Advertisement

ಎಂ. ಎಂ. ಹೆಗ್ಡೆ ಪ್ರಶಸ್ತಿ ಪಾತ್ರ ಕೊಪ್ಪಾಟೆ ಮುತ್ತ ಗೌಡರು

11:05 AM Nov 10, 2017 | Team Udayavani |

ಕುಂದಾಪುರದ ನ್ಯಾಯವಾದಿ, ಯಕ್ಷಗಾನ ಮೇಳಗಳ ಯಜಮಾನರಾಗಿ ಖ್ಯಾತಿವೆತ್ತ ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ.ಎಂ. ಹೆಗ್ಡೆಯವರ ಹೆಸರಿನಲ್ಲಿ ಪ್ರತಿವರ್ಷ ನೀಡಲ್ಪಡುವ ಎಂ.ಎಂ. ಹೆಗ್ಡೆ ಸಂಸ್ಮರಣ ಪ್ರಶಸ್ತಿಯನ್ನು ಈ ಬಾರಿ ಅಸಾಮಾನ್ಯ ಕಲಾವಿದ ಕೊಪ್ಪಾಟೆ ಮುತ್ತ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ, ನ.11ರಂದು ಬ್ರಹ್ಮಾವರದಲ್ಲಿ ಉಡುಪಿ ರಂಗಸ್ಥಳ ಸಂಸ್ಥೆಯ ಸಹಯೋಗದಲ್ಲಿ ನೆರವೇರಲಿದೆ. ಬಳಿಕ ಪ್ರಸಿದ್ಧ ಕಲಾವಿದರಿಂದ “ಭೀಷ್ಮ ಪ್ರತಿಜ್ಞೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Advertisement

ಬಡಗುತಿಟ್ಟು ರಂಗಸ್ಥಳದಲ್ಲಿ ಸುಮಾರು ಐದು ದಶಕಗಳ ಕಾಲ ಸುದೀರ್ಘ‌ ಕಾಲ ತಿರುಗಾಟ ಮಾಡಿದ ಕೊಪ್ಪಾಟೆ ಮುತ್ತ ಗೌಡರು 36 ವರ್ಷ ಪ್ರಧಾನ ಎರಡನೇ ವೇಷಧಾರಿಯಾಗಿ ಮೆರೆದವರು. 21 ವರ್ಷಗಳ ಕಾಲ ಎಂ.ಎಂ. ಹೆಗ್ಡೆೆಯವರ ಯಜಮಾನಿಕೆಯ ಮಾರಣಕಟ್ಟೆ ಮೇಳವೊಂದರಲ್ಲೇ ದುಡಿದ ಇವರು ಸುಮಾರು ಒಂಬತ್ತು ವರ್ಷ ಅಲ್ಲಿಯೇ ಎರಡನೇ ವೇಷಧಾರಿಯಾಗಿದ್ದರು. ಅನಂತರ ಸಾಲಿಗ್ರಾಮ ಮೇಳದ ಕಲಾವಿದರಾಗಿ ಮೇರು ಭಾಗವತ ಕಾಳಿಂಗ ನಾವಡರ ಪದ್ಯಕ್ಕೆ ಹೆಜ್ಜೆ ಹಾಕಿದವರು. ಬಳಿಕ ಪೆರ್ಡೂರು, ಇಡಗುಂಜಿ, ಕಳವಾಡಿ, ಮಂದಾರ್ತಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ನಿವೃತ್ತಿಗೆ ಮುನ್ನ ಕೊನೆಯ ಒಂದು ವರ್ಷ ವೃದ್ಧಾಪ್ಯದಲ್ಲೂ ಅವರು ಸೌಕೂರು ಮೇಳದಲ್ಲಿ ನಿರ್ವಹಿಸಿದ “ರುಕಾ¾ಂಗದ ಚರಿತ್ರೆ’ಯ ರುಕಾ¾ಂಗದನ ಪಾತ್ರ ಅಪಾರವಾದ ವಾಕ³ಟುತ್ವದಿಂದ ಜನಪ್ರಿಯವಾಗಿತ್ತು.

