Advertisement

ಎಂ3 ಮಾದರಿ ಇವಿಎಂ ಬಳಕೆ

12:14 PM Apr 11, 2018 | Team Udayavani |

ಬೆಂಗಳೂರು: ದೇಶದಲ್ಲೇ ಪ್ರಥಮ ಬಾರಿಗೆ ಅತ್ಯಾಧುನಿಕ ಎಂ3 ಮಾದರಿಯ ವಿದ್ಯುನ್ಮಾನ ಮತಯಂತ್ರ ಬಳಕೆಗೆ ರಾಜ್ಯ ವಿಧಾನಸಭೆ ಚುನಾವಣೆ ಸಾಕ್ಷಿಯಾಗಲಿದ್ದು, ಬೆಂಗಳೂರಿನ 15ರಿಂದ 16 ಕ್ಷೇತ್ರಗಳಲ್ಲಿ ಈ ಹೊಸ ಇವಿಎಂಗಳು ಬಳಕೆಯಾಗಲಿವೆ.

Advertisement

ವಿಕಾಸ ಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ಈವರೆಗೆ ಎಂ2 ಮಾದರಿಯ ಇವಿಎಂ ಬಳಸಲಾಗುತ್ತಿದೆ. ದೇಶದಲ್ಲೇ ಇದೇ ಮೊದಲ ಬಾರಿ ಎಂ3 ಮಾದರಿಯ ಇವಿಎಂಗಳನ್ನು ಬೆಂಗಳೂರಿನ 15-16ರ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. ಬೆಂಗಳೂರಿನ ಬಿಇಎಲ್‌ ಕಂಪನಿಯು ಸದ್ಯದಲ್ಲೇ ಇವಿಎಂಗಳನ್ನು ಪೂರೈಸಲಿದೆ.

ಈಗಾಗಲೇ 78 ಸಾವಿರ ವಿವಿಪ್ಯಾಟ್‌, 76,192 ಕಂಟ್ರೋಲ್‌ ಯೂನಿಟ್‌ ಹಾಗೂ 89,206 ಬ್ಯಾಲೆಟ್‌ ಯೂನಿಟ್‌ ಪೂರೈಕೆಯಾಗಿದೆ ಎಂದು ಹೇಳಿದರು. ಎಂ2 ಹಾಗೂ ಎಂ3 ಮಾದರಿ ಇವಿಎಂ ನಡುವೆ ತುಸು ವ್ಯತ್ಯಾಸವಿದೆ. ಎಂ3 ಮಾದರಿಯ ಇವಿಎಂನಲ್ಲಿ ಯಾವುದೇ ದೋಷ ಉಂಟಾದರೆ ಯಾಂತ್ರಿಕವಾಗಿ ಸಂಕೇತ ರವಾನೆಯಾಗುವ ಜತೆಗೆ ಸರಿಪಡಿಸಿಕೊಳ್ಳುತ್ತದೆ.

ಹಾಗಾಗಿ ಹೊಸ ಮಾದರಿಯ ಇವಿಎಂಗಳ ಬಳಕೆಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಗಷ್ಟೇ ತರಬೇತಿ ನೀಡಲಿದ್ದು, ಮತದಾರರಿಗೆ ಯಾವುದೇ ರೀತಿಯ ತರಬೇತಿ ಅಗತ್ಯವಿಲ್ಲ ಎಂದು ತಿಳಿಸಿದರು. ಚುನಾವಣೆಗೆ ಸಂಬಂಧಪಟ್ಟ ಅನುಮತಿ, ಪರವಾನಗಿ ಹಾಗೂ ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಚುನಾವಣಾ ಆಯೋಗವು “ಸುವಿಧಾ’ ಹಾಗೂ “ಸಮಾಧಾನ್‌’ ಹೆಸರಿನ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಚುನಾವಣೆಗೆ ಸಂಬಂಧಪಟ್ಟ ಅನುಮತಿ ಪರವಾನಗಿಯನ್ನು 24 ಗಂಟೆಯೊಳಗೆ ನೀಡಲು “ಸುವಿಧಾ’ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.  ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಸಭೆ, ರ್ಯಾಲಿ, ವಾಹನ, ತಾತ್ಕಾಲಿಕ ಚುನಾವಣಾ ಕಚೇರಿ, ಧ್ವನಿವರ್ಧಕ ಇತರೆ ಅನುಮತಿಗೆ ಈ ಅಪ್ಲಿಕೇಷನ್‌ ಬಳಸಬಹುದು.

Advertisement

ಹೆಲಿಕಾಪ್ಟರ್‌ ಹಾಗೂ ಹೆಲಿಪ್ಯಾಡ್‌ ಬಳಕೆಗೆ ಸಂಬಂಧಪಟ್ಟ ಅರ್ಜಿಗಳನ್ನು ಕನಿಷ್ಠ 36 ಗಂಟೆ ಮೊದಲು ಸಲ್ಲಿಸಬೇಕು. ಏ.9ರವರೆಗೆ ಒಟ್ಟು 336 ಅರ್ಜಿ ಸಲ್ಲಿಕೆಯಾಗಿದ್ದು, 207 ಅರ್ಜಿ ವಿಲೇವಾರಿಯಾಗಿವೆ. ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 66 ಅರ್ಜಿ, ಚಿಕ್ಕಬಳ್ಳಾಪುರದಲ್ಲಿ 44 ಅರ್ಜಿ ಸ್ವೀಕೃತವಾಗಿವೆ ಎಂದು ಹೇಳಿದರು.

