ಶಿವಮೊಗ್ಗ: ಕೋವಿಡ್-19 ಸೋಂಕಿನಿಂದ ಜನತೆ ಸಂಕಷ್ಟ ಅನುಭವಿಸುತ್ತಿದ್ದರೆ, ಇದೀಗ ಜಾನುವಾರುಗಳಿಗೆ ಹೊಸ ಕಷ್ಟ ಎದುರಾಗಿದೆ. ಕೋವಿಡ್-19 ನಂತೆಯೇ ನೇರ ಸಂಪರ್ಕದಿಂದಲೇ ಹರಡುವ ರೋಗವೊಂದು ರಾಜ್ಯದ ಕೆಲವು ಜಿಲ್ಲೆಗಳ ದನಗಳಿಗೆ ಕಾಣಿಸಿಕೊಂಡಿದ್ದು, ಅವುಗಳನ್ನೂ ಐಸಲೋಶನ್ ಮಾಡಿ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.
ಚರ್ಮಗಂಟು ರೋಗ (ಲಂಪಿ ಸ್ಕಿನ್ ಡಿಸೀಸ್) ಎಂಬ ರೋಗ ಇದೀಗ ಮಲೆನಾಡಿನ ಜಾನುವಾರುಗಳಲ್ಲಿ ಕಾಣಿಸಿಕೊಂಡಿದೆ. ಪಾಕ್ಸ್ ವಿರಿಡೆ ಎಂಬ ವೈರಸ್ ನಿಂದ ಈ ಚರ್ಮಗಂಟು ರೋಗ ಹರಡುತ್ತಿದೆ.
ಆಫ್ರೀಕಾ, ರಷ್ಯ, ಯುರೋಪ್ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಕಾಯಿಲೆ, ದೇಶದ ಕೇರಳ ಹಾಗೂ ಒಡಿಸ್ಸಾದಲ್ಲಿ ಕಾಣಿಸಿಕೊಂಡಿತ್ತು. ರಾಜ್ಯದ ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಇದೀಗ ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲೂ ಕಾಣಿಸಿಕೊಂಡಿದೆ. ಯಾದಗಿರಿ ಜಿಲ್ಲೆಯಲ್ಲಿ ಸುಮಾರು ಒಂದೂವರೆ ತಿಂಗಳ ಕಾಲ ಈ ರೋಗದ ಕಾಟ ಇದ್ದಿದ್ದು, ಇದೀಗ ಸೂಕ್ತ ಚಿಕಿತ್ಸೆಯ ಕಾರಣದಿಂದ ಸಂಪೂರ್ಣ ಗುಣಮುಖವಾಗಿದೆ.
ಇದನ್ನೂ ಓದಿ:ಕಾಲೇಜು ಆರಂಭಕ್ಕೆ ದಿನ ನಿಗದಿ: ನವೆಂಬರ್ 17ರಿಂದ ಕಾಲೇಜು ಆರಂಭಕ್ಕೆ ಸರ್ಕಾರ ಸಜ್ಜು
ಇದೀಗ ಮಲೆನಾಡಿನ 50 ಕ್ಕೂ ಹೆಚ್ಚು ಹಳ್ಳಿಗಳ ಜಾನುವಾರುಗಳಲ್ಲಿ ಈ ಚರ್ಮಗಂಟು ರೋಗ ಪತ್ತೆಯಾಗಿದೆ. ಜಾನುವಾರುಗಳ ನೇರ ಸಂಪರ್ಕ, ಮೇವು, ನೀರಿನಿಂದಲೂ ಈ ಕಾಯಿಲೆ ಹರುಡುತ್ತದೆ. ಚರ್ಮಗಂಟು ರೋಗ ನಿವಾರಣೆಗೆ ಜಾನುವಾರುಗಳಿಗೆ ಐಸೋಲೇಶನ್ ಮಾಡಿ ಚಿಕಿತ್ಸೆ ನೀಡಲಾಗುತ್ತದೆ.
ರೋಗಗ್ರಸ್ತ ಜಾನುವಾರುಗಳನ್ನು ಗುಂಪಿನಿಂದ ಪ್ರತ್ಯೇಕವಾಗಿರಸಲು ಪಶುಪಾಲನಾ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಗುಂಪಿನಲ್ಲಿ ಶೇ.20 ರಷ್ಟು ಜಾನುವಾರುಗಳಿಗೆ ರೋಗ ತಗುಲುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಕೊಟ್ಟಿಗೆಯಲ್ಲಿ ಬೆಳಗ್ಗೆ, ಸಂಜೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಇದಕ್ಕೆ ಲಸಿಕೆ ಕೂಡ ಲಭ್ಯವಿದೆ. ಮೂರು ದಿನದಲ್ಲಿ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಎಂದು ಪಶುಪಾಲನೆ ಇಲಾಖೆ ಜಂಟಿ ನಿರ್ದೇಶಕ ಡಾ.ಸದಾಶಿವ ಮಾಹಿತಿ ನೀಡಿದರು