ಹುಬ್ಬಳ್ಳಿ: ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ವಿವಿಧ ಮಾರ್ಗಗಳಲ್ಲಿ ಸ್ಲೀಪರ್, ವೋಲ್ವೋ ಮತ್ತು ರಾಜಹಂಸ ಬಸ್‌ಗಳನ್ನು ಹೆಚ್ಚಿಸಲಾಗಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಒಂಬತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ಪಿಂಪ್ರಿ, ಹೈದರಾಬಾದ್, ಸೊಲ್ಲಾಪುರ, ಮಂಗಳೂರು ಮತ್ತು ಬೆಂಗಳೂರಿಗೆ ಮತ್ತಷ್ಟು ಸ್ಲೀಪರ್, ವೋಲ್ವೋ ಮತ್ತು ರಾಜಹಂಸ ಬಸ್‌ಗಳ ಸಂಚಾರ ಪುನರಾರಂಭಿಸಲಾಗಿದೆ. ಈ ಬಸ್‌ಗಳು ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಇದನ್ನೂ ಓದಿ:ನನ್ನ ಹತ್ಯೆಗೂ ಸುಪಾರಿ ಕೊಟ್ಟಿದ್ದರು ಎಂಬ ವಿಷಯ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ: ಮುತ್ತಗಿ
ಹುಬ್ಬಳ್ಳಿ-ಪಿಂಪ್ರಿ (ರಾತ್ರಿ 9:00, 10:15), ಹುಬ್ಬಳ್ಳಿ-ಹೈದರಾಬಾದ್ (ರಾತ್ರಿ 8:00, 9:45), ಹುಬ್ಬಳ್ಳಿ-ಬೆಂಗಳೂರು (ರಾತ್ರಿ 8:30, 9:00, 11:00), ಹುಬ್ಬಳ್ಳಿ-ಸೊಲ್ಲಾಪುರ (ರಾತ್ರಿ 10:15), ಹುಬ್ಬಳ್ಳಿ- ಮಂಗಳೂರು (ರಾತ್ರಿ 8:45) ಕ್ಕೆ ಹೊರಡಲಿವೆ. ಈ ಬಸ್‌ಗಳಿಗೆ ಆನ್‌ಲೈನ್ ಮತ್ತು ಮುಂಗಡ ಬುಕ್ಕಿಂಗ್ ಕೌಂಟರ್‌ಗಳ ಮೂಲಕ ಆಸನಗಳನ್ನು ಕಾಯ್ದಿರಿಸುವ ಅವಕಾಶ ಕಲ್ಪಿಸಲಾಗಿದೆ.
4 ಅಥವಾ ಹೆಚ್ಚು ಆಸನಗಳಿಗೆ ಒಂದೇ ಟಿಕೆಟ್ ಪಡೆದರೆ ಮೂಲ ಪ್ರಯಾಣ ದರದಲ್ಲಿ ಶೇ.5 ರಿಯಾಯಿತಿ, ಹೋಗುವಾಗ ಮತ್ತು ಬರುವಾಗಿನ ಪ್ರಯಾಣಕ್ಕೆ ಒಂದೇ ಬಾರಿಗೆ ಟಿಕೆಟ್ ಪಡೆದರೆ ಬರುವಾಗಿನ ಪ್ರಯಾಣದ ಮೂಲ ಪ್ರಯಾಣ ದರದಲ್ಲಿ ಶೇ.10 ರಿಯಾಯಿತಿ ದೊರೆಯಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.