ಮೊನ್ನೆ ಮೊನ್ನೆಯವರೆಗೂ ಸಾನ್ವಿ ಶ್ರೀವಾತ್ಸವ್ ಎಂಬ ನಟಿಯನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಸಾನ್ವಿ ಎರಡು ಚಿತ್ರಗಳಲ್ಲಿ ನಟಿಸುತ್ತಿರುವುದು ಬಿಟ್ಟರೆ, ಮತ್ತಿನ್ನೇನು ಮಾಡುತ್ತಿದ್ದಾರೆ ಎಂದು ಎಲ್ಲರೂ ಕೇಳುತ್ತಿದ್ದರು. ಯಾವಾಗ “ಮಾಸ್ಟರ್ ಪೀಸ್’ ಚಿತ್ರ ದೊಡ್ಡ ಓಪನಿಂಗ್ ಪಡೆಯಿತೋ ಮತ್ತು ಯಾವಾಗ ಸಾನ್ವಿ, ಗಣೇಶ್ ಮತ್ತು ಮನೋರಂಜನ್ ಚಿತ್ರಗಳಿಗೆ ಸಾನ್ವಿ ನಾಯಕಿಯಾಗಿ ಬುಕ್ ಆಗಿದ್ದಾರೆ ಎಂದು ಗೊತ್ತಾಯಿತೋ, ಸಾನ್ವಿ ಶ್ರೀವಾತ್ಸವ್ ರಾತ್ರೋರಾತ್ರಿ ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯಾಗಿಬಿಟ್ಟಿದ್ದಾರೆ. ಸುಮ್ಮನೆ “ಚಂದ್ರಲೇಖ’ ಚಿತ್ರದ ಆ ಪೀಚು ಹುಡುಗಿ ಕನ್ನಡದಲ್ಲಿ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರೆ …
ಗುಂಡು ಮುಖ, ಕಣ್ಣು ಕುಕ್ಕುವ ಮಂದಹಾಸ, ಪೊರಕೆ ಕಡ್ಡಿಯಂತಹ ಪೀಚು ದೇಹ …
ಈ ಹುಡುಗಿ ಹೆಚ್ಚು ದಿನ ಇರೋದಿಲ್ಲ ಅಂತಲೇ “ಚಂದ್ರಲೇಖ’ ನೋಡಿ ಬಂದವರು ಹೇಳಿದ್ದರು. ಏಕೆಂದರೆ, ಸಾನ್ವಿ ಶ್ರೀವಾತ್ಸವ್ ಎಂಬ ನಟಿ ಪ್ರತಿಭಾವಂತೆ ಎನ್ನುವುದು ಬಿಟ್ಟರೆ, ತೀರಾ ಮೆಚ್ಚಿಕೊಳ್ಳುವ ಸೌಂದರ್ಯವತಿಯೇನಲ್ಲ. ಅದೆಷ್ಟೋ ಸುಂದರಿಯರು ಅಡ್ರೆಸ್ಸಿಗೂ ಸಿಗದಂತೆ ಮಾಯವಾಗುವಾಗಿರುವಾಗ, ಈ ಸಾನ್ವಿ ಎಲ್ಲಿ ಉಳಿಯಬೇಕು ಹೇಳಿ ಎನ್ನುವಂತಹ ಪ್ರಶ್ನೆ ಇತ್ತು ಅನೇಕರಲ್ಲಿ. ಆದರೆ, “ಚಂದ್ರಲೇಖ’ 50 ದಿನ ಓಡಿತು. ಆ ನಂತರ ಸಾನ್ವಿ, “ಭಲೇ ಜೋಡಿ’ಯೆಂಬ ಚಿತ್ರದಲ್ಲಿ ಸುಮಂತ್ ಶೈಲೇಂದ್ರಗೆ ನಾಯಕಿಯಾಗುವುದಾಗಿ ಸುದ್ದಿಯಾಯಿತು. ಅದಕ್ಕಿಂತ ಬಂಪರ್ ಎಂದರೆ ಸಾನ್ವಿ “ಮಾಸ್ಟರ್‌ಪೀಸ್’ ಚಿತ್ರದಲ್ಲಿ ಯಶ್‌ಗೆ ನಾಯಕಿಯಾಗಿದ್ದು ಮತ್ತು ಆ ಚಿತ್ರ 50 ದಿನ ಓಡಿದ್ದು. ಆಮೇಲೆ ಗಣೇಶ್ ಅಭಿನಯದ “ಗಂಡು ಎಂದರೆ ಗಂಡು’, ಮನೋರಂಜನ್ ನಿರ್ದೇಶನದ “ಸಾಹೇಬ’ ಚಿತ್ರಗಳಿಗೂ ಸಾನ್ವಿ ಆ್ಯಡ್ ಆದರು.
