ಚಿಕ್ಕೋಡಿ: ಜಾನುವಾರುಗಳಲ್ಲಿ ತೀವ್ರವಾಗಿ ಹರಡಿರುವ ಚರ್ಮ ಗಂಟು ರೋಗ ಬಾಧೆ ರೈತರನ್ನು ಚಿಂತೆಗೆ ದೂಡಿದೆ. ರೈತರ ಬದುಕಿನ ಆಧಾರಸ್ಥಂಭವಾಗಿರುವ ಜಾನುವಾರಗಳಿಗೆ ವ್ಯಾಪಕವಾಗಿ ಹರಡಿಕೊಂಡಿರುವ ಸಾಂಕ್ರಾಮಿಕ ರೋಗದ ಹತೋಟಿಗೆ ಪಶುಸಂಗೋಪನಾ ಇಲಾಖೆ ಹಗಲಿರುಳು ಶ್ರಮಿಸುತ್ತಿದ್ದು, ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಲಸಿಕೆ ಪಡೆಯಲು ಪಶು ಇಲಾಖೆ ಡಂಗೂರ ಸಾರುತ್ತಿದೆ.
ಕಳೆದ ಮೂರು ತಿಂಗಳ ಹಿಂದೆಯಷ್ಟೇ ನೆರೆಯ ಗಡಿ ಭಾಗದ ಮಹಾರಾಷ್ಟ್ರದಲ್ಲಿ ಕಂಡು ಬಂದ ಈ ಸಾಂಕ್ರಾಮಿಕ ರೋಗ ಸದ್ಯ ಇಡೀ ಚಿಕ್ಕೋಡಿ ತಾಲೂಕು ಆವರಿಸಿಕೊಂಡಿದೆ. ಚಿಕ್ಕೋಡಿ ತಾಲೂಕಿನ 29 ಗ್ರಾಮಗಳಲ್ಲಿ ಈ ರೋಗ ಹಬ್ಬಿಕೊಂಡಿದ್ದು, ಎಮ್ಮೆ ಹೊರತುಪಡಿಸಿ ಎತ್ತು, ಆಕಳು ಮತ್ತು ಹೋರಿಗಳಲ್ಲಿ ಈ ರೋಗ ವ್ಯಾಪಕವಾಗಿ ಕಾಣುತ್ತಿದೆ.
ಚಿಕ್ಕೋಡಿ ತಾಲೂಕಿನ 29 ಗ್ರಾಮಗಳಲ್ಲಿ ಹರಡಿಕೊಂಡಿರುವ ಚರ್ಮ ಗಂಟು ರೋಗ ಈವರೆಗೆ 267 ಜಾನುವಾರಗಳಿಗೆ ಅಂಟಿಕೊಂಡಿದೆ. ಅದರಲ್ಲಿ 22 ಜಾನುವಾರಗಳು ಮೃತಪಟ್ಟಿವೆ. 77 ಜಾನುವಾರುಗಳು ಚೇತರಿಸಿಕೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಪಶುಸಂಗೋಪನಾ ಇಲಾಖೆಯು ತಾಲೂಕಿನ 6955 ಜಾನುವಾರುಗಳಿಗೆ ಲಸಿಕೆ ನೀಡಿದೆ. ಇನ್ನೂ 3545 ಲಸಿಕೆ ಇದ್ದು, ರೈತರು ಪಶುಸಂಗೋಪನಾ ಇಲಾಖೆ ವೈದ್ಯರನ್ನು ಸಂಪರ್ಕಿಸಿ ದನಕರುಗಳಿಗೆ ಲಸಿಕೆ ನೀಡಿ ರೋಗ ಬರದಂತೆ ತಡೆಯಬೇಕು ಎನ್ನುತ್ತಾರೆ ವೈದ್ಯರು.
ಇದೊಂದು ಸಾಂಕ್ರಾಮಿಕ ರೋಗವಾಗಿದ್ದರಿಂದ ಒಂದು ಜಾನುವಾರಿನಿಂದ ಮತ್ತೂಂದು ಜಾನುವಾ ರುಗೆ ಅತಿ ವೇಗವಾಗಿ ಹರಡುತ್ತದೆ. ಜಾನುವಾರು ಚರ್ಮದ ಮೇಲೆ ಗಂಟಿನ ತರಹ ಗುಳ್ಳೆಗಳು ಕಾಣಿಸಿ ಕೊಳ್ಳುತ್ತವೆ. ತಕ್ಷಣಾ ಚಿಕಿತ್ಸೆ ನೀಡಿದರೆ ದನಕರುಗಳು ಗುಣಮುಖವಾಗುತ್ತವೆ. ನಿರ್ಲಕ್ಷé ಮಾಡಿದರೆ ದನಗಳು ಸಾಯುವ ಸಾಧ್ಯತೆ ಹೆಚ್ಚು. ವೈದ್ಯರು ಹೇಳುವಂತೆ ಸೋಂಕಿತ ಪ್ರಾಣಿಗಳನ್ನು ಆರೋಗ್ಯಕರ ಪ್ರಾಣಿಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿಸಬೇಕು. ಆರೋಗ್ಯಕರ ಪ್ರಾಣಿಗಳಿಗೆ ಉಳಿದ ನೀರು ಅಥವಾ ಸೋಂಕಿತ ಪ್ರಾಣಿಗಳ ಮೇವನ್ನು ತಿನ್ನಲು ಹಾಕಬಾರದು.
ರೋಗ ಬಾಧೆಯಿಂದ ಜಾನುವಾರು ಸತ್ತರೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ.ಎತ್ತಿಗೆ 30 ಸಾವಿರ, ಹೋರಿಗೆ 30 ಸಾವಿರ ರೂ , ಆಕಳು ಸತ್ತರೆ 25 ಸಾವಿರ ರೂ ಮತ್ತು ಕರು ಸತ್ತರೆ 5 ಸಾವಿರ ರೂ ನೀಡಲಾಗುತ್ತದೆ.
ಚರ್ಮ ಗಂಟು ರೋಗ ಬಾಧೆ ಹತೋಟಿಗೆ ಬರುತ್ತಿದೆ. ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದೆ. ಯಾರು ಲಸಿಕೆ ಹಾಕಿಸಿಲ್ಲವೋ ಅವರು ಕೂಡಲೇ ಪಶು ವೈದ್ಯರನ್ನು ಸಂಪರ್ಕಿಸಿ ಲಸಿಕೆ ಕೊಡಿಸಬೇಕು. ಈಗಾಗಲೇ ಮೃತಪಟ್ಟ 22 ಜಾನುವಾರಗಳಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪರಿಹಾರ ರೈತರ ಬ್ಯಾಂಕ ಖಾತೆಗೆ ಜಮೆ ಆಗುತ್ತದೆ.
-ಡಾ| ಸದಾಶಿವ ಉಪ್ಪಾರ, ಸಹಾಯಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ-ಚಿಕ್ಕೋಡಿ
-ಮಹಾದೇವ ಪೂಜೇರಿ