Advertisement
ಇದರಿಂದ ಮತ್ತೂಮ್ಮೆ ಸ್ಪಷ್ಟಗೊಂಡ ಸಂಗತಿಯೆಂದರೆ, ವಿಶ್ವಕಪ್ ಎತ್ತಲು ಕೇವಲ ಸಾಧನೆಯೊಂದೇ ಸಾಲದು, ಅದೃಷ್ಟದ ಬೆಂಬಲವೂ ಇರಬೇಕು ಎನ್ನುವುದು!
ಈ ಕೂಟದಲ್ಲಿ ಭಾರತದ ಸಾಧನೆ ಅಮೋಘ ಮಟ್ಟದಲ್ಲೇ ಇತ್ತು. ರೋಹಿತ್ ಶರ್ಮ ಅವರ 5 ಶತಕಗಳ ವಿಶ್ವದಾಖಲೆ, ಮೊಹಮ್ಮದ್ ಶಮಿ ಸಾಧಿಸಿದ ಹ್ಯಾಟ್ರಿಕ್, ಜಸ್‌ಪ್ರೀತ್ ಬುಮ್ರಾ ಅವರ 18 ವಿಕೆಟ್ ಬೇಟೆ, ಧವನ್-ರಾಹುಲ್ ಬಾರಿಸಿದ ಶತಕ, ವಿರಾಟ್ ಕೊಹ್ಲಿ ಅವರ ಸತತ 5 ಅರ್ಧ ಶತಕ, ಜಡೇಜ ಅವರ ಫೈಟಿಂಗ್ ಸ್ಪಿರಿಟ್, ಎಂದಿನಂತೆ ಪಾಕಿಸ್ಥಾನವನ್ನು ಬಗ್ಗುಬಡಿದದ್ದು, ಹಾಲಿ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಸೋಲಿನ ರುಚಿ ತೋರಿಸಿದ್ದು… ಹೀಗೆ ಪಟ್ಟಿ ಬೆಳೆಯುತ್ತದೆ. ಪಂದ್ಯ ರದ್ದಾದುದರ ಲಾಭ?
ಆದರೆ ನ್ಯೂಜಿಲ್ಯಾಂಡ್ ಇಂಥ ಯಾವುದೇ ಪರಾಕ್ರಮ ದಾಖಲಿಸಲಿಲ್ಲ. ಕಿವೀಸ್‌ನದ್ದು ಪಾಕಿಸ್ಥಾನದೊಂದಿಗೆ ಸರಿಸಮ ಸಾಧನೆ. ತಲಾ 11 ಅಂಕ ಸಂಪಾದನೆ. ಆದರೆ ರನ್‌ರೇಟ್ ಕೈಹಿಡಿಯಿತು. ಬಹುಶಃ ಭಾರತದೆದುರಿನ ಲೀಗ್ ಪಂದ್ಯ ರದ್ದಾದುರಿಂದ ಲಭಿಸಿದ ಒಂದು ಅಂಕದಿಂದ ಲಾಭ ಆಗಿರಬಹುದು. ಏಕೆಂದರೆ, ಈ ಪಂದ್ಯ ನಡೆದು ಭಾರತ ಜಯಿಸಿದಲ್ಲಿ ವಿಲಿಯಮ್ಸನ್ ಪಡೆಗೆ ನಾಕೌಟ್ ಟಿಕೆಟ್ ಬಹುಶಃ ಲಭಿಸುತ್ತಿರಲಿಲ್ಲ!
Related Articles
ಹಾಗೆ ನೋಡಿದರೆ ನ್ಯೂಜಿಲ್ಯಾಂಡ್ ತೀರಾ ಸಾಮಾನ್ಯ ತಂಡ. ಬಲಾಬಲ ಹಾಗೂ ಸಾಧನೆ ಲೆಕ್ಕಾಚಾರದಲ್ಲಿ ಪಾಕ್, ಬಾಂಗ್ಲಾ, ವಿಂಡೀಸ್‌ಗಿಂತಲೂ ಕೆಳಮಟ್ಟದ್ದು. ತಂಡದ ಆರಂಭಿಕರ ರನ್ ಬರಗಾಲಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ವಿಲಿಯಮ್ಸನ್-ಟೇಲರ್ ಜತೆಗೂಡಿದ ಬಳಿಕವಷ್ಟೇ ಇನ್ನಿಂಗ್ಸಿಗೊಂದು ಜೀವ. ಇವರಿಬ್ಬರು ನಿರ್ಗಮಿಸಿದ ಬಳಿಕ ಮತ್ತೆ ವಿಲವಿಲ. ಬೌಲಿಂಗ್ ಮತ್ತು ಫೀಲ್ಡಿಂಗ್ ಓಕೆ. ಇದರೊಂದಿಗೆ ಕೈಹಿಡಿದ ಅದೃಷ್ಟ ಎನ್ನುವುದು ತಂಡವನ್ನು ಮತ್ತೆ ಫೈನಲಿಗೆ ತಂದು ನಿಲ್ಲಿಸಿದೆ. ರವಿವಾರ ಅದು ಚಾಂಪಿಯನ್ ಆಗಿ ಮೂಡಿಬಂದರೂ ಅಚ್ಚರಿ ಇಲ್ಲ.
Advertisement
ಆಗ, 5 ಶತಕ ಬಾರಿಸಿದ ರೋಹಿತ್ ಶರ್ಮ ಅವರಂಥ ಆಟಗಾರನಿಗೆ ಕಪ್ ಮರೀಚಿಕೆಯಾದರೆ, 2 ಸೊನ್ನೆಯೊಂದಿಗೆ ಬರೀ 167ರಷ್ಟು ರನ್ ಮಾಡಿದ ಮಾರ್ಟಿನ್ ಗಪ್ಟಿಲ್ ಕಪ್ ಎತ್ತಿ ಹಿಡಿಯಬಹುದು! ಇದಕ್ಕೇ ಹೇಳುವುದು, ಅದೃಷ್ಟದ ಪಾತ್ರ ಸಾಧನೆಗಿಂತ ಮಿಗಿಲು ಎನ್ನುವುದು!
1992-2019:ಒಂದು ಸಾಮ್ಯ
1992ರ ವಿಶ್ವಕಪ್ ನೆನಪಿಸಿಕೊಳ್ಳಿ. ಅದು ಕೂಡ ರೌಂಡ್ ರಾಬಿನ್ ಲೀಗ್ ಮಾದರಿಯದ್ದಾಗಿತ್ತು. ಅಂದಿನ ಚಾಂಪಿಯನ್ ತಂಡವಾದ ಪಾಕಿಸ್ಥಾನ ಲೀಗ್ ಹಂತದಲ್ಲಿ 3 ಸೋಲುಂಡಿತ್ತು. ಇಂಗ್ಲೆಂಡ್ ಎದುರು ಜುಜುಬಿ 74ಕ್ಕೆ ಕುಸಿದಿತ್ತು. ಇಂಗ್ಲೆಂಡ್ ಒಂದಕ್ಕೆ 24 ರನ್ ಮಾಡಿದಾಗ ಮಳೆ ಸುರಿಯಿತು. ಪಂದ್ಯ ರದ್ದುಗೊಂಡಿತು. ಇಲ್ಲಿ ಲಭಿಸಿದ ಒಂದು ಅಂಕದಿಂದಲೇ ಪಾಕಿಸ್ಥಾನದ ಅದೃಷ್ಟದ ಬಾಗಿಲು ತೆರೆಯಿತು. ಅದು 9 ಅಂಕಗ ಳೊಂದಿಗೆ 4ನೇ ಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿತು. ಅಲ್ಲಿ ಅಗ್ರಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡಿಗೆ ಆಘಾತವಿಕ್ಕಿತು. ಲೀಗ್‌ನಲ್ಲಿ ತನ್ನನ್ನು 74ಕ್ಕೆ ಕೆಡವಿದ್ದ ಇಂಗ್ಲೆಂಡನ್ನೇ ಫೈನಲ್‌ನಲ್ಲಿ ಕೆಡವಿ ಕಪ್ ಎತ್ತಿತು!ಈ ಸಲವೂ ನ್ಯೂಜಿಲ್ಯಾಂಡ್ 3 ಲೀಗ್ ಪಂದ್ಯ ಸೋತಿದೆ. 4ನೇ ಸ್ಥಾನದೊಂದಿಗೆ ನಾಕೌಟ್ ಪ್ರವೇಶಿಸಿದೆ. ಅಗ್ರಸ್ಥಾನಿ ಭಾರತವನ್ನು ಕೆಡವಿದೆ. ಮುಂದಿನ ಫಲಿತಾಂಶಕ್ಕೆ ರವಿವಾರ ರಾತ್ರಿ ತನಕ ಕಾಯೋಣ!