮ್ಮ ಭಾವನೆಗಳು ಮಾಧ್ಯಮದೊಂದಿಗೆ ಮಿಳಿತವಾಗಿವೆ. ಕೆಲವೊಂದು ಪತ್ರಿಕೆಗಳು ಅಂತೆಯೇ ಕೆಲವೊಂದು ವಾಹಿನಿಗಳು ನಮ್ಮ ಬದುಕಿನ ಅಂಗವೇ ಎಂಬಂತೆ ಅನ್ನಿಸುವುದಿದೆ. ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಅತ್ಯುತ್ಕೃಷ್ಟ ಪತ್ರಕರ್ತರನ್ನು ರೂಪಿಸಿಕೊಡಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next