ಜಯತೀರ್ಥ ನಿರ್ದೇಶನದ “ಬ್ಯೂಟಿಫುಲ್ ಮನಸುಗಳು’ ಚಿತ್ರದ ಆಡಿಯೋವನ್ನು ದರ್ಶನ್ ಬಿಡುಗಡೆ ಮಾಡಿದ್ದರು. ಆ ಚಿತ್ರದ ಹಾಡುಗಳು ಹಾಗೂ ಸಿನಿಮಾ ಕೂಡಾ ಒಂದು ಮಟ್ಟಕ್ಕೆ ಹಿಟ್ ಆಗಿತ್ತು. ಈಗ ಜಯತೀರ್ಥ ನಿರ್ದೇಶನದ “ವೆನಿಲ್ಲಾ’ ಚಿತ್ರದ ಆಡಿಯೋ ಬಿಡುಗಡೆಯನ್ನು ಕೂಡಾ ದರ್ಶನ್ ಅವರಿಂದಲೇ ಮಾಡಿಸಲಾಯಿತು. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದರ್ಶನ್ “ವೆನಿಲ್ಲಾ’ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
“ನಟನಿಗೆ ನಟನೆ ತುಂಬಾ ಮುಖ್ಯವಾಗುತ್ತದೆ. ಚಿತ್ರದಲ್ಲಿ ಡ್ಯಾನ್ಸ್, ಫೈಟ್ ಬರುವುದು ಕೇವಲ ಅರ್ಧ ಗಂಟೆ ಮಾತ್ರ. ಉಳಿದ ಎರಡು ಗಂಟೆಯನ್ನು ನಾವು ಅಭಿನಯದ ಮೂಲಕ ತುಂಬಬೇಕು. ಹಾಗಾಗಿ, ಮೊದಲು ಅಭಿನಯ ಕಲಿಯಬೇಕು. ನಾನು 50 ಚಿತ್ರಗಳಲ್ಲಿ ನಟಿಸಿದ್ದರೂ 51ನೇ ಚಿತ್ರಕ್ಕೆ ಹೊಸಬ’ ಎನ್ನುತ್ತಾ “ವೆನಿಲ್ಲಾ’ ತಂಡಕ್ಕೆ ಶುಭಕೋರಿದರು ದರ್ಶನ್. ನಿರ್ದೇಶಕ ಜಯತೀರ್ಥ ಅವರು ಹೇಳುವಂತೆ, “ದರ್ಶನ್ ಅವರು ಬಿಡುಗಡೆ ಮಾಡಿದ “ಬ್ಯೂಟಿಫುಲ್ ಮನಸುಗಳು’ ಆಡಿಯೋ ಹಿಟ್ ಆಗಿತ್ತು. ಈಗ “ವೆನಿಲ್ಲಾ’ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಕೂಡಾ ಯಶಸ್ಸು ಕಾಣುತ್ತದೆ ಎಂಬ ವಿಶ್ವಾಸವಿದೆ. “ವೆನಿಲ್ಲಾ’ ಚಿತ್ರ ಮರ್ಡರ್ ಮಿಸ್ಟ್ರಿ ಆಗಿದ್ದು, ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎಂದರು.
ಚಿತ್ರದ ನಾಯಕ ಅವಿನಾಶ್, ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ. ಹಾಗಾಗಿ, ಚಿತ್ರದ ಆಡಿಯೋ ಬಿಡುಗಡೆಗೆ ಮಂಡ್ಯ ರಮೇಶ್ ಕೂಡಾ ಅತಿಥಿಯಾಗಿ ಬಂದಿದ್ದರು. “ಈ ತಂಡದಲ್ಲಿ ನಾನು ನಟಿಸಿಲ್ಲ. ಆದರೆ, ಸಂಪೂರ್ಣ ರಂಗಭೂಮಿ ತಂಡದವರು ಸಿದ್ಧಪಡಿಸಿದ ಚಿತ್ರವಾಗಿದ್ದರಿಂದ ಖುಷಿಯಾಗುತ್ತಿದೆ’ ಎನ್ನುತ್ತಾ ದರ್ಶನ್ ಬಗ್ಗೆ ಮಾತನಾಡಲು ಮಂಡ್ಯ ರಮೇಶ್ ಮರೆಯಲಿಲ್ಲ. “ನೀನಾಸಂ ತಂಡದಲ್ಲಿ ಪಳಗಿದ ದರ್ಶನ್ ಇಂದು ಎತ್ತರಕ್ಕೆ ಹೋಗಿ¨ªಾರೆ. ಆದರೂ ಅದೇ ನಯ ವಿನಯ ಅವರಲ್ಲಿದೆ. ತಾನು ಬೆಳೆದಂತೆ ಇತರರು ಬೆಳೆಯಬೇಕು ಎಂದು ಬಯಸುವ ಕೆಲವೇ ನಾಯಕರುಗಳಲ್ಲಿ ದರ್ಶನ್ ಕೂಡಾ ಒಬ್ಬರು’ ಎಂದರು.
“ವೆನಿಲ್ಲಾ’ಗೆ ಭರತ್ ಬಿ.ಜೆ.ಸಂಗೀತ ನೀಡಿದ್ದಾರೆ. ಅವರು ಹೇಳುವಂತೆ, ನಿರ್ದೇಶಕರು ಆರಂಭದಲ್ಲಿ ಎರಡು ಹಾಡು ಸಾಕೆಂದು, ಐದು ಹಾಡುಗಳಿಗೆ ಕೆಲಸ ಕೊಡುತ್ತಾರಂತೆ. ಚಿತ್ರದ ಐದು ಹಾಡುಗಳಲ್ಲಿ ಜಯಂತ್ ಕಾಯ್ಕಿಣಿ, ಮದನ್ ಬೆಳ್ಳಿಸಾಲು ಹಾಡು ಬರೆದಿದ್ದು, ಉಳಿದಂತೆ ಮೂರು ಹಾಡುಗಳಿಗೆ ಸ್ಪರ್ಧೆಯಲ್ಲಿ ವಿಜೇತರಾದವರ ಸಾಹಿತ್ಯವನ್ನು ಬಳಸಿಕೊಳ್ಳಲಾಗಿದೆ.
ಚಿತ್ರದಲ್ಲಿ ಅವಿನಾಶ್ ನಾಯಕರಾಗಿ ನಟಿಸಿದ್ದು, ಈ ಚಿತ್ರವನ್ನು ಅವರ ತಂದೆ ಜಯರಾಂ ನಿರ್ಮಿಸಿದ್ದಾರೆ. ಚಿತ್ರದಲ್ಲಿ ನಟಿಸಿದ ರವಿಶಂಕರ್ ಗೌಡ ಕೂಡಾ ತಮ್ಮ ಚಿತ್ರದ ಬಗೆಗಿನ ತಮ್ಮ ಅನುಭವ ಹಂಚಿ ಕೊಂಡರು. ಈ ಚಿತ್ರದ ನಾಯಕಿ. ಚಿತ್ರ ಮಾರ್ಚ್‌ನಲ್ಲಿ ತೆರೆ ಕಾಣಲಿದೆ.