ಈ ಹಿಂದೆ ಪೂಜಾಗಾಂಧಿ ನಿರ್ಮಾಣದಲ್ಲಿ “ಬ್ಲ್ಯಾಕ್ ವರ್ಸಸ್ ವೈಟ್’ ಎಂಬ ಸಿನಿಮಾ ನಿರ್ದೇಶಿಸುವುದಾಗಿ ಹೇಳಿದ್ದ ಲಕ್ಕಿ ಶಂಕರ್, ಈಗ ಇನ್ನೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಅವರು ‘ಕಲರ್ ಕಾಗೆ’ ಎಂದು ನಾಮಕರಣ ಮಾಡಿದ್ದಾರೆ.
ಹಾಗಾದರೆ, ಪೂಜಾಗಾಂಧಿ ನಿರ್ಮಾಣದ ಆ ಚಿತ್ರ ಏನಾಯ್ತು ಅಂತ ಕೇಳಂಗಿಲ್ಲ. ಯಾಕೆಂದರೆ, ಪೂಜಾಗಾಂಧಿ ಕೈಗೆತ್ತಿಕೊಂಡಿರುವ ಸಿನಿಮಾಗಳು ಯಾವ ದಿಕ್ಕಿನಲ್ಲಿವೆ ಅನ್ನೋದಿನ್ನೂ ಗೊತ್ತಿಲ್ಲ. ಅವು ಮುಗಿದ ನಂತರ ಲಕ್ಕಿ ಶಂಕರ್ ಸಿನಿಮಾ ಆಗಬೇಕು. ಹಾಗಾಗಿ, ಲಕ್ಕಿ ಶಂಕರ್, ಅದನ್ನು ಪಕ್ಕಕ್ಕಿಟ್ಟು, ಈಗ “ಕಲರ್ ಕಾಗೆ’ ಹಿಂದೆ ಬಂದಿದ್ದಾರೆ.
ಚಿತ್ರದ ಶೀರ್ಷಿಕೆ ನೋಡಿದರೆ ಇದೊಂದು ಅಪ್ಪಟ ಮನರಂಜನೆಯ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಲಕ್ಕಿ ಶಂಕರ್ ಈ ಬಾರಿ ಹೊಸತನದ ಕಥೆಯೊಂದಿಗೆ ಚಿತ್ರ ಮಾಡಲು ಬಂದಿದ್ದಾರೆ. ಇದು ಸಂಪೂರ್ಣ ಉತ್ತರ ಕರ್ನಾಟಕದಲ್ಲಿಯೇ ಚಿತ್ರೀಕರಣವಾಗುವ ಸಿನಿಮಾವಂತೆ. ಅಷ್ಟೇ ಅಲ್ಲ, ಆ ಭಾಗದ ಕಲಾವಿದರೇ ಈ ಚಿತ್ರದ ಹೀರೋಗಳು ಅನ್ನೋದು ಲಕ್ಕಿ ಶಂಕರ್ ಮಾತು. ಲಕ್ಕಿಶಂಕರ್ ತಮ್ಮ ಗೆಳೆಯರ ಜತೆ ಸೇರಿಕೊಂಡು ಈ “ಕಲರ್ ಕಾಗೆ’ಗೆ ಹಣ ಹಾಕುತ್ತಿದ್ದಾರೆ. ಹುಬ್ಬಳ್ಳಿ, ಬೀದರ್, ಧಾರವಾಡ, ಗದಗ್ ಹಾಗೂ ದಾವಣಗೆರೆಯಲ್ಲಿ ಚಿತ್ರೀಕರಿಸುವ ಯೋಜನೆ ಅವರಿಗಿದೆ.