ಇನ್‌ಫ್ಯಾಕ್ಟ್ “ಮಾಸ್ಟರ್‌ಪೀಸ್’ನಲ್ಲಿ ಯಶ್ ಅಬ್ಬರದ ಮುಂದೆ ಸಾನ್ವಿ ನಿಲ್ಲೋದಿಲ್ಲ ಎಂದೇ ಹಲವರ ಡೌಟಿತ್ತು. ಸಾನ್ವಿಗೂ ಹಾಗೆಯೇ ಅನಿಸಿತ್ತಂತೆ. ಎಲ್ಲಿ ಯಶ್ ಅಲೆಯಲ್ಲಿ ಕೊಚ್ಚಿಕೊಂಡು ಹೋಗುತ್ತೀನೋ ಎಂಬ ಭಯ ಅವರಿಗೂ ಇತ್ತಂತೆ. ಆದರೆ, ಹಾಗೇನೂ ಆಗಲಿಲ್ಲ ಎಂಬ ಸಂತೋಷ ಆಕೆಯದು. ಜನ ತನ್ನನ್ನು ಮೆಚ್ಚಿಕೊಂಡಿದ್ದಷ್ಟೇ ಅಲ್ಲ, ಆ ಚಿತ್ರದಿಂದ ಇನ್ನೂ ಎರಡು ಚಿತ್ರಗಳಲ್ಲಿ ನಟಿಸುತ್ತಿರುವ ಬಗ್ಗೆ ಸಾನ್ವಿಗೆ ಶ್ಯಾನೆ ಖುಷಿಯಿದೆ.
ಇತ್ತೀಚಿನ ಚಿತ್ರಗಳಲ್ಲಿ ನಾಯಕಿಯರು ಏನು ಮಾಡುತ್ತಾರೆ ಎಂದು ಮರ ಸುತ್ತುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಾನ್ವಿ ಕೂಡಾ ಇದುವರೆಗೂ ಮಾಡಿರುವುದೆಲ್ಲಾ ಅಂತಹ ಪಾತ್ರಗಳನ್ನೇ. ಅಲ್ಲ, ಬೇರೇನೂ ಏನಾದರೂ ಮಾಡಬಹುದಲ್ವಾ? ಎಂಬ ಪ್ರಶ್ನೆಯನ್ನು ಸುಲಭವಾಗಿ ಕೇಳಬಹುದು. ಆದರೆ, ಅಂತಹ ಪಾತ್ರಗಳು ಸಿಗಬೇಕಲ್ಲ ಎನ್ನುತ್ತಾರೆ ಸಾನ್ವಿ. ಸಾನ್ವಿಗೂ ವಿಭಿನ್ನವಾದ ಪಾತ್ರಗಳನ್ನು ಮಾಡಬೇಕು, ಬೇರೆ ತರಹದ ಕಾಸ್ಟೂéಮ್‌ಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದೆ. ಸಂಜಯ್ ಲೀಲಾ ಬನ್ಸಾಲಿ ಮತ್ತು ಇಮಿ¤ಯಾಜ್ ಅಲಿರಂತಹ ನಿರ್ದೇಶಕರ ಚಿತ್ರಗಳಲ್ಲಿರುವ ಪಾತ್ರಗಳಲ್ಲಿ ಅಭಿನಯಿಸಬೇಕೆಂಬ ಕನಸಿದೆ. ಇನ್ನು ಐತಿಹಾಸಿಕ ಪಾತ್ರಗಳಲ್ಲಿ ನಟಿಸಿದರಂತೂ ಸ್ವರ್ಗಕ್ಕೆ ಮೂರೇ ಇಂಚಂತೆ. ಆದರೆ, ಅಂತಹ ಕನಸುಗಳು ಇಲ್ಲಿ ನನಸಾಗುವುದು ಅಷ್ಟು ಸುಲಭವಲ್ಲ ಎಂಬುದೂ ಗೊತ್ತಿದೆ. ಒಬ್ಬ ನಟಿಗೆ ಹೆಚ್ಚಾಗಿ ಬಬ್ಲಿ ಹುಡುಗಿಯ ಪಾತ್ರವೇ ಸಿಗುವುದರಿಂದ, ಅದೇ ಪಾತ್ರವನ್ನು ಮಾಡಬೇಕಾಗುತ್ತದೆ, ಎಷ್ಟೇ ಆದರೂ ನಟನೆ ಮಾಡುವುದು ಕಲಾವಿದರ ಬ್ರೆಡ್ ಅಂಡ್ ಬಟರ್ ಅಲ್ವಾ ಎಂಬುದು ಸಾನ್ವಿ ನಿಲುವು. ಮುಂದೊಂದು ದಿನ ಬಾಲಿವುಡ್‌ನಲ್ಲಿ, ಅದೂ ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳಲ್ಲಿ ಖಂಡಿತಾ ನಟಿಸಿಯೇ ನಟಿಸುತ್ತೇನೆ ಎಂಬ ವಿಶ್ವಾಸ ಸಾನ್ವಿಗಿದೆ.
