Advertisement

M B patil: ಲಿಂಗಾಯತರನ್ನು ಮುಗಿಸೋದೇ ಬಿಜೆಪಿ, ಆರೆಸ್ಸೆಸ್‌ ಅಜೆಂಡಾ

11:52 PM May 01, 2023 | Team Udayavani |

ಬೆಂಗಳೂರು: “ಲಿಂಗಾಯತ ಸಮುದಾಯ ಹಾಗೂ ನಾಯಕತ್ವವನ್ನು ರಾಜಕೀಯವಾಗಿ ಮುಗಿಸುವುದೇ ಬಿಜೆಪಿ ಹಾಗೂ ಆರ್‌.ಎಸ್‌.ಎಸ್‌.ಅಜೆಂಡವಾಗಿದೆ. ಇದಕ್ಕೆ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಪ್ರಕರಣಗಳೇ ನಿದರ್ಶನ. “ಆಕಸ್ಮಿಕ’ ಸಿಎಂ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್‌ ಯತ್ನಾಳ್‌, ವಿ.ಸೋಮಣ್ಣ, ಮುರುಗೇಶ್‌ ನಿರಾಣಿ ಅವರಿಗೂ ಮುಂದೆ ಇದೇ ಸ್ಥಿತಿ ಕಾದಿದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಸ್ಪಷ್ಟವಾಗಿ ಹೇಳಿದರು.

Advertisement

ಚುನಾವಣೆ ಹಿನ್ನೆಲೆಯಲ್ಲಿ “ಉದಯವಾಣಿ’ ಗೆ ನೀಡಿದ ಸಂದರ್ಶನದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಹರಿಹಾಯ್ದ ಅವರು ಲಿಂಗಾಯತರನ್ನು ಬಳಸಿ ಬಿಸಾಡುವುದೇ ಬಿಜೆಪಿ ಸಂಸ್ಕೃತಿ. ಜತೆಗೆ ಲಿಂಗಾಯತ ನಾಯಕರನ್ನು ಲಿಂಗಾಯತರಿಂದಲೇ ಮುಗಿಸಲು ಸುಪಾರಿ ಕೊಟ್ಟಿದೆ. ಈ ಕುತಂತ್ರ ಈಗ ಸಮಾಜಕ್ಕೆ ಅರ್ಥವಾಗುತ್ತಿದೆ. ಶೆಟ್ಟರ್‌ ಹಾಗೂ ಸವದಿ ಅವರನ್ನು ರಾಜಕೀಯವಾಗಿ ಮುಗಿಸಲು ಯಡಿಯೂರಪ್ಪಗೆ ಸುಪಾರಿ ಕೊಡಲಾಗಿದೆ. ಅದೇ ಸುಪಾರಿಯನ್ನು ಪ್ರಹ್ಲಾದ್‌ ಜೋಷಿ, ಬಿ.ಎಲ್‌.ಸಂತೋಷ್‌ ಏಕೆ ತೆಗೆದುಕೊಳ್ಳಲಿಲ್ಲ? ಎಂದು ಪ್ರಶ್ನಿಸಿದರು.

