ಡಾ.ರಾಜ್‌ಕುಮಾರ್ ಕುಟುಂಬದ ಹೊಸ ಪ್ರತಿಭೆಯೊಂದು ಗಾಂಧಿನಗರಕ್ಕೆ ಕಾಲಿಟ್ಟಾಗಿದೆ. ಮೊದಲ ಬಾರಿಗೆ ನಿರ್ದೇಶನಕ್ಕೆ ಅಣಿಯಾಗಿರುವ ಲಕ್ಕಿ ಗೋಪಾಲ್, ಶಿವರಾಜ್‌ಕುಮಾರ್ ಅಭಿನಯದ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಅಂದಹಾಗೆ, ಲಕ್ಕಿ ಗೋಪಾಲ್ ಬೇರಾರೂ ಅಲ್ಲ, ಡಾ.ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಅವರ ಮೊಮ್ಮಗ. ನಾಗಮ್ಮ ಅವರ ಪುತ್ರ ಗೋಪಾಲ್ ಈಗ ಗಾಜನೂರಿನಲ್ಲಿ ವಾಸವಿದ್ದಾರೆ. ಅವರ ಪುತ್ರರಾಗಿರುವ ಲಕ್ಕಿ ಗೋಪಾಲ್, ಈಗ ಶಿವರಾಜಕುಮಾರ್ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ.
ಲಕ್ಕಿ ಗೋಪಾಲ್ ಓದಿದ್ದು, ಬೆಳೆದಿದ್ದು ಬೆಂಗಳೂರಲ್ಲಿ. ಬಿಕಾಂ ಓದಿರುವ ಅವರು, “ಸಿದ್ಧಾರ್ಥ’, “ರನ್ ಆ್ಯಂಟೋನಿ’, “ದೊಡ್ಮನೆ ಹುಡುಗ’ ಮತ್ತು “ಟಗರು’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಯಾವುದೇ ನಿರ್ದೇಶನದ ಕೋರ್ಸ್‌ಗೆ ಹೋಗದೆ, ಪ್ರಕಾಶ್, ಸೂರಿ ಅವರ ಜತೆ ಕೆಲಸ ಮಾಡಿದ ಅನುಭವದ ಮೇಲೆಯೇ ನಿರ್ದೇಶನಕ್ಕೆ ಇಳಿದಿದ್ದಾರೆ. ಡಾ.ರಾಜ್ ಫ್ಯಾಮಿಲಿಯಿಂದ ಬಂದವರೆಲ್ಲರೂ ಮೊದಲು ಕ್ಯಾಮೆರಾ ಮುಂದೆ ನಿಂತವರು. ಆದರೆ, ಲಕ್ಕಿ ಗೋಪಾಲ್ ಮಾತ್ರ ನಿರ್ದೇಶನ ಆಯ್ಕೆ ಮಾಡಿಕೊಂಡಿದ್ದಾರೆ.
“”ಸಿದ್ಧಾರ್ಥ’ ಚಿತ್ರೀಕರಣ ಸಂದರ್ಭದಲ್ಲಿ ಒನ್‌ಲೈನ್ ಶುರುಮಾಡಿದ್ದೆ. ಅದನ್ನು ಒಂದೊಳ್ಳೆಯ ಕಥೆಯನ್ನಾಗಿ ರೂಪಿಸಿದೆ. “ದೊಡ್ಮನೆ ಹುಡುಗ’ ಚಿತ್ರದ ವೇಳೆ ಶಿವಣ್ಣ ಅವರಿಗೆ ಕಥೆಯ ಒನ್‌ಲೈನ್ ಹೇಳಿದ್ದೆ. ಅದು ಅವರಿಗೆ ಇಷ್ಟ ಆಗಿತ್ತು. ಸ್ಕ್ರೀನ್‌ಪ್ಲೇ ಸ್ಟ್ರಾಂಗ್ ಮಾಡಿಕೋ, ಮಾಡೋಣ ಅಂದಿದ್ದರು. ನನ್ನ ಟೀಮ್ ಜೊತೆ ಕುಳಿತು ಕಥೆಯನ್ನು ಗಟ್ಟಿ ಮಾಡಿಕೊಂಡೆ. ಎಲ್ಲವೂ ಮುಗಿದ ಬಳಿಕ ಒಂದು ದಿನ ಪುನಃ ಶಿವಣ್ಣ ಅವರಿಗೆ ಸ್ಕ್ರೀನ್‌ಪ್ಲೇ ಸಮೇತ ಕಥೆ ಹೇಳಿದೆ. ಅವರಿಗೆ ಖುಷಿಯಾಯ್ತು. ಕಳೆದ ಏಳು ತಿಂಗಳ ಹಿಂದೆಯೇ ಈ ಕಥೆಗೆ ಶಿವಣ್ಣ ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಇನ್ನು, ಈ ಚಿತ್ರಕ್ಕೆ ಕಿರಣ್ ಕುಮಾರ್ ಎನ್ನುವವರು ನಿರ್ಮಾಪಕರು. ಅವರಿಗೆ ಇದು ಮೊದಲ ಚಿತ್ರ. ಉಳಿದಂತೆ ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣ ಮಾಡಿದರೆ, ಅಜನೀಶ್ ಲೋಕನಾಥ್ ನಾಲ್ಕು ಗೀತೆಗಳಿಗೆ ಸಂಗೀತ ನೀಡುತ್ತಿದ್ದಾರೆ. ದೀಪು ಎಸ್.ಕುಮಾರ್ ಸಂಕಲನ ಮಾಡಲಿದ್ದಾರೆ. “ಭರ್ಜರಿ’ ಚೇತನ್ ಕುಮಾರ್ ಸಾಹಿತ್ಯ, ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯಕ್ಕೆ ಹೀರೋ ಹಾಗು ತಂತ್ರಜ್ಞರ ಆಯ್ಕೆಯಾಗಿದೆ. ಉಳಿದಂತೆ ನಾಯಕಿ ಮತ್ತು ಕಲಾವಿದರ ಆಯ್ಕೆ ಆಗಬೇಕಿದೆ’ ಎಂದು ವಿವರ ಕೊಡುತ್ತಾರೆ ಲಕ್ಕಿ ಗೋಪಾಲ್.
“ಈ ಚಿತ್ರದ ಹೆಸರು, ನವೆಂಬರ್ 1ರಂದು ಲಾಂಚ್ ಆಗಲಿದೆ. ಅದೊಂದು ಪಕ್ಕಾ ಮಾಸ್ ಸಿನಿಮಾ ಆಗಿರುವುದರಿಂದ ಭರ್ಜರಿ ಆ್ಯಕ್ಷನ್‌ಗೆ ಒತ್ತು ಕೊಡಲಾಗಿದೆ. ಬಹುತೇಕ ಬೆಂಗಳೂರಲ್ಲೇ ನಡೆಯುವ ಕಥೆ ಇದು. ಉಳಿದಂತೆ ಬೆಳಗಾವಿ, ಮೈಸೂರು ಇತರೆ ಕಡೆ ಚಿತ್ರೀಕರಿಸುವ ಯೋಚನೆ ಇದೆ. ಸದ್ಯಕ್ಕೆ ಶಿವಣ್ಣ ಅವರ “ಮಫ್ತಿ’, “ಟಗರು’ ರಿಲೀಸ್ ಆಗಬೇಕು. ಅದಾದ ಬಳಿಕ “ವಿಲನ್’ ಕೂಡ ಹೊರಬರಬೇಕು, ನಂತರ “ಹರಿಹರ’ ಮತ್ತು ಇನ್ನೊಂದು ಸಿನಿಮಾಗೆ ಶಿವಣ್ಣ ಡೇಟ್ಸ್ ಕೊಟ್ಟಿದ್ದಾರೆ. ಅವುಗಳು ಮುಗಿದ ಮೇಲೆ ಬಹುಶಃ 121ನೇ ಸಿನಿಮಾ ನನ್ನದಾಗಲಿದೆ. ಬಹುಶಃ ಯುಗಾದಿ ಹೊತ್ತಿಗೆ ಸಿನಿಮಾ ಸೆಟ್ಟೇರಲಿದ್ದು, 2018ರ ದೀಪಾವಳಿಗೆ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ಲಕ್ಕಿ ಗೋಪಾಲ್.