ಸದ್ಯಕ್ಕೇನೋ ಸಾನ್ವಿ ಕನ್ನಡದಲ್ಲಿ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಇದುವರೆಗೂ ಆಕೆಯ ಚಿತ್ರಗಳು ದೊಡ್ಡ ಹಿಟ್ ಅಲ್ಲದಿದ್ದರೂ, ದೊಡ್ಡ ಫ್ಲಾಪ್‌ಗ್ಳಂತೂ ಖಂಡಿತಾ ಅಲ್ಲ. ಹಾಗಾಗಿಯೇ ಆಕೆಗೆ ಕನ್ನಡದಲ್ಲಿ ಒಂದರ ಹಿಂದೊಂದು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ ಎಂಬುದು ನಿಮಗೆ ಗೊತ್ತಿರಲಿ. ಆದರೆ, ಅದರ ಜೊತೆಗೆ ಇನ್ನೂ ಒಂದು ಟ್ವಿಸ್ಟ್ ಇದೆ. ಸಾನ್ವಿ ಕನ್ನಡ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ನಟಿಸುತ್ತಿದ್ದಾರಾದರೂ, ಆಕೆಗೆ ಕನ್ನಡಕ್ಕಿಂತ ಮುಂಚೆ ತೆಲುಗಿನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದವರು. ಅಷ್ಟೇ ಅಲ್ಲ, ತೆಲುಗು ಚಿತ್ರರಂಗದ ಮೂಲಕವೇ ಅಭಿನಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟವರು. ಕನ್ನಡದಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಸಿಗುತ್ತಿರುವುದರಿಂದ, ಅವರು ಬೇರೆ ಭಾಷೆಗಳನ್ನು ಬಿಟ್ಟು ಕನ್ನಡದಲ್ಲೇ ಸೆಟ್ಲ ಆಗ್ತಾರಾ ಎಂಬ ಪ್ರಶ್ನೆ ಬರದೇ ಇರದು. ಸಾನ್ವಿ ಸದ್ಯಕ್ಕಂತೂ ಅಂತಹ ನಿರ್ಧಾರವನ್ನೇನೂ ತೆಗೆದುಕೊಂಡಿಲ್ಲ. ಬೇರೆ ಭಾಷೆಗಳನ್ನು ಬಿಟ್ಟು ಕನ್ನಡದಲ್ಲೇ ಇರಬೇಕು ಎಂಬ ಮನಸ್ಸನ್ನೇನೂ ಮಾಡಿಲ್ಲ. ಸದ್ಯಕ್ಕಂತೂ ಸಾನ್ವಿಗೆ ಕನ್ನಡದಲ್ಲಿ ಒಂದಿಷ್ಟು ಒಳ್ಳೆಯ ಪಾತ್ರಗಳು ಸಿಗುತ್ತಿವೆತಂತೆ. ಹಾಗಾಗಿ ಇಲ್ಲಿ ಹೆಚ್ಚು ಹೆಚ್ಚು ನಟಿಸುತ್ತಿದ್ದಾರೆ. ಒಂದು ಪಕ್ಷ ಬೇರೆಬೇರೆ ಭಾಷೆಯ ಚಿತ್ರಗಳಲ್ಲೂ ಅಂತಹ ಒಳ್ಳೆಯ ಅವಕಾಶಗಳು ಸಿಕ್ಕರೆ ಮತ್ತು ವಿಭಿನ್ನ ಪಾತ್ರಗಳು ಸಿಕ್ಕರೆ, ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸುವುದಕ್ಕೆ ಅಭ್ಯಂತರವೇನಿಲ್ಲವಂತೆ.
