Advertisement

Bowling ಇಲ್ಲದ ಆರ್‌ಸಿಬಿಗೆ ಲಕ್ನೋ ಸೂಪರ್‌ ಜೈಂಟ್ಸ್‌  ಸವಾಲು

11:19 PM Apr 01, 2024 | Team Udayavani |

ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ತವರಿನ ಅಂಗಳದಲ್ಲಿ ಸೋತ ಮೊದಲ ತಂಡವೆಂಬ ಅವಮಾನಕ್ಕೆ ಸಿಲುಕಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಮಂಗಳವಾರ ಮತ್ತೆ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆಡಲಿಳಿಯಲಿದೆ. ಎದುರಾಳಿ ಲಕ್ನೋ ಸೂಪರ್‌ ಜೈಂಟ್ಸ್‌. ಬೌಲಿಂಗ್‌ನಲ್ಲಿ ಸುಧಾರಣೆಯಾದರಷ್ಟೇ ಆರ್‌ಸಿಬಿ ಮೇಲುಗೈ ನಿರೀಕ್ಷಿಸಬಹುದೆಂಬುದು ಸದ್ಯದ ಸ್ಥಿತಿ.

Advertisement

ಆರ್‌ಸಿಬಿ ಬೌಲಿಂಗ್‌ ಅದೆಷ್ಟು ಕಳಪೆಯಾಗಿತ್ತೆಂಬುದಕ್ಕೆ ಕೆಕೆಆರ್‌ ಎದುರಿನ ಕಳೆದ ಪಂದ್ಯವೇ ಸಾಕ್ಷಿ. ಇದೊಂಥರ ಸಾಮೂಹಿಕ ವೈಫ‌ಲ್ಯದಂತಿತ್ತು. 11.5 ಕೋಟಿ ರೂ. ಬೆಲೆಯ ಅಲ್ಜಾರಿ ಜೋಸೆಫ್ ಜಾರಿ ಜಾರಿ ಹೋಗುತ್ತಿದ್ದಾರೆ. ಇವರು ಕೆಕೆಆರ್‌ ವಿರುದ್ಧ ಓವರ್‌ ಒಂದಕ್ಕೆ ನೀಡಿದ್ದು 17.00 ರನ್‌! ಸಿರಾಜ್‌ 15.30, ದಯಾಳ್‌ 11.50, ಡಾಗರ್‌ 8.10 ರನ್‌ ನೀಡಿದ್ದು ಆರ್‌ಸಿಬಿಯ ಒಟ್ಟು ಬೌಲಿಂಗ್‌ ದೌರ್ಬಲ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಸಿರಾಜ್‌, ಜೋಸೆಫ್, ದಯಾಳ್‌ ಅವರ 9 ಓವರ್‌ಗಳಲ್ಲಿ 126 ರನ್‌ ಸೋರಿಹೋಗಿತ್ತು!

ಕೋಲ್ಕತಾಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದವರು ವಿಜಯ್‌ಕುಮಾರ್‌ ವೈಶಾಖ್‌ ಮಾತ್ರ. ಕರ್ನಾಟಕದವರೇ ಆದ ವೈಶಾಖ್‌ 4 ಓವರ್‌ಗಳಲ್ಲಿ ಕೇವಲ 23 ರನ್‌ ನೀಡಿ ಒಂದು ವಿಕೆಟ್‌ ಉರುಳಿಸಿದ್ದರು.

ವೆರೈಟಿಯೇ ಇಲ್ಲ!
ಐಪಿಎಲ್‌ನ ಉಳಿದೆಲ್ಲ ತಂಡಗಳಿಗೆ ಹೋಲಿಸಿದರೆ ಆರ್‌ಸಿಬಿಯ ಬೌಲಿಂಗೇ ಅತ್ಯಂತ ದುರ್ಬಲ, ಇದರಲ್ಲಿ ವೆರೈಟಿಯೇ ಇಲ್ಲ ಎಂಬುದಕ್ಕೆ ವಿಶೇಷ ವಿಶ್ಲೇಷಣೆ ಬೇಕಿಲ್ಲ. ಕೆಕೆಆರ್‌ ವಿರುದ್ಧ ಮಾತ್ರವಲ್ಲ, ಚೆನ್ನೈ ಮತ್ತು ಪಂಜಾಬ್‌ ವಿರುದ್ಧವೂ ಬೌಲಿಂಗ್‌ ಘಾತಕವಾಗೇನೂ ಇರಲಿಲ್ಲ. ಚೆನ್ನೈ ವಿರುದ್ಧ ಉರುಳಿಸಲು ಸಾಧ್ಯವಾದದ್ದು 4 ವಿಕೆಟ್‌ ಮಾತ್ರ. ಇಲ್ಲಿಯೂ ಸಿರಾಜ್‌, ಜೋಸೆಫ್, ದಯಾಳ್‌, ಕರ್ಣ್ ಶರ್ಮ, ಗ್ರೀನ್‌ ಧಾರಾಳಿಯಾಗಿದ್ದರು. ಪಂಜಾಬ್‌ ವಿರುದ್ಧ ಜಯ ಒಲಿಯಿತಾದರೂ ಜೋಸೆಫ್, ಡಾಗರ್‌, ಗ್ರೀನ್‌ ಸಖತ್‌ ರನ್‌ ನೀಡಿದ್ದರು.