 ಕುಂದಾಪುರ ತಾಲೂಕು, ಬೈಂದೂರು ವಲಯದ ಕಾಲೊ¤àಡು ಎಂಬಲ್ಲಿ 1945ರಲ್ಲಿ ಅಣ್ಣಪ್ಪ ಗೌಡ ಮತ್ತು ಅಕ್ಕಣಿ ದಂಪತಿಯ ಮಗನಾಗಿ ಜನಿಸಿದರೂ ಕುಂದಾಪುರ ತಾಲೂಕು ಆಲೂರು ಗ್ರಾಮದ ಕೊಪ್ಪಾಟೆ ಎಂಬಲ್ಲಿ ಬೆಳೆದದ್ದರಿಂದ ಇವರಿಗೆ ಕೊಪ್ಪಾಟೆ ಎಂಬುದೇ ಜನಜನಿತ ಹೆಸರಾಯಿತು. ಬಾಲ್ಯದಿಂದಲೇ ಯಕ್ಷಗಾನದ ಆಸಕ್ತಿ ಬೆಳೆಸಿಕೊಂಡ ಇವರು ಕಲಿತದ್ದು ಕೇವಲ 3ನೇ ತರಗತಿ. ಯಕ್ಷಗಾನದ ಬಯಲು ವಿಶ್ವವಿದ್ಯಾನಿಲಯದಲ್ಲಿ ಕಂಡು ಕಲಿತದ್ದೇ ಜಾಸ್ತಿ. ಕಂಬದಕೋಣೆ ಸಂಜೀವ ರಾಯರು ಮಂದಾರ್ತಿ ಮತ್ತು ಮಾರಣಕಟ್ಟೆ ಮೇಳಗಳ ಜೋಡಾಟ ಏರ್ಪಡಿಸಿದಾಗ ರಾತ್ರಿಯಿಡೀ ಕಣ್ಣೆವೆಯಿಕ್ಕದೆ ಆಟ ನೋಡಿದ ಗೌಡರ ಯಕ್ಷಗಾನ ಪ್ರೀತಿ ಇಮ್ಮಡಿಗೊಂಡಿತು. ಆಗ ಮಾರಣಕಟ್ಟೆ ಮೇಳದಲ್ಲಿದ್ದ ಗುರು ವೀರಭದ್ರ ನಾಯಕ್‌ ಮತ್ತು ಮಂದಾರ್ತಿ ಮೇಳದಲ್ಲಿದ್ದ ಶಿರಿಯಾರ ಮಂಜು ನಾಯ್ಕರ ಮಟಪಾಡಿ ಶೈಲಿಯ ಕಿರುಹೆಜ್ಜೆಗೆ ಮಾರುಹೋಗಿ ಮರುದಿನವೇ ವೀರಭದ್ರ ನಾಯ್ಕರ ಮನೆಗೆ ಹೋಗಿ ಅವರ ಶಿಷ್ಯನಾದರು. ನಾಯ್ಕರು ತಮ್ಮ ಶಿಷ್ಯನಿಗೆ ನೀಡಿದ್ದು ಕೇವಲ ಕುಣಿತ ಮಾತ್ರವಲ್ಲ, ಮಹಾಭಾರತ -ರಾಮಾಯಣಗಳ ಪ್ರತೀ ಪಾತ್ರದ ಚಿತ್ರಣವನ್ನು ತೋರಿಸಿಕೊಟ್ಟರು. ಮುಂದೆ ರಾಮ ನಾಯರಿ, ಬನ್ನಂಜೆ ಸಂಜೀವ ಸುವರ್ಣ, ನೀಲಾವರ ಮಹಾಬಲ ಶೆಟ್ಟರಂತೆ ವೀರಭದ್ರ ನಾಯ್ಕರ ಪರಮ ಶಿಷ್ಯರಲ್ಲಿ ಒಬ್ಬರಾಗಿ ಮೂಡಿಬಂದರು. ತನ್ನ ವಿಶೇಷ ಮಾತುಗಾರಿಕೆಯಿಂದ ಕುಂದಾಪುರ ಪರಿಸರದ ಶ್ರೇಷ್ಠ ಮಟ್ಟದ ತಾಳಮದ್ದಳೆ ಅರ್ಥದಾರಿಯಾಗಿಯೂ ಕಾಣಿಸಿಕೊಂಡರು. ಕಾಳಿಂಗ ನಾವಡರ ಭಾಗವತಿಕೆಯಲ್ಲಿ ಅವರ “ಕೃಷ್ಣಾರ್ಜುನ’ದ ಅರ್ಜುನ ನಡುತಿಟ್ಟು ಪರಂಪರೆಯ ಅತ್ಯುನ್ನತ ಪಾತ್ರವಾಗಿ ಮೂಡಿಬಂತು, ಮುತ್ತ ಗೌಡರು ನಾವಡರ ಪ್ರೀತಿಪಾತ್ರ ಕಲಾವಿದರೆನಿಸಿಕೊಂಡರು.