ಕನ್ನಡದಲ್ಲಿ ಸಾನ್ವಿ ಒಪ್ಪುತ್ತಿರುವ ಚಿತ್ರಗಳನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಹೆಚ್ಚಾಗಿ ರೀಮೇಕ್ ಚಿತ್ರಗಳೇ ಕಾಣಿಸುತ್ತವೆ. ಪ್ರಮುಖವಾಗಿ ಕನ್ನಡದಲ್ಲಿ ಆಕೆಯ ಮೊದಲ ಚಿತ್ರ “ಚಂದ್ರಲೇಖ’, ತೆಲುಗಿನ “ಪ್ರೇಮಕಥಾ ಚಿತ್ರಂ’ನ ರೀಮೇಕ್ ಆಗಿತ್ತು. “ಭಲೇ ಜೋಡಿ’ ತೆಲುಗಿನ “ಅಲಾ ಮೊದಲಾಯಿಂದಿ’ ಚಿತ್ರದ ರೀಮೇಕ್ ಎಂದು ಎಲ್ಲರಿಗೂ ಗೊತ್ತಿದೆ. ಇನ್ನು ಗಣೇಶ್ ಜೊತೆಗೆ ನಟಿಸುತ್ತಿರುವ “ಗಂಡು ಎಂದರೆ ಗಂಡು’ ಚಿತ್ರವು ಮತ್ತೆ ತೆಲುಗಿನ “ಭಲೇ ಭಲೇ ಮಗಡುವಾಯ್’ ಚಿತ್ರದ ರೀಮೇಕ್ ಅಂತೆ. ಎಲ್ಲಾ ಸರಿ, ಸಾನ್ವಿ ಹೆಚ್ಚಾಗಿ ರೀಮೇಕ್ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಏಕೆ ಎಂದರೆ, ಅದು ತಮ್ಮ ಕೈಲಿಲ್ಲ ಎನ್ನುತ್ತಾರೆ ಅವರು. ಎಲ್ಲಾ ನಟಿಯರಂತೆ ಸಾನ್ವಿಗೆ ಇದೆಯಂತೆ. ರೀಮೇಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಬಾರದು ಎಂಬ ಆಸೆಯೂ ಇದೆಯಂತೆ. ಅದಕ್ಕೆ ತಮ್ಮದೇ ಕಾರಣಗಳನ್ನೂ ಅವರು ಕೊಡುತ್ತಾರೆ. ಅದೇನೆಂದರೆ, ಪ್ರಮುಖವಾಗಿ ಜನ ಮೂಲ ಚಿತ್ರದಲ್ಲಿನ ಅದೇ ಪಾತ್ರದ ಜೊತೆಗೆ ಕಂಪೇರ್ ಮಾಡುವುದು ಮತ್ತು ಆ ಪಾತ್ರಕ್ಕಿಂತ ಚೆನ್ನಾಗಿ ನಟಿಸಬೇಕೆಂದು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು. ಹಾಗಾಗಿ ರೀಮೇಕ್ ಚಿತ್ರಗಳಲ್ಲಿ ನಟಿಸುವುದು ದೊಡ್ಡ ಜವಾಬ್ದಾರಿಯ ಕೆಲಸ ಎಂಬುದು