Advertisement

ಕರಾವಳಿಯಲ್ಲಿ ಉಲ್ಬಣಿಸುತ್ತಿದೆ ಚರ್ಮಗಂಟು ರೋಗ; ತಿಂಗಳಲ್ಲಿ ಸಾವಿರ ದಾಟಿದ ಪ್ರಕರಣ

01:40 AM Dec 17, 2022 | Team Udayavani |

ಕೋಟ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳ ಚರ್ಮಗಂಟು ರೋಗ ಉಲ್ಬಣಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ತಿಂಗಳ ಹಿಂದೆ ಬೆರಳೆಣಿಕೆಯಷ್ಟಿದ್ದ ಸೋಂಕಿನ ಪ್ರಮಾಣ ಒಂದೇ ತಿಂಗಳಲ್ಲಿ 601ಕ್ಕೇರಿದೆ. ದ.ಕ.ದಲ್ಲಿ ನೂರರಷ್ಟಿದ್ದ ಪ್ರಕರಣಗಳು ಪ್ರಸ್ತುತ 600ಕ್ಕೇರಿವೆ (ಡಿ. 14 ಅಂಕಿ ಅಂಶದಂತೆ). ದ.ಕ.ದಲ್ಲಿ ಇದುವರೆಗೆ 14 ದನಗಳು ಕಾಯಿಲೆಯಿಂದ ಸಾವನ್ನಪ್ಪಿವೆ. ಉಡುಪಿ ಜಿಲ್ಲೆಯಲ್ಲಿ ಅಧಿಕೃತ ಸಾವಿನ ವರದಿ ದಾಖಲಾಗಿಲ್ಲ.

Advertisement

ಚರ್ಮಗಂಟು ಆರಂಭದಲ್ಲಿ ಗೋವಿನ ಮೈಯಲ್ಲಿ ಗಂಟು ರೂಪದಲ್ಲಿ ಕಾಣಿಸಿಕೊಂಡು ಕೆಲವೇ ದಿನಗಳಲ್ಲಿ ಮೈಯೆಲ್ಲ ಆವರಿಸಿಕೊಳ್ಳುತ್ತದೆ. ಬಳಿಕ ಒಡೆದು ಕೀವು ಸೋರುತ್ತದೆ. ಕಣ್ಣು, ಮೂಗಿನಿಂದ ನೀರು ಸೋರು ವುದು, ಊತ,ಜ್ವರ, ಹಾಲಿನ ಪ್ರಮಾಣ ಕಡಿಮೆ ಯಾಗುವುದು, ಮೇವು ಸ್ವೀಕರಿಸುವುದು ಕಡಿಮೆ ಯಾಗು ವುದು ರೋಗದ ಸಾಮಾನ್ಯ ಲಕ್ಷಣಗಳಾ ಗಿವೆ. ಕ್ರಮೇಣ ಬಾಯಿಯಲ್ಲಿ ಹುಣ್ಣು ಗಳು ಉಂಟಾಗಿ ಆಹಾರ ತಿನ್ನಲು ಕಷ್ಟವಾಗಿ ಜ್ವರ, ನೋವಿನಿಂದ ಪ್ರಾಣಿಗಳು ಮೃತಪಡುವ ಸಾಧ್ಯತೆ ಇರುತ್ತದೆ. ಕಾಯಿಲೆ ನೊಣಗಳ ಮೂಲಕ ಹಬ್ಬುತ್ತದೆ.\
\
ಕೊರೊನಾ ಮಾದರಿ ಚಿಕಿತ್ಸೆ
ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜಾನುವಾರುಗಳಿಗೆ ಈ ಕಾಯಿಲೆ ಹೆಚ್ಚು ಬಾ«ಧಿಸುತ್ತದೆ ಹಾಗೂ ರೋಗಕ್ಕೆ ನಿರ್ದಿಷ್ಟವಾದ ಔಷಧವಿಲ್ಲ. ಕಾಯಿಲೆ ಬರದಂತೆ ತಡೆಯಲು ಕೊರೊನಾ ಲಸಿಕೆ ಮಾದರಿಯಲ್ಲಿ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ನೀಡಲಾಗುತ್ತದೆ. ರೋಗ ಬಂದ ಮೇಲೆ ಒಡೆದ ಗಂಟುಗಳ ಗಾಯ ನಿಯಂತ್ರಣ, ಜ್ವರ ನಿಯಂತ್ರಣ ಸೇರಿದಂತೆ ಸಮಸ್ಯೆಯ ಲಕ್ಷಣಕ್ಕೆ ತಕ್ಕಂತೆ ಔಷಧ ನೀಡಲಾಗುತ್ತದೆ. ವೀಳ್ಯದೆಲೆ, ಮೆಣಸು, ಉಪ್ಪು, ಅಚ್ಚು ಬೆಲ್ಲವನ್ನು ರುಬ್ಬಿ ಉಂಡೆ ಮಾಡಿ ಮೂರರಿಂದ ನಾಲ್ಕು ಉಂಡೆಗಳನ್ನು ದಿನಕ್ಕೆ ಎರಡು ಬಾರಿ ರಾಸುಗಳಿಗೆ ತಿನ್ನಿಸುವುದು ಹಾಗೂ ರಾಸುಗಳ ಮೈಮೇಲಿನ ಗಾಯಗಳಿಗೆ ಮತ್ತು ಗಂಟುಗಳಿಗೆ ಎಳ್ಳೆಣ್ಣೆ, ಅರಿಶಿನ ಪುಡಿ, ಮೆಹಂದಿ ಸೊಪ್ಪು, ತುಳಸಿ, ಬೇವಿನ ಸೊಪ್ಪನ್ನು ಮಿಶ್ರಣ ಮಾಡಿ ಹಚ್ಚುವುದು ಮುಂತಾದ ಆಯುರ್ವೇದ ವಿಧಾನವೂ ರೋಗ ನಿಯಂತ್ರಣಕ್ಕಾಗಿ ಹೆಚ್ಚು ಚಾಲ್ತಿಯಲ್ಲಿದೆ. ಆರಂಭದಲ್ಲಿ ಚಿಕಿತ್ಸೆ ನೀಡಿದರೆ ಕಾಯಿಲೆಯನ್ನು ವಾರದೊಳಗೆ ಗುಣಪಡಿಸಬಹುದು. ರೋಗ ಬಂದ ಪ್ರಾಣಿಗಳನ್ನು ಇತರ ಪ್ರಾಣಿಗಳಿಂದ ದೂರು ಇಡುವುದು ಹಾಗೂ ಸ್ವತ್ಛತೆಗೆ ಹೆಚ್ಚಿನ ಆಧ್ಯತೆ ನೀಡುವುದು ಅತ್ಯಗತ್ಯ ಎನ್ನುವುದು ವೈದ್ಯರ ಸಲಹೆಯಾಗಿದೆ.

