ಬೆಂಗಳೂರು: ಬಸವೇಶ್ವರನಗರ ಕಂಟ್ರಿ ಕ್ಲಬ್ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಲಕ್ಕಿಡಿಪ್‌ನಲ್ಲಿ ಬಹುಮಾನ ಬಂದಿದ್ದು ವಿದೇಶ ಪ್ರವಾಸ ಹೋಗಬಹುದು ಎಂದು ನಂಬಿಸಿ ಅರವತ್ತು ಸಾವಿರ ರೂ. ವಂಚನೆ ಮಾಡಿರುವುದಾಗಿ ಬಸವೇಶ್ವರನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಸಂಬಂಧ ಗೋವಿಂದರಾಜನಗರ ನಿವಾಸಿ ವಿನೀತ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಬಸವೇಶ್ವರನಗರದ ಕಂಟ್ರಿಕ್ಲಬ್‌ನ ಹರ್ಷ, ಮಹಮ್ಮದ್ ರಾಹಿಲ್ ಮತ್ತು ಅಕ್ಮಲ್ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2018ರ ಮಾರ್ಚ್‌ನಲ್ಲಿ ವಿನೀತ್ ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ಪದೇ ಪದೆ ಕರೆಗಳು ಬರುತ್ತಿದ್ದು, ಕರೆ ಸ್ವೀಕರಿಸಿದಾಗ ಮಹಿಳೆಯೊಬ್ಬರು, ಬಸವೇಶ್ವರ ನಗರದ ಕಂಟ್ರಿಕ್ಲಬ್‌ನಿಂದ ಮಾತನಾಡುತ್ತಿದ್ದೇವೆ. ತಮ್ಮ ಮೊಬೈಲ್ ನಂಬರ್‌ಗೆ ಲಕ್‌ಡಿಪ್‌ನಲ್ಲಿ ಬಹುಮಾನ ಬಂದಿದ್ದು, ನಾಲ್ಕು ಉಡುಗೊರೆ ಮತ್ತು ಹಾಲಿಡೇಸ್ ಗಿಫ್ಟ್ ಬಂದಿದೆ. ದಂಪತಿ ಸಮೇತ ಕ್ಲಬ್‌ಗ ಬರುವಂತೆ ಆಹ್ವಾನಿಸಿದ್ದಾರೆ.
ನಂತರ ವಿನೀತ್ ತಮ್ಮ ಪತ್ನಿ ಜತೆ ಮಾ.5ರಂದು ಬಸವೇಶ್ವರ ನಗರದ ಕಂಟ್ರಿಕ್ಲಬ್‌ಗ ಹೋದಾಗ ಅಲ್ಲಿದ್ದ ಹರ್ಷ ಎಂಬಾತ ದಂಪತಿಯನ್ನು ಪರಿಚಯಿಸಿಕೊಂಡು, ನಮ್ಮ ಕ್ಲಬ್‌ಗಳಲ್ಲಿ ನಿಮಗೆ ಉಳಿದುಕೊಳ್ಳಲು ಉಚಿತ ವ್ಯವಸ್ಥೆಯಿದ್ದು, ವರ್ಷಕ್ಕೆ ಒಂದು ಬಾರಿ ಪ್ರವಾಸ ಪ್ಯಾಕೇಜ್ ಮೂಲಕ ಪ್ರಪಂಚದ ಯಾವುದೇ ಪ್ರದೇಶಕ್ಕೆ ಪ್ರವಾಸ ಕೈಗೊಳ್ಳಬಹುದು.
ಅಲ್ಲಿರುವ ಕಂಟ್ರಿಕ್ಲಬ್‌ಗಳಲ್ಲಿ ಉಳಿದುಕೊಳ್ಳಬಹುದು. ಹಾಗೆಯೇ ನಗರದ ಕೆಲ ಜಿಮ್‌ಗಳಲ್ಲಿ ಉಚಿತ ಪ್ರವೇಶವೂ ಇದೆ ಎಂದು ನಂಬಿಸಿದ್ದರು. ಅದನ್ನು ನಂಬಿದ ವಿನೀತ್ 60ಸಾವಿರ ರೂ. ಪಾವತಿಸಿ ಕ್ಲಬ್‌ನ ಸದಸ್ಯತ್ವ ಪಡೆದುಕೊಂಡಿದ್ದರು. ಅನಂತರ ಬಸವೇಶ್ವರನಗರ ಜಿಮ್‌ಗೆ ಹೋದಾಗ ಕಂಟ್ರಿಕ್ಲಬ್ ಜತೆಗಿನ ಒಪ್ಪಂದ ರದ್ದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ವಿಚಾರವನ್ನು ಕ್ಲಬ್‌ನ ಅಧಿಕಾರಿಗಳಿಗೆ ತಿಳಿಸಿ ಸದಸ್ಯತ್ವ ರದ್ದುಗೊಳಿಸಿ ಹಣ ವಾಪಸ್ ಕೊಡುವಂತೆ ಕೇಳಿದರೂ ಇದುವರೆಗೂ ಹಣ ಹಿಂದಿರುಗಿಸಿಲ್ಲ. ಪ್ರವಾಸಕ್ಕೂ ಕರೆದೊಯ್ದಿಲ್ಲ ಎಂದು ವಿನೀತ್ ದೂರಿನಲ್ಲಿ ಆರೋಪಿಸಿರುವುದಾಗಿ ಪೊಲೀಸರು ಹೇಳಿದರು.