ಸಾನ್ವಿ ಅಭಿಪ್ರಾಯ. ಅಷ್ಟಾದರೂ ಆಕೆ ರೀಮೇಕ್‌ಗಳಲ್ಲಿ ನಟಿಸುವುದಕ್ಕೆ ಕಾರಣವಿದೆ. ಅದೇನೆಂದರೆ, ರೀಮೇಕ್ ಚಿತ್ರಗಳಾದರೂ ಅದರಲ್ಲಿನ ಪಾತ್ರಗಳು ಸಖತ್ ಸ್ಟ್ರಾಂಗ್ ಆಗಿದ್ದವು ಎಂಬ ಕಾರಣಕ್ಕೆ. ಹಾಗೆ ಸ್ಟ್ರಾಂಗ್ ಆಗಿದ್ದರಿಂದ ಅದಕ್ಕೆ ಇನ್ನೂ ಏನಾದರೂ ಸೇರಿಸಬಹುದು ಮತ್ತು ಆ ಪಾತ್ರಕ್ಕಿಂತ ಚೆನ್ನಾಗಿ ಮಿಂಚಬಹುದು ಎಂಬು ಕಾರಣಕ್ಕೆ.
ಕನ್ನಡದಲ್ಲಿ ಐದು ಚಿತ್ರಗಳಲ್ಲಿ ನಟಿಸಿರುವ ಸಾನ್ವಿಗೆ ಕನ್ನಡ ಎಷ್ಟು ಬರುತ್ತದೆ ಎಂದರೆ, ಎಲ್ಲಾ ಪರಭಾಷೆಯ ನಟಿಯರಂತೆ ಸ್ವಲ್ಪ ಸ್ವಲ್ಪ ಮೂರು ಚಿತ್ರಗಳು ಬಿಡುಗಡೆಯಾದ ಮೇಲೆ ಸಾನ್ವಿಗೆ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತದಂತೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಿಯಬೇಕಂತೆ. ಇನ್ ಫ್ಯಾಕ್ಟ್, ಕನ್ನಡ ಕಲಿಯೋಕೆ ಮತ್ತು ಮಾತಾಡೋಕೆ ಹೋಗಿ ಸಾಕಷ್ಟು ಕಿಚಾಯಿಸಿಕೊಂಡಿದ್ದಾರಂತೆ. ಸಾನ್ವಿಗೆ ಕಿಚಾಯಿಸಿದ್ದು ಬೇರೆ ಯಾರೂ ಅಲ್ಲ, “ಭಲೇ ಜೋಡಿ’ ಚಿತ್ರದ ನಿರ್ದೇಶಕ ಸಾಧು ಕೋಕಿಲ. ಸಾನ್ವಿ ತಪ್ಪುತಪ್ಪಾಗಿ ಕನ್ನಡದಲ್ಲಿ ಮಾತಾಡಿದಾಗಲೆಲ್ಲಾ ಸಾಧು ಕಿಚಾಯಿಸಿ ನಗುತ್ತಿದ್ದಾರಂತೆ. ಆಗ ಅವರ ನೆರವಿಗೆ ಬರುತ್ತಿದ್ದವರು ಸುಮಂತ್ ಶೈಲೇಂದ್ರ. ಸುಮಂತ್, ಸಾನ್ವಿ ತಪ್ಪುಗಳನ್ನು ತಿದ್ದುತ್ತಿದ್ದರಂತೆ ಮತ್ತು ಸರಿಯಾಗಿ ಹೇಳಿಕೊಡುತ್ತಿದ್ದರಂತೆ. ಹಾಗಾಗಿ ಸುಮಂತ್ ಮೇಲೆ ಸಾನ್ವಿಗೆ ವಿಶೇಷವಾದ ಅಭಿಮಾನ.