ಇಂಥ ಸ್ಥಿತಿಯಲ್ಲಿ ಲಾಕಿ ಫ‌ರ್ಗ್ಯುಸನ್‌ ಅವರನ್ನು ಬೆಂಚ್‌ ಬಿಸಿ ಮಾಡಿಸಲು ಕೂರಿಸುವುದು ಸರಿಯಲ್ಲ. ಹಾಗೆಯೇ ಆರ್‌ಸಿಬಿ ಸ್ಪಿನ್‌ ವಿಭಾಗಕ್ಕೆ ಸರ್ಜರಿ ಮಾಡೋಣವೆಂದರೆ ಸೂಕ್ತ ಬದಲಿ ಆಯ್ಕೆಗಳೇ ಇಲ್ಲ!

Advertisement

ಮಾಯಾಂಕ್‌ ಯಾದವ್‌ ಘಾತಕ ಅಸ್ತ್ರ
ಇದೇ ವೇಳೆ ಲಕ್ನೋದ ಬೌಲಿಂಗ್‌ ಉಗ್ರಾಣಕ್ಕೆ ಮಾಯಾಂಕ್‌ ಯಾದವ್‌ ಎಂಬ ಘಾತಕ ಅಸ್ತ್ರವೊಂದು ಬಂದಿದೆ. ದಿಲ್ಲಿಯ ಈ 21 ವರ್ಷದ ವೇಗಿ ಪಂಜಾಬ್‌ ಎದುರಿನ ಪದಾರ್ಪಣ ಪಂದ್ಯದ ಮೂಲಕ ಭಾರೀ ಸಂಚಲನ ಮೂಡಿಸಿದ್ದು ಆರ್‌ಸಿಬಿ ಪಾಲಿಗೊಂದು ಎಚ್ಚರಿಕೆಯ ಗಂಟೆ.
ಸಾಮಾನ್ಯವಾಗಿ 150 ಪ್ಲಸ್‌ ವೇಗದಲ್ಲೂ ಲೈನ್‌ ಆ್ಯಂಡ್‌ ಲೆಂತ್‌ ಕಾಪಾಡಿಕೊಂಡು ಬರುವುದು ಕಷ್ಟ. ವಿಶ್ವದ ಆದೆಷ್ಟೋ ವೇಗಿಗಳು ಇಲ್ಲೇ ಎಡವುತ್ತಿದ್ದರು. ಭಾರತದ ಉಮ್ರಾನ್‌ ಮಲಿಕ್‌ ಕೂಡ ಇದಕ್ಕೆ ಹೊರತಲ್ಲ. ಆದರೆ ಮಾಯಾಂಕ್‌ ಒಂದೇ ಒಂದು ವೈಡ್‌ ಎಸೆತ ಹಾಕದೆ, ಕರಾರುವಾಕ್‌ ದಾಳಿ ಮೂಲಕ ಯಶಸ್ಸು ಕಂಡಿದ್ದಾರೆ. ಹೊಡಿಬಡಿ ಆಟದಲ್ಲಿ ಇದು ನಿಜಕ್ಕೂ ಅಸಾಮಾನ್ಯ ಸಾಧನೆ. ಇವರನ್ನು ಆರ್‌ಸಿಬಿ ಬ್ಯಾಟರ್ ಹೇಗೆ ಎದುರಿಸುತ್ತಾರೆ ಎಂಬುದು ಕೂಡ ನಿರ್ಣಾಯಕ ಅಂಶ.