ಕೊಪ್ಪಾಟೆಯವರ ಬಹುಮುಖ ಪ್ರತಿಭೆಗಳಲ್ಲಿ ತಾಳಮದ್ದಳೆಯ ಅರ್ಥಗಾರಿಕೆಯೂ ಒಂದು. ತಾಳಮದ್ದಳೆಯ ದಿಗ್ಗಜರೊಂದಿಗೆ ಕುಳಿತು, ತರ್ಕ -ಕುತರ್ಕಗಳ ಭೀತಿಯಿಲ್ಲದೆ ಅರ್ಥಹೇಳುವ ಸಾಮರ್ಥ್ಯವಂತರಾದ ಇವರು ಯಶಸ್ವೀ ಪ್ರಸಂಗಕರ್ತರಾಗಿಯೂ ಪ್ರಸಿದ್ಧರು. ಇವರ “ಪುಷ್ಕಳ ಪುನರ್ಜನ್ಮ’ ಮಾರಣಕಟ್ಟೆ ಮೇಳದಲ್ಲಿ ಪ್ರಸಿದ್ಧವಾದರೆ “ಮಾರಿಕಾಂಬಾ ಮಹಾತೆ¾’, “ನಂದಿಕೇಶ್ವರ ಮಹಾತೆ¾’, “ಮಿತ್ರದ್ರೋಹ’ ಪ್ರಸಂಗಗಳು ಇತರ ಮೇಳಗಳಲ್ಲಿ ಯಶಸ್ವಿಯಾಗಿವೆ.

ಉಡುಪಿ ಯಕ್ಷಗಾನ ಕಲಾರಂಗದ ಬೆಳ್ಳಿ ಹಬ್ಬದಂದು ಇವರಿಗೆ ಸಮ್ಮಾನ ಸಂದಿದೆ. ಮಣಿಪಾಲ ಸರಳೆಬೆಟ್ಟು ಮಿತ್ರ ಯಕ್ಷಗಾನ ಮಂಡಳಿಯ ಗೋರ್ಪಾಡಿ ವಿಠಲ ಪಾಟೀಲ ಪ್ರಶಸ್ತಿ ಸಹಿತ ಅನೇಕ ಸಮ್ಮಾನಗಳು ಅವರ ಪ್ರತಿಭೆಗೆ ಸಂದಿವೆ. ಕಾಯದ ಕಸುವು ವಯೋ ಸಹಜವಾಗಿ ಕುಸಿದ ಅನಂತರ ನಿವೃತ್ತಿ ಹೊಂದಿರುವ ಕೊಪ್ಪಾಟೆ ಮುತ್ತ ಗೌಡರಿಗೆ ಈಗ ಅನಾರೋಗ್ಯ. ರಂಗಸ್ಥಳದ ಕಂಬಗಳ ಮಧ್ಯೆ ಅಸಾಮಾನ್ಯ ಕಲಾವಿದನಾಗಿ ದಶಕಗಳ ಕಾಲ ಬಡಗುತಿಟ್ಟು ರಂಗಸ್ಥಳವನ್ನು ಆಳಿದ ಮೇರು ಕಲಾವಿದ ಇಂದು ನಾಲ್ಕು ಕಾಲುಗಳ ಪಡಿಮಂಚದ ಮೇಲೆ ಗೋಡೆಯೂ ಇಲ್ಲದ ಮುರುಕಲು ಗುಡಿಸಿಲಿನಲ್ಲಿ ವಾಸವಾಗಿದ್ದಾರೆ. ಅವರ ಪತ್ನಿಯೂ ಅನಾರೋಗ್ಯದಿಂದಿದ್ದಾರೆ. ಇಂತಹ ಸ್ಥಿತಿಯಲ್ಲಿ ಅವರು ದುಡಿದ ಮಾರಣಕಟ್ಟೆ ಮೇಳದ ಯಜಮಾನ ಎಂ. ಎಂ. ಹೆಗ್ಡೆ ಹೆಸರಿನ ಪ್ರಶಸ್ತಿ ಅವರಿಗೆ ನೆಮ್ಮದಿ ತರಲಿ. ಜತೆಗೆ ಇನ್ನಷ್ಟು ಕಲಾ-ಕಲಾವಿದ ಪೋಷಕರ ಸಹಾಯಹಸ್ತ ಅವರತ್ತ ಚಾಚಲಿ.

Advertisement

ಪ್ರೊ| ಎಸ್‌. ವಿ. ಉದಯಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next