ಅಭಿಮಾನಿಗಳ ಪಾಲಿನ ದೇವರು ಪುನೀತ್ ರಾಜ್‌ಕುಮಾರ್ ಅವರನ್ನು ಇಂದು ತೆರೆಮೇಲೆ ದೇವರಾಗಿಯೇ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ನೆಚ್ಚಿನ ದೇವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕೂಡಾ ಅಷ್ಟೇ ಕುತೂಹಲದಿಂದ ಕಾಯುತ್ತಿದ್ದಾರೆ. ಅದು “ಲಕ್ಕಿಮ್ಯಾನ್’ ಮೂಲಕ. ಪುನೀತ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಲಕ್ಕಿಮ್ಯಾನ್’ ಚಿತ್ರ ಇಂದು ತೆರೆಕಾಣುತ್ತಿದೆ. “ಡಾರ್ಲಿಂಗ್’ ಕೃಷ್ಣನಾಯಕರಾಗಿರುವ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ದೇವರಾಗಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಟ್ರೇಲರ್,ಹಾಡುಗಳು ಹಿಟ್‌ಲಿಸ್ಟ್ ಸೇರುವ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆ ಕೂಡಾ ಹೆಚ್ಚಾಗಿದೆ.ಈ ಚಿತ್ರವನ್ನು ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.
ಚಿತ್ರದ ಹಾಡೊಂದರಲ್ಲಿ ಪ್ರಭು ದೇವ ಹಾಗೂ ಪುನೀತ್ ರಾಜ್‌ಕುಮಾರ್ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ನಾಯಕ ಕೃಷ್ಣ ಕೂಡಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಾಯಕ ಕೃಷ್ಣ, “ಪುನೀತ್ ಅವರ ಜೊತೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದೆ. ಆದರೆ, ಹೆಚ್ಚು ದೃಶ್ಯಗಳಿರಲಿಲ್ಲ. “ಲಕ್ಕಿಮ್ಯಾನ್’ನಲ್ಲಿ ಪುನೀತ್ ಅವರೊಂದಿಗೆ ತುಂಬಾ ಸೀನ್‌ಗಳಿವೆ. ಇವತ್ತು ಅವರಿಲ್ಲ ಎಂಬುದನ್ನು ಊಹಿಸಿಕೊಳ್ಳಲು ಕಷ್ಟವಾಗುತ್ತಿದೆ’ ಎಂದ ಕೃಷ್ಣ “”ಲಕ್ಕಿಮ್ಯಾನ್’ ಎಲ್ಲರಿಗೂ ಇಷ್ಟವಾಗುವ ಸಿನಿಮಾ’ ಎನ್ನಲು ಮರೆಯಲಿಲ್ಲ.
ಅಂದಹಾಗೆ, ಇದು “ಓ ಮೈ ಕಡವುಳೆ’ ಎಂಬ ತಮಿಳು ಚಿತ್ರದ ರೀಮೇಕ್. ಈ ಚಿತ್ರವನ್ನು ನೋಡಿ ಕೃಷ್ಣ ತುಂಬಾ ಇಷ್ಟಪಟ್ಟಿದ್ದರಂತೆ. ಜೊತೆಗೆ ಈ ಪಾತ್ರ ತನಗೆ ಸಿಕ್ಕರೆ ಚೆನ್ನಾಗಿರುತ್ತದೆ ಎಂದುಕೊಂಡಿದ್ದರಂತೆ. ಅದಾಗಿ ಮೂರು ತಿಂಗಳಲ್ಲೇ “ಲಕ್ಕಿಮ್ಯಾನ್’ಕುರಿತಾಗಿ ಕರೆ ಬಂತಂತೆ.
ನಾಯಕಿ ಸಂಗೀತಾ ಶೃಂಗೇರಿ ಇಲ್ಲಿ ಶ್ರೀಮಂತ ಹುಡುಗಿಯಾಗಿ, ಮದುವೆ ಬಗ್ಗೆ ತನ್ನದೇ ಆದ ಒಂದಷ್ಟು ಸಂದೇಹಗಳನ್ನಿಟ್ಟುಕೊಂಡಿರುವ ಹೆಣ್ಣಾಗಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರವನ್ನು ಮೀನಾಕ್ಷಿ ಸುಂದರಂ ಹಾಗೂ ಆರ್.ಸುಂದರಂ ಕಾಮರಾಜ್ ನಿರ್ಮಿಸಿದ್ದಾರೆ.