ತೀರ್ಥಹಳ್ಳಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಗೆ 42 ಕೋಟಿ ಹಣ ನೀಡಬೇಕಾಗಿದೆ. ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ಪ್ರಧಾನಿ ಮೋದಿ ಅವರಿಂದ ಆ ಹಣವನ್ನು ಬ್ಯಾಂಕಿಗೆ ಕೊಡಿಸುವಂತಾಗಲಿ. ಶಾಸಕರೊಂದಿಗೆ ನಿಯೋಗ ತೆರಳಿ ಪ್ರಧಾನಿಯವರನ್ನು ಭೇಟಿ ಮಾಡಲು ನಾನು ಸಿದ್ಧನಿದ್ದೇನೆ. ಡಿಸಿಸಿ ಬ್ಯಾಂಕ್ ಪಕ್ಷ ಹಾಗೂ ಜಾತಿ ರಹಿತ ರೈತರ ಬ್ಯಾಂಕ್ ಆಗಿದೆ. ಶಾಸಕರು ಡಿಸಿಸಿ ಬ್ಯಾಂಕ್ ಬಗ್ಗೆ ಸುಳ್ಳು ಆರೋಪ ಮಾಡುವ ಬದಲು ಡಿಸಿಸಿ ಬ್ಯಾಂಕ್‌ಗೆ ಬರಬೇಕಾದ ಹಣವನ್ನು ಕೊಡಿಸಲು ಸಹಕರಿಸಲಿ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಸಹಕಾರಿ ಬ್ಯಾಂಕ್‌ಗಳಲ್ಲಿ ಹೆಚ್ಚುವರಿ ಸಾಲಕ್ಕಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಸುಳ್ಳು ಆರೋಪ ಮಾಡುವ ಮುನ್ನ ಬ್ಯಾಂಕ್ ವ್ಯವಹಾರಗಳ ಬಗ್ಗೆ
ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳುವುದು ಒಳ್ಳೆಯದು.
ಸಹಕಾರಿ ಬ್ಯಾಂಕ್‌ಗಳಲ್ಲಿ ಹೆಚ್ಚುವರಿ ಸಾಲದಲ್ಲಿ ರೈತರಿಂದ ನಾವು ತೆಗೆದುಕೊಳ್ಳುತ್ತಿರುವುದು ಷೇರು ಹಣವನ್ನು ಮಾತ್ರ. ಈ ವಿಚಾರದಲ್ಲಿ ಶಾಸಕರು ರಾಜಕೀಯ ಮಾಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್‌ನ ಬೆಳವಣಿಗೆ ಹಾಗೂ ಅಭಿವೃದ್ಧಿಯನ್ನು ಕಂಡು
ಅಪಪ್ರಚಾರ ಮಾಡುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿನ ನೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರವಾಗಿ ಎರಡು ಪಕ್ಷಗಳು ಒಂದಾಗಿ ಕಾರ್ಯ ನಿರ್ವಹಿಸುತ್ತಿವೆ. ಕಳೆದ ಉಪ ಚುನಾವಣೆಯಲ್ಲಿ ಸಮಯದ ಅಭಾವ ಇದ್ದ ಕಾರಣ ಗೆಲ್ಲಲಾಗಲಿಲ್ಲ. ರಾಜ್ಯ ಸರ್ಕಾರದ ಹಲವು ಯಶಸ್ವಿ ಯೋಜನೆಗಳು ಹಾಗೂ ಕೇಂದ್ರದ ಮೋದಿ ಸರ್ಕಾರದ ವೈಫಲ್ಯಗಳು ಈ ಬಾರಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗುತ್ತದೆ ಎಂದರು.
ಏ. 1 ರಂದು ತೀರ್ಥಹಳ್ಳಿಯಲ್ಲಿ ಜೆಡಿಎಸ್- ಕಾಂಗ್ರೆಸ್ ಜಂಟಿ ಕಾರ್ಯಕರ್ತರ ಸಭೆ ಪಟ್ಟಣದ ಸುವರ್ಣ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಪಕ್ಷದ ಹಿರಿಯ ಮುಖಂಡರಾದ ಕಾಗೋಡು ತಿಮ್ಮಪ್ಪ, ಅಭ್ಯರ್ಥಿ ಮಧು ಬಂಗಾರಪ್ಪ, ಆಗಮಿಸಲಿದ್ದಾರೆ.
ಏ. 3 ರಂದು ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೇಸ್ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಂದಾಗಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಹೋರಾಟ ನಡೆಸಲಿದ್ದೇವೆ ಎಂದರು. ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಡಾ| ಸುಂದರೇಶ್, ಕಟ್ಟೆಹಕ್ಕಲು ಕಿರಣ್, ರಾಘವೇಂದ್ರ ಶೆಟ್ಟಿ, ಸುಚ್ಚಿಂದ್ರ ಹೆಗ್ಡೆ, ಮಧುಕರ್, ಜೀನಾ ಡಿಸೋಜ ಇನ್ನಿತರರಿದ್ದರು.