ಸಂದರ್ಶನದ ಪೂರ್ಣ ವಿವರ ಇಲ್ಲಿದೆ…
ಕಳೆದ ಚುನಾವಣೆಯಂತೆ ಈ ಸಲವೂ ಲಿಂಗಾಯತ ವಿಷಯವೇ ಹೆಚ್ಚೆಚ್ಚು ಚರ್ಚೆ ಆಗುತ್ತಿದೆಯಲ್ಲಾ?
ನೋಡಿ, ರಾಜ್ಯದ ರಾಜಕಾರಣದಲ್ಲಿ ಲಿಂಗಾಯತ ಸಮಾಜ ಯಾವಾಗಲೂ ಬಹಳ ಮಹತ್ವದ ಪಾತ್ರವಹಿಸಿದೆ. ರಾಜ್ಯ ಉದಯದ ಸಂದರ್ಭ, ಸ್ವಾತಂತ್ರ್ಯ ಚಳವಳಿ, ದೇಶ ರಕ್ಷಣೆ ವಿಚಾರದಲ್ಲಿ ಲಿಂಗಾಯತ ಸಮಾಜ ಹಾಗೂ ಉತ್ತರ ಕರ್ನಾಟಕದ ಜನ ದೊಡ್ಡ ಪಾತ್ರ ವಹಿಸಿದ್ದಾರೆ. ವೀರೇಂದ್ರ ಪಾಟೀಲರ ಕಾಲದಲ್ಲಿ 176 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು, ಆ ರೀತಿಯ ಬಹುಮತ ಮುಂದೆಂದೂ ಬರಲು ಸಾಧ್ಯವೇ ಇಲ್ಲ. ಆದರೆ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಎಂ ಸ್ಥಾನದಿಂದ ಬದಲಾಯಿಸಿದ್ದರ ಬಗ್ಗೆ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಿದರು. ಈಗ ಯಡಿಯೂರಪ್ಪ ಅವರನ್ನು ಯಾವುದೇ ಕಾರಣವಿಲ್ಲದೆ ಆರೋಗ್ಯ ಚೆನ್ನಾಗಿದ್ದರೂ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಏಕೆ ? ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಿದ್ದು ಏಕೆ ಎಂಬುದಕ್ಕೆ ಉತ್ತರಿಸಬೇಕು. ಇದಕ್ಕೆ ಉತ್ತರ ಕೊಡುವ ಬದಲಿಗೆ ಬಿಜೆಪಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದೆ. ಹೀಗಾಗಿ ಬಿಜೆಪಿ-ಕಾಂಗ್ರೆಸ್‌ ನಡುವೆ ಈ ವಿಚಾರದಲ್ಲಿ ಸಾಕಷ್ಟು ವಾದ-ಪ್ರತಿವಾದಗಳು ನಡೆಯುತ್ತಿವೆ.

ಲಿಂಗಾಯತ ಮತ ಬ್ಯಾಂಕ್‌ ಮೇಲೆ ಬಿಜೆಪಿ, ಕಾಂಗ್ರೆಸ್‌ ಕಣ್ಣಿಟ್ಟಿರುವುದೇ ಈ ಜಿದ್ದಾಜಿದ್ದಿಗೆ ಕಾರಣವೇ?
ಕಳೆದ ಸಲ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಸಮಾಜವನ್ನು ಒಡೆಯಲಾಗುತ್ತಿದೆ ಎಂದು ನಮ್ಮ ವಿರುದ್ಧ ಬಿಜೆಪಿ, ಆರ್‌ಎಸ್‌ಎಸ್‌ನವರು ಅಪಪ್ರಚಾರ ನಡೆಸಿದರು. ಸಿಖ್ಖರು ಮತ್ತು ಜೈನರಿಗೆ ಪ್ರತ್ಯೇಕ ಧರ್ಮ ಕೊಡುವಾಗ ಒಪ್ಪಿಕೊಂಡಿದ್ದ ಜನ ಲಿಂಗಾಯತರಿಗೆ ಏಕೆ ವಿರೋಧಿಸಿದರು. ಹಿಂದೂ ಧರ್ಮಕ್ಕೆ ಅಪಾಯವೆಂದು ಆಗ ಏಕೆ ಹೇಳಲಿಲ್ಲ. ಅದೇ ರೀತಿ ಬಿಜೆಪಿ ಕಟ್ಟಿಬೆಳೆಸಿದ ಯಡಿಯೂರಪ್ಪ ಅವರನ್ನು ಅಮಾನವೀಯವಾಗಿ ನಡೆಸಿಕೊಂಡರು. ಯಡಿಯೂರಪ್ಪ ಹಿಂದೆ ಸಿಎಂ ಆಗಿದ್ದಾಗ, ಈಗ ಸಿಎಂ ಆಗಿದ್ದಾಗಲೂ ಅದೇ ರೀತಿ ಮಾಡಿದರು. ಅವರಿಗೆ ಲಿಂಗಾಯತರ ವೋಟ್‌ ಬೇಕೇ ಹೊರತು, ನಾಯಕರು ಬೇಕಿಲ್ಲ.