ಲಕ್ನೋ ಪಾಲಿನ ಚಿಂತೆಯ ಸಂಗತಿಯೆಂದರೆ ನಾಯಕ ಕೆ.ಎಲ್‌. ರಾಹುಲ್‌ ಅವರ ಫಿಟ್‌ನೆಸ್‌. ಹೀಗಾಗಿ ಪಂಜಾಬ್‌ ವಿರುದ್ಧ ಪೂರಣ್‌ ತಂಡವನ್ನು ಮುನ್ನಡೆಸಿದ್ದರು. ರಾಹುಲ್‌ ತವರಿನ ಅಂಗಳದ ಪಂದ್ಯದಲ್ಲೂ ಇಂಪ್ಯಾಕ್ಟ್ ಆಟಗಾರನಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚು. ಕರ್ನಾಟಕದ ಮತ್ತೋರ್ವ ಆಟಗಾರ ದೇವದತ್ತ ಪಡಿಕ್ಕಲ್‌ ಕೂಡ ಎದುರಾಳಿ ತಂಡದಲ್ಲಿದ್ದಾರೆ. ಕೂಟದಲ್ಲಿ ಮೊದಲ ಸಲ ಸಿಡಿದು ನಿಲ್ಲಲು ಅವರಿಗೆ ಇದೊಂದು ವೇದಿಕೆ ಆಗಲೂಬಹುದು.

ಪಿಚ್‌ ರಿಪೋರ್ಟ್‌
ಇದೊಂದು ಅಪ್ಪಟ ಬ್ಯಾಟಿಂಗ್‌ ಟ್ರ್ಯಾಕ್‌. ಬೌನ್ಸ್‌, ಸ್ವಿಂಗ್‌, ಸ್ಪಿನ್‌… ಯಾವುದನ್ನೂ ಇಲ್ಲಿ ನಿರೀಕ್ಷಿಸುವಂತಿಲ್ಲ. ಸಣ್ಣ ಬೌಂಡರಿಯಾದ ಕಾರಣ ದೊಡ್ಡ ಹೊಡೆತಗಳು ಸಲೀಸು. ಮೊದಲು ಬ್ಯಾಟಿಂಗ್‌ ಮಾಡಿದ ತಂಡ ಇನ್ನೂರರ ಗಡಿ ದಾಟಿದರಷ್ಟೇ ಸೇಫ್. ಚೇಸಿಂಗ್‌ ಕೂಡ ಸಲೀಸು.

ಆರ್‌ಸಿಬಿ-ಲಕ್ನೋ ಅಂಕಿಅಂಶ ಸ್ವಾರಸ್ಯ
·  ಇತ್ತಂಡಗಳ ಪರ ಫಾ ಡು ಪ್ಲೆಸಿಸ್‌ ಅತ್ಯಧಿಕ 219 ರನ್‌ ಗಳಿಸಿದ್ದಾರೆ (4 ಇನ್ನಿಂಗ್ಸ್‌). ಸರಾಸರಿ 73.00, ಸ್ಟ್ರೈಕ್‌ರೇಟ್‌ 145.03. ಇದರಲ್ಲಿ 2 ಅರ್ಧ ಶತಕ ಸೇರಿದೆ. 17 ಬೌಂಡರಿ, 8 ಸಿಕ್ಸರ್‌ ಸಿಡಿಸಿದ್ದಾರೆ.
·  ಇತ್ತಂಡಗಳ ನಡುವಿನ ಪಂದ್ಯದಲ್ಲಿ ಅತ್ಯಧಿಕ ವಿಕೆಟ್‌ ಉರುಳಿಸಿದ ಸಾಧನೆ ಆರ್‌ಸಿಬಿಯ ಜೋಶ್‌ ಹೇಝಲ್‌ವುಡ್‌ ಅವರದು. ಇವರು 3 ಪಂದ್ಯಗಳಿಂದ 9 ವಿಕೆಟ್‌ ಕೆಡವಿದ್ದಾರೆ.

·  ಬೆಂಗಳೂರಿನಲ್ಲಿ ನಡೆದ 2023ರ ಲೀಗ್‌ ಪಂದ್ಯದಲ್ಲಿ ಆರ್‌ಸಿಬಿ 212 ರನ್‌ ಗಳಿಸಿದ್ದು ಇತ್ತಂಡಗಳ ನಡುವಿನ ಗರಿಷ್ಠ ಮೊತ್ತವಾಗಿದೆ. 2023ರ ಲಕ್ನೋ ಪಂದ್ಯದಲ್ಲಿ 126 ರನ್‌ ಗಳಿಸಿದ್ದು ಆರ್‌ಸಿಬಿಯ ಕನಿಷ್ಠ ಗಳಿಕೆ. ಆದರೆ ಈ ಮೊತ್ತವನ್ನೂ ಆರ್‌ಸಿಬಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಲಕ್ನೋ ವಿರುದ್ಧ 18 ರನ್‌ ಜಯ ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next