Advertisement

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

11:43 PM Apr 19, 2024 | Team Udayavani |

ಲಕ್ನೋ: ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 8 ವಿಕೆಟ್ ಗಳ ಅಮೋಘ ಜಯ ಸಾಧಿಸಿದೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ರವೀಂದ್ರ ಜಡೇಜ ಅವರ ಅರ್ಧ ಶತಕ, ಮೊಯಿನ್‌ ಅಲಿ ಮತ್ತು ಧೋನಿ ಅವರು ಬಿರುಸಿನ ಬ್ಯಾಟಿಂಗ್‌ ನೆರವಿನಿಂದ ಆತಿ ಥೇಯ ಲಕ್ನೋ ಸೂಪರ್‌ ಜೈಂಟ್ಸ್‌ ಎದುರಿನ ಶುಕ್ರವಾರದ ಐಪಿಎಲ್‌ ಪಂದ್ಯ ದಲ್ಲಿ ಚೆನ್ನೈ 6 ವಿಕೆಟಿಗೆ 176 ರನ್‌ ಪೇರಿಸಿತು.

ಗುರಿ ಬೆನ್ನಟ್ಟಿದ ಲಕ್ನೋ ಪರ ನಾಯಕ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಅಮೋಘ ಆರಂಭ ಒದಗಿಸಿಕೊಟ್ಟರು. ರಾಹುಲ್ ಅವರು ಅತ್ಯತ್ತಮ ಆಟವಾಡಿ 82 (53 ಎಸೆತ) ರನ್ ಗಳಿಸಿ ಔಟಾದರು. ಸಾಥ್ ನೀಡಿದ ಡಿ ಕಾಕ್ 54 ರನ್ ಗಳಿಸಿ ಔಟಾದರು. ನಿಕೋಲಸ್ ಪೂರನ್ ಔಟಾಗದೆ 23, ಮಾರ್ಕಸ್ ಸ್ಟೊಯಿನಿಸ್ ಔಟಾಗದೆ 8 ರನ್ ಗಳಿಸಿದರು. ತಂಡ 19 ಓವರ್ ಗಳಲ್ಲಿ2 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿ ಅಮೋಘ ಜಯ ತನ್ನದಾಗಿಸಿಕೊಂಡಿತು. ಲಕ್ನೋ ಆಡಿದ 7 ನೇ ಪಂದ್ಯದಲ್ಲಿ 4 ನೇ ಜಯ ತನ್ನದಾಗಿಸಿಕೊಂಡರೆ, ಚೆನ್ನೈ ಆಡಿದ 7 ನೇ ಪಂದ್ಯದಲ್ಲಿ3 ನೇ ಸೋಲು ಅನುಭವಿಸಿತು.

4ನೇ ಕ್ರಮಾಂಕದಲ್ಲಿ ಆಡಲಿಳಿದ ಜಡೇಜ 40 ಎಸೆತಗಳಿಂದ 57 ರನ್‌ ಬಾರಿಸಿ ಔಟಾಗದೆ ಉಳಿದರು (5 ಬೌಂಡರಿ, 1 ಸಿಕ್ಸರ್‌). ಮೊಯಿನ್‌ ಅಲಿ ಕೊಡುಗೆ 20 ಎಸೆತಗಳಿಂದ 30 ರನ್‌. ಸಿಡಿಸಿದ್ದು 3 ಸಿಕ್ಸರ್‌. ಧೋನಿ ತಮ್ಮ ಸ್ಫೋಟಕ ಆಟವನ್ನು ಮುಂದುವರಿಸಿ ಕೇವಲ 9 ಎಸೆತಗಳಿಂದ ಅಜೇಯ 28 ರನ್‌ ಬಾರಿಸಿದರು. 3 ಬೌಂಡರಿ, 2 ಸಿಕ್ಸರ್‌ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು.