ಸಾರ್ವಜನಿಕರು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ದೂರು, ಕುಂದುಕೊರತೆ, ಸಲಹೆ ನೀಡಲು “ಸಮಾಧಾನ್‌’ ಅಪ್ಲಿಕೇಷನ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ದೂರು ಸಲ್ಲಿಕೆಯಾದರೆ 24 ಗಂಟೆಯಲ್ಲಿ ಸ್ಪಂದಿಸಲಾಗುವುದು. ಈವರೆಗೆ 253 ದೂರು ಸಲ್ಲಿಕೆಯಾಗಿದ್ದು, 172 ವಿಲೇವಾರಿಯಾಗಿದೆ ಎಂದು ಹೇಳಿದರು.

4.07 ಕೋಟಿ ರೂ. ವಶ!: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಕ್ರಮಗಳ ಮೇಲೆ ನಿಗಾ ವಹಿಸಿರುವ ಆಯೋಗದ ವಿಶೇಷ ತಂಡಗಳು ಈವರೆಗಿನ ಕಾರ್ಯಾಚರಣೆಯಲ್ಲಿ 4.07 ಕೋಟಿ ರೂ. ನಗದು ಹಾಗೂ ಮದ್ಯ, ವಾಹನ ಸೇರಿದಂತೆ 1.21 ಕೋಟಿ ರೂ. ಮೊತ್ತದ ವಸ್ತುಗಳನ್ನು ಜಪ್ತಿ ಮಾಡಿವೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು.

ಸಂಚಾರಿ ವಿಚಕ್ಷಣ ದಳ ನಡೆಸಿದ ಕಾರ್ಯಾಚರಣೆಯಲ್ಲಿ 54.52 ಲಕ್ಷ ರೂ. ನಗದು, 473 ಲೀಟರ್‌ ಮದ್ಯ ಹಾಗೂ 9.96 ಕೋಟಿ ರೂ. ಮೌಲ್ಯದ ಇತರೆ ವಸ್ತು ವಶಕ್ಕೆ ಪಡೆಯಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 203 ಪ್ರಕರಣದಲ್ಲಿ ಎಫ್ಐಆರ್‌ ದಾಖಲಾಗಿದೆ. ಅಬಕಾರಿ ಇಲಾಖೆಯು 46.74 ಲಕ್ಷ ರೂ. ಮೌಲ್ಯದ ಐಎಂಎಲ್‌, ಇತರೆ ಮದ್ಯ ಸೇರಿ 10,464 ಲೀಟರ್‌ ಮದ್ಯ ಜಪ್ತಿಯಾಗಿದೆ ಎಂದು ವಿವರ ನೀಡಿದರು.

ಫೇಲಾದ ಅಧಿಕಾರಿಗಳಿಗೆ ಮರು ಪರೀಕ್ಷೆ!: ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡವರಿಗೆ ತರಬೇತಿ ಕೊಡಿಸಿ ನಂತರ ನಡೆಸಿದ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮತ್ತೂಮ್ಮೆ ಪರೀಕ್ಷೆ ನಡೆಸಲಾಗುವುದು ಎಂದು ಸಂಜೀವ್‌ ಕುಮಾರ್‌ ತಿಳಿಸಿದರು. ಒಟ್ಟು 224 ಚುನಾವಣಾಧಿಕಾರಿಗಳ ಪೈಕಿ 130 ಮಂದಿ ಉತ್ತೀರ್ಣರಾಗಿದ್ದಾರೆ.

221 ಅಧಿಕಾರಿಗಳು ತರಬೇತಿ ಪಡೆದಿದ್ದು, ಮೂರು ಮಂದಿಗೆ ತರಬೇತಿ ನಡೆಯುತ್ತಿದೆ. 130 ಮಂದಿ ಉತ್ತೀರ್ಣರಾಗಿದ್ದು, 94 ಮಂದಿ ಇನ್ನೂ ಪರೀಕ್ಷೆ ತೆಗೆದುಕೊಂಡಿಲ್ಲ. 277 ಸಹಾಯಕ ಚುನಾವಣಾಧಿಕಾರಿಗಳಲ್ಲಿ 54 ಮಂದಿ ಉತ್ತೀರ್ಣರಾಗಿದ್ದಾರೆ. 275 ಮಂದಿಗೆ ತರಬೇತಿ ನೀಡಲಾಗಿದ್ದು, ಉಳಿದಿಬ್ಬರಿಗೆ ತರಬೇತಿ ನೀಡಲಾಗುತ್ತಿದೆ. ಅನುತ್ತೀರ್ಣರಾದವರಿಗೆ ಮತ್ತೂಮ್ಮೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next