ಲಸಿಕೆಯಲ್ಲಿ ಹಿನ್ನಡೆ
ಇಲಾಖೆ ವತಿಯಿಂದ ಚರ್ಮಗಂಟು ರೋಗ ನಿರೋಧಕ ಲಸಿಕೆಯನ್ನು ಜಾನುವಾರುಗಳಿಗೆ ನೀಡಲಾಗಿತ್ತು. ಆದರೆ ಸಾಕಷ್ಟು ರೈತರು ಕಾಯಿಲೆ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಮತ್ತು ರೋಗದ ತೀವ್ರತೆ ಅರಿಯದೆ ಲಸಿಕೆ ಹಾಕಿಸಿಲ್ಲ. ಹೀಗಾಗಿ ಸಮಸ್ಯೆ ಹೆಚ್ಚುತ್ತಿದೆ. ಇನ್ನೂ ಕೂಡ ಲಸಿಕೆ ಹಾಕಿಸಲು ಅವಕಾಶವಿದ್ದು ಹೈನುಗಾರರು ಎಚ್ಚೆತ್ತುಕೊಳ್ಳಬೇಕು ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ಅನಾಹುತಕ್ಕೆ ಪರಿಹಾರ
ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆ ಯಡಿ ವಿಮೆ ಮಾಡಿಸಿಕೊಂಡ ಜಾನುವಾರು ಈ ಕಾಯಿಲೆಯಿಂದ ಮೃತಪಟ್ಟರೆ ಹೆಚ್ಚಿನ ಪರಿಹಾರ ನೀಡಲಾಗುತ್ತದೆ ಹಾಗೂ ಸರಕಾರದಿಂದ ಕೂಡ ಪರಿಹಾರ ನೀಡುವ ವ್ಯವಸ್ಥೆ ಇದೆ. ಆದರೆ ಈ ಇದನ್ನು ಪಡೆಯಲು ಕನಿಷ್ಠ ಒಂದು ವಾರಗಳ ತನಕ ಸರಕಾರಿ ಇಲಾಖೆಯ ಪಶು ವೈದ್ಯರಿಂದ ರೋಗಗ್ರಸ್ತ ಪ್ರಾಣಿಗೆ ಚಿಕಿತ್ಸೆ ನೀಡಿರಬೇಕು ಹಾಗೂ ಮಾನದಂಡಗಳನ್ನು ಸರಿಯಾಗಿ ಪಾಲಿಸಬೇಕಾಗುತ್ತದೆ.

ಉಡುಪಿ ಜಿಲ್ಲೆಯಲ್ಲಿ 15 ದಿನಗಳಿಂದ ಕಾಯಿಲೆ ಪ್ರಮಾಣ ಹೆಚ್ಚುತ್ತಿದ್ದು ಪ್ರಸ್ತುತ 343 ದನಗಳು ಚಿಕಿತ್ಸೆಯಲ್ಲಿವೆ. 258 ಗುಣಮುಖವಾಗಿದೆ. ಇಲಾಖೆಯ ಔಷಧೋಪಚಾರ ಶೇ. 100 ಯಶಸ್ವಿಯಾಗುತ್ತಿದೆ. ಕಾಯಿಲೆ ಒಂದರಿಂದ ಇನ್ನೊಂದಕ್ಕೆ ಹರಡದಂತೆ ರೈತರು ಮುಂಜಾಗ್ರತೆ ವಹಿಸಬೇಕು.
– ಡಾ| ಶಂಕರ್‌ ಶೆಟ್ಟಿ,
ಉಪ ನಿರ್ದೇಶಕರು
ಪ.ವೈ. ಇಲಾಖೆ ಉಡುಪಿ

Advertisement

ದ.ಕ.ದಲ್ಲಿ 600ಕ್ಕೂ ಹೆಚ್ಚು ದನಗಳು ಕಾಯಿಲೆಯಿಂದ ಬಳಲುತ್ತಿವೆ. ಅಂದಾಜು 14 ದನಗಳು ಸಾವನ್ನಪ್ಪಿವೆ. ರೈತರು ಮುನ್ನೆಚ್ಚರಿಕೆ ವಹಿಸುವುದು ಹಾಗೂ ಆರಂಭದಲ್ಲೇ ಚಿಕಿತ್ಸೆ ನೀಡುವುದು ಅಗತ್ಯ.
 - ಡಾ| ಅರುಣ್‌ ಕುಮಾರ್‌ ಶೆಟ್ಟಿ,
ಉಪ ನಿರ್ದೇಶಕರು ಪ.ವೈ. ಇಲಾಖೆ ದ.ಕ.

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.