ಈ ಬೆಳವಣಿಗೆ ಕಾಂಗ್ರೆಸ್‌ಗೆ ಎಷ್ಟರ ಮಟ್ಟಿಗೆ ಲಾಭವಾಗುವುದು?
ಈಗ ವೀರಶೈವ-ಲಿಂಗಾಯತರಿಗೆ ಬಿಜೆಪಿಯ ನಿಜ ಬಣ್ಣ ಹಾಗೂ ಅಜೆಂಡಾ ಅರ್ಥವಾಗಿದೆ. ತಪ್ಪಿನ ಅರಿವಾಗುತ್ತಿದ್ದು ಸಮಾಜ ಬಹಳ ಜಾಗೃತಗೊಂಡಿದೆ. ಬಿಜೆಪಿಗೆ ಮತ ಹಾಕಿದ ಲಿಂಗಾಯತರಲ್ಲಿ ಶೇ.50ರಷ್ಟು ಮಂದಿ ಮತ್ತೆ ಕಾಂಗ್ರೆಸ್‌ ಕಡೆ ಬರುತ್ತಿದ್ದಾರೆ. ಈ ಬೆಳವಣಿಗೆಯಿಂದಲೇ ಬಿಜೆಪಿ ಆತಂಕಕ್ಕೆ ಗುರಿಯಾಗಿದೆ. ಹತಾಶರಾಗಿ ಏನೇನು ಮಾತನಾಡುತ್ತಿದ್ದಾರೆ.

Advertisement

ಈ ಸರ್ಕಾರದ 2ಡಿ ಮೀಸಲಾತಿ ನಿರ್ಣಯವನ್ನು ಒಪ್ಪುವಿರಾ?
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ದೊಡ್ಡ ನಾಟಕವೆಂದರೆ ಮೀಸಲಾತಿ ಹೆಚ್ಚಳದ ಘೋಷಣೆ. ಎಸ್‌ಸಿ, ಎಸ್‌ಟಿ ಸೇರಿ ಎಲ್ಲಾ ಸಮಾಜಗಳ ಬಗ್ಗೆ ಸರ್ಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದರೆ ಈಗಿರುವ ಮೀಸಲಾತಿ ಮಿತಿ ಹೆಚ್ಚಳಕ್ಕೆ ಸಂಸತ್ತಿನಲ್ಲಿ ಅಂಗೀಕಾರ ಪಡೆಯಬೇಕಿತ್ತು. ಲಿಂಗಾಯತ ಮತ್ತು ಒಕ್ಕಲಿಗ ಸಮಾಜ ಯಾವತ್ತೂ ಕೊಡುವ ಸಮುದಾಯಗಳೇ ಹೊರತು ಬೇಡುವ ಸಮಾಜವಲ್ಲ. ಇನ್ನೊಬ್ಬರ ಮೀಸಲಾತಿ ಕಸಿದುಕೊಳ್ಳದೇ ಈಗಿರುವ ಮೀಸಲಾತಿ ಪ್ರಮಾಣದ ಮಿತಿ ಹೆಚ್ಚಿಸಿ ಕೊಡಬೇಕಿತ್ತು. ಹೀಗಾಗಿ ಇದು ತೋರಿಕೆಯ ಮೀಸಲಾತಿ. ಲಿಂಗಾಯತರಲ್ಲೇ ಬಡಿದಾಡುವ ರಾಜಕಾರಣ ಮಾಡಿಟ್ಟಿದೆ.

ಈ ಸಲ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ವಿಶ್ವಾಸವಿದೆಯಾ?
ಖಂಡಿತವಾಗಿಯೂ ನೂರಕ್ಕೆ ನೂರರಷ್ಟು ವಿಶ್ವಾಸವಿದೆ, ಇದರಲ್ಲಿ ಎರಡು ಮಾತಿಲ್ಲ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ಬಗ್ಗೆ ರಾಜ್ಯ ಮಾತ್ರವಲ್ಲ, ದೇಶದ ಜನರಿಗೆ ಭ್ರಮ ನಿರಸನವಾಗಿದೆ. ಮೋದಿ ಅವರ ಭರವಸೆಗಳು ಸುಳ್ಳಾಗಿವೆ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕಲೇ ಇಲ್ಲ. ಅವರೇ ಹೇಳಿದಂತೆ “ಅಚ್ಛೇ ದಿನ್‌’ ಬರಲೇ ಇಲ್ಲ.

ನಿಮ್ಮ ಪ್ರಕಾರ ಏನೇನು ಕಾರಣಗಳಿವೆ?

ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ದಿನನಿತ್ಯ ವಸ್ತುಗಳು, ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ಔಷಧಿಗಳು, ಹಾಲು, ಮೊಸಲು ಎಲ್ಲವೂ ದುಬಾರಿ ಆಗಿವೆ. ರೈತರ ಆದಾಯ ದ್ವಿಗುಣವಾಗಲೇ ಇಲ್ಲ, ಬದಲಿಗೆ ರಸಗೊಬ್ಬರದ ಬೆಲೆ ಗಗನಕ್ಕೇರಿದೆ. ಹೀಗಾಗಿ ಈ ಎಲ್ಲಾ ಹೊರೆಗಳನ್ನು ಇಳಿಸಲು ಕಾಂಗ್ರೆಸ್‌ ಇದುವರೆಗೆ 6 ಗ್ಯಾರೆಂಟಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನ ಮತ್ತೆ ಕಾಂಗ್ರೆಸ್‌ಗೆ ಮತ ಹಾಕಲು ನಿರ್ಧರಿಸಿರುವುದರಿಂದ ನಮ್ಮ ಸರ್ಕಾರ ರಚನೆ ಗ್ಯಾರಂಟಿ.

