Advertisement

ಖಾದಿ ಉತ್ಸವಕ್ಕೆ ಅದ್ದೂರಿ ಚಾಲನೆ

08:41 AM Jan 03, 2019 | Team Udayavani |

ಬೆಂಗಳೂರು: ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿರುವ “ರಾಷ್ಟ್ರೀಯ ಖಾದಿ ಉತ್ಸವ -2019’ಕ್ಕೆ ಬುಧವಾರ ಚಾಲನೆ ದೊರೆತಿದು,ª ಜ. 31 ರವರೆಗೂ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ರೇಷ್ಮೆ ಬಟ್ಟೆಗಳಿಗೆ ಶೇ.20 ರಷ್ಟು ಹಾಗೂ ಖಾದಿ ಬಟ್ಟೆಗಳ ಮೇಲೆ ಶೇ.35ರಷ್ಟು ರಿಯಾಯಿತಿ ಸಿಗಲಿದೆ.

Advertisement

ಕರ್ನಾಟಕ, ದೆಹಲಿ, ರಾಜಸ್ತಾನ, ಉತ್ತರಖಾಂಡ, ಜಮ್ಮು-ಕಾಶ್ಮೀರ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್‌, ತೆಲಂಗಾಣ ಸೇರಿದಂತೆ 15 ರಾಜ್ಯಗಳ ವೈವಿಧ್ಯಮಯ ಖಾದಿ ವಿನ್ಯಾಸ ವಸ್ತುಗಳು ಒಂದೇ ಸೂರಿನಲ್ಲಿ ದೊರೆಯಲಿವೆ.

ಖಾದಿ ಉತ್ಸವಕ್ಕೆ ಚಾಲನೆ ನೀಡಿದ ಸಣ್ಣ ಕೈಗಾರಿಕ ಸಚಿವ ಎಸ್‌.ಆರ್‌.ಶ್ರೀನಿವಾಸ್‌, ಖಾದಿ ಉತ್ಪನ್ನಗಳಿಗೆ ಶಾಶ್ವತ ಮಾರುಕಟ್ಟೆಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಯೋಜನೆಯನ್ನು ರೂಪಿಸಲಿದೆ ಎಂದು ಹೇಳಿದರು.

ತೆಂಗು ಹೆಚ್ಚಾಗಿ ಬೆಳೆಯುವ 14 ಜಿಲ್ಲೆಗಳ ಯುವಕರಿಗೆ ನಾರು ಉದ್ಯಮದಲ್ಲಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಮತ್ತಷ್ಟು ಯೋಜನೆಯನ್ನು ರೂಪಿಸುವ ಚಿಂತನೆಯಿದೆ. ನಾರು ನೀತಿ ಜಾರಿ ಬಗ್ಗೆ ಸರ್ಕಾರ ಉತ್ಸಾಹ ತೋರಿದ್ದು ಈ ಸಂಬಂಧ ಜ.8
ರಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು. 

ನಾರು ಉದ್ಯಮ ಕ್ಷೇತ್ರದಲ್ಲಿ ನೆರೆಯ ತಮಿಳುನಾಡು ಮತ್ತು ಕೇರಳ ಸಾಕಷ್ಟು ಪ್ರಗತಿ ಹೊಂದಿದ್ದು, ಅದೇ ಹಾದಿಯಲ್ಲಿ ಸಾಗುವ ಬಗ್ಗೆ ಯೋಜನೆಗಳನ್ನು ರೂಪಿಸಲಾಗುವುದು. ಆಂದೋಲನದ ರೀತಿಯಲ್ಲಿ ಖಾದಿ ಉದ್ಯಮಕ್ಕೆ ಬೇಡಿಕೆ ತಂದು ಕೊಡುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನ ನಡೆಯಲಿದೆ ಎಂದರು.