ಉತ್ತರ ಕರ್ನಾಟಕ ಭಾಗದ ಚಿತ್ರವಾದ್ದರಿಂದ, ಅದೇ ಭಾಷೆಯ ಸೊಗಡು, ಅಲ್ಲಿನ ಜನರ ಬದುಕಿನ ಕುರಿತು ಚಿತ್ರಿಸಲಿದ್ದಾರಂತೆ. ಸದ್ಯಕ್ಕೆ “ಕಲರ್ ಕಾಗೆ’ ಸ್ಕ್ರಿಪ್ಟ್ನ ಅಂತಿಮ ಕೆಲಸದಲ್ಲಿರುವ ಲಕ್ಕಿ ಶಂಕರ್, ಚಿತ್ರದ ಮೂವರು ಹೀರೋಗಳ ಹುಡುಕಾಟದಲ್ಲಿದ್ದಾರೆ.
ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳನ್ನೇ ಇಲ್ಲಿ ಬಳಸಿಕೊಳ್ಳಬೇಕಿರುವುದರಿಂದ ಆಡಿಷನ್ ಮಾಡಲಿದ್ದಾರಂತೆ ಅವರು. ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಕಾಮಿಡಿ ಸೆನ್ಸ್ ಹೆಚ್ಚಿದೆ ಎಂಬುದನ್ನು ಮನಗಂಡು, ಅವರ ಭಾಷೆ ಮೂಲಕ ಚಂದದ ಚಿತ್ರ ಕಟ್ಟಿಕೊಡುವ ಪ್ರಯತ್ನಕ್ಕೆ ಕೈ ಹಾಕಿರುವುದಾಗಿ ಹೇಳುವ ಲಕ್ಕಿ, ಉತ್ತರ ಕರ್ನಾಟಕದ ಜನರ ಶೈಲಿ, ಅವರು ಹಾಕುವ ಬಟ್ಟೆಗಳಲ್ಲಿನ ವಿಭಿನ್ನತೆ, ಮಾತನಾಡುವ ಸ್ಟೈಲ್ ಅವರ ಮಾತುಗಳಲ್ಲಿನ ಹಾಸ್ಯ ಎಲ್ಲವೂ ಇಲ್ಲಿರಲಿದೆ.ಸ್ಟೈಲ್, ಬಟ್ಟೆ ಸ್ಟೈಲು ಕಾಮಿಕ್ ಇರಲಿದೆ. ಅಂದಹಾಗೆ, ಇಲ್ಲಿ ಮೂವರು ಕಪ್ಪು ಹುಡುಗರು ಹೈಲೈಟ್. ಅವರ ಜತೆಗೊಬ್ಬ ಹುಡುಗಿಯೂ ಇರುತ್ತಾಳೆ. ಅವಳೂ ಕಪ್ಪುಗಿರುತ್ತಾಳ್ಳೋ, ಬೆಳ್ಳಗಿರುತ್ತಾಳ್ಳೋ ಎಂಬುದು ಸಸ್ಪೆನ್ಸ್. ಈ ನಾಲ್ವರ ನಡುವೆ ನಡೆಯೋ ಕಥೆ ಇದು.
ಕಪ್ಪು ಹುಡುಗರ ಬದುಕಿನ ತೊಂದರೆ, ಅವರು ಹಾಗೆ ಇರುವುದರಿಂದ ಎದುರಾಗುವ ಕೆಲ ಸಮಸ್ಯೆ ಚಿತ್ರದ ವಿಶೇಷತೆ ಎನ್ನುತ್ತಾರೆ ಅವರು. ಅದೇನೆ ಇರಲಿ, ಲಕ್ಕಿಶಂಕರ್ ಈಗ ಹೊಸ ಜಾಡಿನ ಕಥೆ ಹಿಡಿದು ಹೊರಟಿದ್ದಾರೆ.
ಈ ಹಿಂದೆ “ದೇವ್ರಾಣೆ’,”ಸಿಗರೇಟ್’, “ನೈಂಟಿ’, “ಜಿಲೇಬಿ’ಯಂತಹ ಚಿತ್ರ ಕೊಟ್ಟು, ಒಂದಷ್ಟು ಗಮನಸೆಳೆದಿದ್ದ ಲಕ್ಕಿ, ಈಗ ಕಲರ್ ಕಾಗೆಗಳ ಹುಡುಕಾಟದಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ದೀಪಾವಳಿಗೆ ಚಿತ್ರ ಶುರುವಾಗಲಿದೆ.