ನಿಧಾನ ಗತಿಯ ಆರಂಭ
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫ‌ಲವಾಯಿತು. ರಚಿನ್‌ ರವೀಂದ್ರ (0) ಮತ್ತು ನಾಯಕ ಋತುರಾಜ್‌ ಗಾಯಕ್ವಾಡ್‌ (17) ಪವರ್‌ ಪ್ಲೇಯಲ್ಲೇ ಪೆವಿಲಿಯನ್‌ ಸೇರಿಕೊಂಡರು. ಇವರಲ್ಲಿ ರಚಿನ್‌ ಅವರದು “ಗೋಲ್ಡನ್‌ ಡಕ್‌’ ಸಂಕಟ. ಮೊಹ್ಸಿನ್‌ ಖಾನ್‌ ಮೊದಲ ಎಸೆತದಲ್ಲೇ ಈ ಕಿವೀಸ್‌ ಕ್ರಿಕೆಟಿಗನನ್ನು ಕ್ಲೀನ್‌ಬೌಲ್ಡ್‌ ಮಾಡಿದರು. ಇದರೊಂದಿಗೆ ರಚಿನ್‌ ವೈಫ‌ಲ್ಯ ಮುಂದುವರಿಯಿತು. ಮೊದಲೆರಡು ಪಂದ್ಯಗಳಲ್ಲಿ 83 ರನ್‌ ಮಾಡಿದ್ದ ರಚಿನ್‌ ರವೀಂದ್ರ, ಅನಂತರದ 5 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು 50 ರನ್‌ ಮಾತ್ರ.

Advertisement

ಗಾಯಕ್ವಾಡ್‌ ಗಳಿಕೆ ಕೇವಲ 17 ರನ್‌ (13 ಎಸೆತ, 1 ಬೌಂಡರಿ). 4.2 ಓವರ್‌ಗಳಲ್ಲಿ 33 ರನ್ನಿಗೆ 2 ವಿಕೆಟ್‌ ಬಿತ್ತು. ಆದರೆ ಅಜಿಂಕ್ಯ ರಹಾನೆ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 9ನೇ ಓವರ್‌ ತನಕ ನಿಂತ ರಹಾನೆ 24 ಎಸೆತಗಳಿಂದ 36 ರನ್‌ ಹೊಡೆದರು (5 ಬೌಂಡರಿ, 1 ಸಿಕ್ಸರ್‌). ಆದರೆ ಶಿವಂ ದುಬೆ ಮತ್ತು ಸಮೀರ್‌ ರಿಝಿÌ ಯಶಸ್ಸು ಕಾಣಲಿಲ್ಲ. 90 ರನ್ನಿಗೆ 5 ವಿಕೆಟ್‌ ಬಿತ್ತು. ಈ ಹಂತದಲ್ಲಿ ರವೀಂದ್ರ ಜಡೇಜ-ಮೊಯಿನ್‌ ಅಲಿ ಸೇರಿಕೊಂಡು ತಂಡಕ್ಕೆ ಆಧಾರವಾದರು. ಇವರಿಂದ 6ನೇ ವಿಕೆಟಿಗೆ 51 ರನ್‌ ಒಟ್ಟುಗೂಡಿತು. ಬಳಿಕ ಜಡೇಜ-ಧೋನಿ ಸೇರಿಕೊಂಡು ಕೊನೆಯ 2.1 ಓವರ್‌ಗಳಿಂದ 35 ರನ್‌ ಪೇರಿಸಿದರು.

ಎರಡು ಬದಲಾವಣೆ
ಈ ಪಂದ್ಯಕ್ಕಾಗಿ ಚೆನ್ನೈ ತಂಡದಲ್ಲಿ ಎರಡು ಬದಲಾವಣೆ ಸಂಭವಿಸಿತು. ಡ್ಯಾರಿಲ್‌ ಮಿಚೆಲ್‌ ಮತ್ತು ಶಾರ್ದೂಲ್‌ ಠಾಕೂರ್‌ ಬದಲು ಮೊಯಿನ್‌ ಅಲಿ ಮತ್ತು ದೀಪಕ್‌ ಚಹರ್‌ ಆಡಲಿಳಿದರು. ಲಕ್ನೋ ತಂಡದಲ್ಲಿ ಶಮರ್‌ ಜೋಸೆಫ್ ಬದಲು ಮ್ಯಾಟ್‌ ಹೆನ್ರಿ ಅವಕಾಶ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next