Advertisement

ಮೇಕ್‌ ಇನ್‌ ಯಿಂದ ಅಭಿವೃದ್ಧಿ ಅಸಾಧ್ಯ: ಹಿರಿಯ ಸ್ವಾತಂತ್ರ್ಯಾ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ಮೇಕ್‌ ಇನ್‌ ಮತ್ತು ಮೇಡ್‌ ಇನ್‌ ಅಭಿಯಾನದಿಂದ ಈ ದೇಶದ ಅಭಿವೃದ್ಧಿ ಅಸಾಧ್ಯ. ವಿದೇಶಿ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಿ ನಮ್ಮಲ್ಲಿರುವ ಸಂಪತ್ತನ್ನು ಕೊಳ್ಳೆಹೊಡೆಯುತ್ತಿವೆ. ಇಂತಹ ಉದ್ಯಮಿಗಳಿಗೆ ಕೇಂದ್ರ ಸರ್ಕಾರ ರತ್ನಗಂಬಳಿಯ ಸ್ವಾಗತ ಕೋರುತ್ತಿದ್ದು ಹೀಗೆ ಮಾಡಿದರೆ ಗ್ರಾಮೀಣ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಗಾಂಧೀಜಿ ಅವರು ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಆದರೆ ಈಗ ಜನರು ವಿದೇಶಿ ವಸ್ತುಗಳ ವ್ಯಾಮೋಹಕ್ಕೆ ಬಂದಿದ್ದಾರೆ. ಹೀಗಾಗಿಯೇ ಕಮ್ಮಾರಿಕೆ, ಕುಂಬಾರಿಕೆ ಸೇರಿದಂತೆ ಹಲವು ಗ್ರಾಮೀಣ ಕೈ ಕಸಬುಗಳು ಮರೆಯಾಗುತ್ತಿದ್ದು ಗುಡಿ ಕೈಗಾರಿಕೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಬೇಕಾಗಿದೆ ಎಂದರು. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಮಹಾಂತೇಶ ಉಪಸ್ಥಿತರಿದ್ದರು.

ಸರ್ಕಾರವು ಶಾಲೆಗಳ ವಿದ್ಯಾರ್ಥಿಗಳಿಗೆ ಖಾದಿ ಸಮವಸ್ತ್ರ ಪೂರೈಸುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ
ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಸಬ್ಸಿಡಿ ಮತ್ತು ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಗುಡಿ ಕೈಗಾರಿಕೆಗಳತ್ತ ಯುವಕರನ್ನು ಸೆಳೆಯಲು ಹೆಚ್ಚು ಪ್ರೋತ್ಸಾಹ ಧನ ನೀಡಲಾಗುವುದು.
 ಎಸ್‌.ಆರ್‌.ಶ್ರೀನಿವಾಸ್‌, ಸಣ್ಣ ಕೈಗಾರಿಕಾ ಸಚಿವ

50 ಕೋಟಿ ರೂ ನಿರೀಕ್ಷೆ
ಕಳೆದ ಬಾರಿಯ ಖಾದಿ ಉತ್ಸವದಲ್ಲಿ 1,04,908 ಜನರು ಭೇಟಿ ನೀಡಿದ್ದು 3280.33 ಲಕ್ಷ ವಹಿವಾಟು ನಡೆದಿತ್ತು. ಈ ಬಾರಿ 1.5 ಲಕ್ಷ ಜನರು ಉತ್ಸವಕ್ಕೆ ಭೇಟಿ ನೀಡುವ ನಿರೀಕ್ಷೆ ಇದ್ದು 50.ಕೋಟಿ ರೂ. ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳು ಮಾರಾಟವಾಗುವ ನಿರೀಕ್ಷೆ ಇದೆ. ರಜೆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಫ್ಯಾಷನ್‌ ಶೋ ಹಮ್ಮಿಕೊಳ್ಳಲಾಗಿದೆ.

10 ರೂ. ಪ್ರವೇಶ ಶುಲ್ಕ
ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಿರುವ ಖಾದಿ ಉತ್ಸವಕ್ಕೆ 1.50 ಕೋಟಿ ಖರ್ಚಾಗುತ್ತದೆ. ಸರಕಾರ 75 ಲಕ್ಷ ರೂ. ಅನುದಾನ ನೀಡಿದೆ. ಹೀಗಾಗಿ ಮಳಿಗೆಗಳಿಗೆ 25-30 ಸಾವಿರ ರೂ.ಬಾಡಿಗೆ ನಿಗದಿಪಡಿಸಿದ್ದು, ಗ್ರಾಹಕರಿಂದ 10 ರೂ. ಪ್ರವೇಶ ಶುಲ್ಕವನ್ನು ಪಡೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next