ಸರಿ ಮುಂದಾ? ಅದು ಸಾನ್ವಿಗೂ ಗೊತ್ತಿಲ್ಲ. ಸದ್ಯಕ್ಕಂತೂ ಸಾನ್ವಿ “ಗಂಡು ಎಂದರೆ ಗಂಡು’ ಮತ್ತು “ಸಾಹೇಬ’ ಚಿತ್ರಗಳಲ್ಲಿ ನಟಿಸುವುದರಲ್ಲಿ ಬಿಝಿಯಾಗಿದ್ದಾರೆ. ಆ ನಂತರ ಮುಂದಿನದ್ದು. ಏನಂತೀರಾ?
ಅಕ್ಕನ ಜೊತೆಗೆ ನಟಿಸುವ ಆಸೆಯಂತೆ!
ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ, ಸಾನ್ವಿ ಅಕ್ಕ ಕೂಡಾ ಒಬ್ಬ ನಟಿ ಮತ್ತು ಆಕೆ ಕನ್ನಡದಲ್ಲಿ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು. ಹೌದು, ಸುಮಾರು ಏಳು ವರ್ಷಗಳ ಹಿಂದೆ ಅನಿರುದ್ಧ್ ಅಭಿನಯದ “ನಲಿನಲಿಯುತಾ’ ಎಂಬ ಚಿತ್ರವೊಂದು ಬಂದಿತ್ತು. ಆ ಚಿತ್ರದಲ್ಲಿ ವಿಧಿಶಾ ಎಂಬ ನಾಯಕಿ ನಟಿಸಿದ್ದಳು. ಆ ವಿಧಿಶಾಳೇ ಸಾನ್ವಿ ಅಕ್ಕನಂತೆ. “ನಲಿನಲಿಯುತಾ’ ಚಿತ್ರ ಸೋತಿದ್ದರಿಂದ, ವಿಧಿಶಾ ಆ ನಂತರ ಬಹಳ ವರ್ಷಗಳ ಕಾಲ ಕನ್ನಡದಲ್ಲಿ ನಟಿಸಲಿಲ್ಲ. ಇತ್ತೀಚೆಗೆ ಬಿಡುಗಡೆಯಾದ ದರ್ಶನ್ ಅಭಿನಯದ “ವಿರಾಟ್’ ಚಿತ್ರದಲ್ಲಿ ವಿಧಿಶಾ ಮೂವರು ನಾಯಕಿಯರಲ್ಲಿ ಒಬ್ಬರಾಗಿ ಅಭಿನಯಿಸಿದ್ದರು.
ಸಾನ್ವಿಗೆ ತನ್ನ ಅಕ್ಕನ ಜೊತೆಗೆ ನಟಿಸಬೇಕು ಎಂಬ ಆಸೆ ವಿಪರೀತ ಇದೆಯಂತೆ. ಕಾರಣ, ಇಬ್ಬರಿಗೂ ಸಿನಿಮಾ ಎಂಬುದು ಒಂದು ಪ್ಯಾಶನ್ ಅಂತೆ. ಹಾಗಾಗಿ ಅಕ್ಕನ ಜೊತೆಗೆ ನಟಿಸಬೇಕು ಎಂಬ ಕ್ವಾಯಿಷ್ ಸಾನ್ವಿಯದು. ಅದರ ಜೊತೆಗೆ ಒಂದು ಸಣ್ಣ ಅಬjಕ್ಷನ್ ಸಹ ಇದೆ. ಅದೇನೆಂದರೆ, ಒಬ್ಬೇ ಒಬ್ಬ ಹೀರೋ ಜೊತೆಗೆ ಅಕ್ಕ-ತಂಗಿಯರಿಬ್ಬರೂ ನಾಯಕಿಯರಾಗಿ ನಟಿಸಬಾರದು ಎಂದು. ಹಾಗಾಗಿ ಅಕ್ಕ-ತಂಗಿಯರಿಬ್ಬರಿಗೂ ಅವಕಾಶ ಕೊಡಬೇಕು ಎಂಬ ಆಸೆ ಇದ್ದರೆ, ಒಬ್ಬನೇ ಹೀರೋ ಇರದಂತೆ ನೋಡಿಕೊಳ್ಳುವುದು ನಿಮ್ಮ ಕೆಲಸ.
ಬರಹ: ಚೇತನ್ ನಾಡಿಗೇರ್; ಚಿತ್ರ: ಮನು ಮತ್ತು ಸಂಗ್ರಹ