ಅಧಿಕಾರಕ್ಕೆ ಬರುವ ಮುನ್ನವೇ ಸಿಎಂ ಸ್ಥಾನಕ್ಕೆ ಪಕ್ಷದಲ್ಲಿ ಗುದ್ದಾಟ ನಡೆಯುತ್ತಿದೆಯಲ್ಲಾ?
ನೋಡಿ ಈ ವಿಷಯದಲ್ಲಿ ಯಾವುದೇ ಗುದ್ದಾಟ, ಗೊಂದಲವೂ ಇಲ್ಲ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯನವರು ಪಕ್ಷದ ಅತ್ಯಂತ ಹಿರಿಯ ನಾಯಕರು, ಅವರಿಗೆ ನಮ್ಮನ್ನು ಹೋಲಿಸಿಕೊಳ್ಳುವುದು ಸರಿಯಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಒಳ್ಳೆಯ ಕೆಲಸ ಮಾಡಿದ್ದಾರೆ, ಹಗಲಿರುಳು ಶ್ರಮಿಸಿ ಪಕ್ಷ ಸಂಘಟಿಸಿದ್ದಾರೆ. ನಾನು ಸೇರಿದಂತೆ ಸಿಎಂ ಸ್ಥಾನಕ್ಕೆ ಅನೇಕ ಸಮರ್ಥರಿದ್ಧಾರೆ. ನಮಗೆ ಈಗ ಸಿಎಂ ಸ್ಥಾನ ಮುಖ್ಯವಲ್ಲ, ಪಕ್ಷವನ್ನು ಬಹುಮತದತ್ತ ತರುವುದೇ ನಮ್ಮ ಗುರಿ, ಫ‌ಲಿತಾಂಶದ ಬಳಿಕ ಶಾಸಕಾಂಗ ಪಕ್ಷದ ಸಭೆ ಹಾಗೂ ಹೈಕಮಾಂಡ್‌ ಸಿಎಂ ಯಾರೆಂಬುದನ್ನು ನಿರ್ಧರಿಸುತ್ತದೆ.

ಎಂ.ಬಿ.ಪಾಟೀಲ್‌ ಕಾಂಗ್ರೆಸ್‌ನಲ್ಲಿ ಲಿಂಗಾಯತ ಲೀಡರಾ?
5 ವರ್ಷಗಳ ಕಾಲ ನೀರಾವರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಆ ನಂತರ ಗೃಹ ಸಚಿವನಾಗಿಯೂ ಕೆಲಸ ಮಾಡಿರುವೆ. ಸದ್ಯ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದ ಜತೆಗೆ ಚುನಾವಣೆಯ ಎಲ್ಲಾ ಹಂತದ ಎಲ್ಲಾ ಪ್ರಕ್ರಿಯೆಗಳಲ್ಲೂ ಪಕ್ಷ ನನಗೆ ಮಹತ್ವಕೊಟ್ಟಿದೆ. ನಾನು ಬಿ.ಎಸ್‌.ಯಡಿಯೂರಪ್ಪ ಅವರಿಗಿಂತ ಬೆಟರ್‌ ಸ್ಥಾನದಲ್ಲಿದ್ದೇನೆ. ಪಕ್ಷದ ಶಾಮನೂರು ಶಿವಶಂಕರಪ್ಪ ಹಿರಿಯರಿದ್ದು ಮಾರ್ಗದರ್ಶಕರಾಗಿದ್ದಾರೆ. ಈಶ್ವರ ಖಂಡ್ರೆ ಅವರು ಕಾರ್ಯಾಧ್ಯಕ್ಷರಾಗಿದ್ದಾರೆ. ಡಾ.ಶರಣ ಪ್ರಕಾಶ್‌ ಪಾಟೀಲ್‌ ಸೇರಿ ಅನೇಕರಿದ್ದಾರೆ.

-ಎಂ.ಎನ್‌.ಗುರುಮೂರ್ತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next