Advertisement

10 ರಿಂದ ಲಸಿಕಾ ಕಾರ್ಯಕ್ರಮ

06:26 AM Mar 08, 2019 | Team Udayavani |

ದಾವಣಗೆರೆ: ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮ ಶೇ.100ರಷ್ಟು ಯಶಸ್ವಿಗೊಳಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಹೇಳಿದ್ದಾರೆ.

Advertisement

ಗುರುವಾರ, ಮಾ.10 ರಿಂದ 13ರ ವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ನಡೆಯಲಿರುವ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿ ನಿರ್ವಹಿಸುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು, ಜಿಪಂ, ತಾಪಂ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು
ಕೈ ಜೋಡಿಸಿ ಕಾರ್ಯ ನಿರ್ವಹಿಸಿದಲ್ಲಿ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗುತ್ತದೆ. ಪೋಲಿಯೋದಿಂದ ಯಾವುದೇ ವ್ಯಕ್ತಿ ಅಂಗವೈಕಲ್ಯದಿಂದ ಬಳಲಬಾರದು. ಆದ್ದರಿಂದ ಲಸಿಕೆಯ ಪ್ರಯೋಜನ ಕುರಿತು ಪೋಷಕರಿಗೆ ಮಾಹಿತಿ ನೀಡಿಬೇಕು ಎಂದರು.

ವೈದ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ಜವಾಬ್ದಾರಿ ನೀಡಿ, ಎನ್‌ಜಿಓ, ಸ್ಥಳೀಯ ಸ್ವಯಂ ಸೇವಾ ಸಂಘಗಳ ಸಹಕಾರದಿಂದ ಬೂತ್‌ ಮಟ್ಟದಲ್ಲಿಯೇ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. 0 ರಿಂದ 5 ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಅವರು ಹೇಳಿದರು.

ಆರ್‌ಸಿಎಚ್‌ಓ ಡಾ| ಶಿವಕುಮಾರ್‌ ಮಾತನಾಡಿ, ಪೋಲಿಯೋ ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯತೆ ಉಂಟು ಮಾಡುವ ಮಾರಕ ರೋಗವಾಗಿದೆ. ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿವಿಧ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳ ಸಹಕಾರೊಂದಿಗೆ 1995ರಿಂದ ಎಲ್ಲಾ ರಾಜ್ಯಗಳಲ್ಲೂ ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ ಎಂದು ಹೇಳಿದರು. 

ದೇಶದಲ್ಲಿ 2011ರಲ್ಲಿ ಕೊನೆಯ ಪ್ರಕರಣ ದಾಖಲಾಗಿದ್ದರೆ, ರಾಜ್ಯದಲ್ಲಿ 2007ರಲ್ಲಿ ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಪ್ರಕರಣ ಪತ್ತೆಯಾಗಿತ್ತು. 2014ರಲ್ಲಿ ಭಾರತ ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಿದ್ದರೂ ನೆರೆಯ ರಾಷ್ಟ್ರಗಳಾದ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಕೆಲವು ಪ್ರಕರಣ ಕಂಡು ಬಂದ ಕಾರಣ, ಆ ರಾಷ್ಟ್ರಗಳಲ್ಲಿಯೂ ಸಂಪೂರ್ಣ ನಿರ್ಮೂಲನೆ ಆಗುವವರೆಗೆ ಮುಂಜಾಗ್ರತಾ ಕ್ರಮವಾಗಿ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮ ನಮ್ಮ ದೇಶದಲ್ಲಿ ನಡೆಸಲಾಗುವುದು ಎಂದರು.

Advertisement

ಮಾ.10ರಿಂದ 13ರ ವರೆಗೆ ಜಿಲ್ಲೆಯ ಎಲ್ಲಾ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಉಪಕೇಂದ್ರ, ಅಂಗನವಾಡಿ, ಶಾಲಾ-ಕಾಲೇಜುಗಳಲ್ಲಿ ಕೇಂದ್ರ ತೆರೆಯಲಾಗುವುದು. ಜಿಲ್ಲೆಯಲ್ಲಿ 1,95,964 ಅರ್ಹ ಮಕ್ಕಳ ಸಂಖ್ಯೆಯಿದ್ದು, ಒಟ್ಟು 1,146 ಲಸಿಕಾ ಕೇಂದ್ರ, 2,486 ಲಸಿಕಾ ಕಾರ್ಯಕರ್ತರು, 244 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ತ್ರಿಪುಲಾಂಭ ಮಾತನಾಡಿ, ಮೊದಲನೇ ಸುತ್ತಿನಲ್ಲಿ ನಡೆಯುವ ಬೂತ್‌ ಮಟ್ಟದ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಶೇ. 99ರಷ್ಟು ಗುರಿ ಸಾಧಿಸಲು ಶ್ರಮಿಸಬೇಕು. ಶೇ.ಒಂದನ್ನು ಮನೆ ಮನೆ ಭೇಟಿಯಿಂದ ಪೂರ್ಣಗೊಳಿಸಬೇಕು. ಬೂತ್‌ ಮಟ್ಟದ ಯಶಸ್ಸಿಗೆ ಹೆಚ್ಚಿನ ಪ್ರಚಾರದ ಅಗತ್ಯತೆ ಇದೆ. ಈಗಾಗಲೇ ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾವೊಂದು ಮಗುವೂ ಲಸಿಕೆಯಿಂದ ತಪ್ಪಿಸಿಕೊಳ್ಳದಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು.

ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆ ಹೆಚ್ಚಿನ ಮಾಹಿತಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿನ ಜಿಲ್ಲಾ ಸಂಯೋಜಕ ಮೋಹನ್‌ (ಮೊ ಸಂ: 7259003338) ಇವರನ್ನು ಸಂಪರ್ಕಿಸಬಹುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಚ್‌. ಬಸವರಾಜೇಂದ್ರ, ಜಿಪಂ ಮುಖ್ಯಲೆಕ್ಕಾಧಿಕಾರಿ ಟಿ.ಆಂಜನೇಯ ಪತ್ರಿಕಾಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next