ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಧಿಕಾ ಅವರ ಫೋಟೋ ತಿರುಚಿ ಸುಳ್ಳು ಸುದ್ದಿ ಹಬ್ಬಿಸಿ ವ್ಯಕ್ತಿತ್ವ ತೇಜೋವಧೆ ಮಾಡಿದ ಆರೋಪ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಮೂಲದ ಗಂಗಾಧರ್ ಅಮಲಾಜರಿ (30), ಬ್ರಹ್ಮಾವರ ಮೂಲದ ಚೌಕಿದಾರ್ ಅಜಿತ್‌ಶೆಟ್ಟಿ ಹೆರಂಜೆ (40) ಬಂಧಿತರು. ಏ.24 ರಂದು ಸಿಎಂ ಕುಮಾರಸ್ವಾಮಿ ಹಾಗೂ ರಾಧಿಕಾ ಅವರ ಹಳೆಯ ಪೋಟೋಗಳನ್ನು ತಿರುಚಿ uksuddi.in ವೆಬ್‌ಸೈಟ್‌ನಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿದ್ದು,
ಇದೇ ಸುದ್ದಿಯನ್ನು ಚೌಕಿದಾರ್ ಅಜಿತ್ ಶೆಟ್ಟಿ ತಮ್ಮ ಫೇಸ್‌ಬುಕ್‌ಖಾತೆಯಲ್ಲಿ ಹಂಚಿಕೊಂಡಿದ್ದು ಮಹಿಳೆಯ ಸ್ಥಾನಮಾನಕ್ಕೆ ಕುಂದು ಹಾಗೂ ಸಿಎಂ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದ ಆರೋಪ ಸಂಬಂಧ ಕ್ರಮ ಜರುಗಿಸುವಂತೆ ಕೋರಿ ಸಿಎಂ ಅವರ ಮಾಧ್ಯಮ ಕಾರ್ಯದರ್ಶಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ.
ಜತೆಗೆ, ಸುಳ್ಳು ಸುದ್ದಿ ಸೃಷ್ಟಿಸಿದ uksuddi.in ವೆಬ್‌ಸೈಟ್‌ನಲ್ಲಿ ಕೆಲಸ ಮಾಡುವ ಗಂಗಾಧರ್ ಅಮಲಾಜರಿ ಹಾಗೂ ಈ ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಚೌಕಿದಾರ್ ಅಜಿತ್ ಶೆಟ್ಟಿ ಹೆರಂಜೆ ಅವರನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಗಂಗಾಧರ್ uksuddi.in ವೆಬ್‌ಸೈಟ್‌ನಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ವೆಬ್‌ಸೈಟ್‌ನ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ಸಲುವಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.
ಗಾರ್ಮೆಂಟ್ಸ್ ನಡೆಸುವ ಅಜಿತ್ ಶೆಟ್ಟಿ ಹೆರಂಜೆ ಫೇಸ್‌ಬುಕ್ ಖಾತೆಯಲ್ಲಿ 100 ಅಧಿಕ ಸುಳ್ಳುಸುದ್ದಿ ಶೇರ್ ಮಾಡಿದ್ದು, ಅವರು ಬಿಜೆಪಿ ಬೆಂಬಲಿಗರಾಗಿದ್ದಾರೆ ಎಂಬುದು ಪ್ರಾಥಮಿಕ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.