Advertisement

ಪ್ಲೇ ಆಫ್ ಸನಿಹ ಲಕ್ನೋ ಸೂಪರ್ ಜೈಂಟ್ಸ್ -ರಾಜಸ್ಥಾನ್‌ ರಾಯಲ್ಸ್‌

01:08 AM May 15, 2022 | Team Udayavani |

ಮುಂಬಯಿ: ಪ್ರಥಮ ಪ್ರವೇಶದಲ್ಲೇ ನಿರೀಕ್ಷೆಗೂ ಮೀರಿದ ಸಾಧನೆಗೈದ ತಂಡಗಳೆಂಬ ಹೆಗ್ಗಳಿಕೆ ಗುಜರಾತ್‌ ಮತ್ತು ಲಕ್ನೋ ತಂಡಗಳದ್ದು. ಇವುಗಳಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಈಗಾಗಲೇ ಐಪಿಎಲ್‌ ಪ್ಲೇ ಆಫ್ ಪ್ರವೇಶಿಸಿದೆ. ಕೆ.ಎಲ್‌. ರಾಹುಲ್‌ ಸಾರಥ್ಯದ ಲಕ್ನೋ ಇದೇ ಹಾದಿಯಲ್ಲಿದೆ. ರವಿವಾರದ ಮುಖಾಮುಖಿಯಲ್ಲಿ ರಾಜಸ್ಥಾನ್‌ ವಿರುದ್ಧ ಜಯ ಸಾಧಿಸಿದರೆ ಮುಂದಿನ ಸುತ್ತು ಅಧಿಕೃತಗೊಳ್ಳಲಿದೆ.

Advertisement

ಇನ್ನೊಂದೆಡೆ ರಾಜಸ್ಥಾನ್‌ ರಾಯಲ್ಸ್‌ ಕೂಡ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿದ್ದು, ಲಕ್ನೋವನ್ನು ಮಣಿಸಿದರೆ ಅದು ಕೂಡ ಪ್ಲೇ ಆಫ್ ಗೆ ಹತ್ತಿರವಾಗಲಿದೆ.

ಲಕ್ನೋ 12ರಲ್ಲಿ 8 ಪಂದ್ಯಗಳನ್ನು ಜಯಿಸಿದ್ದು, 16 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಅಂತಿಮ ಲೀಗ್‌ ಪಂದ್ಯದಲ್ಲಿ ಕೋಲ್ಕತಾವನ್ನು ಎದುರಿಸಲಿದೆ.

ರಾಹುಲ್‌ ಪಡೆಯ ಈಗಿನ ಫಾರ್ಮ್ ಕಂಡಾಗ ಉಳಿದೆರಡು ಪಂದ್ಯಗಳಲ್ಲಿ ಒಂದನ್ನು ಗೆಲ್ಲುವುದು ಅಸಾಧ್ಯವೇನಲ್ಲ.

ಹಾಗೆಯೇ ರಾಜಸ್ಥಾನ್‌ 12 ಪಂದ್ಯಗಳಲ್ಲಿ ಏಳನ್ನು ಗೆದ್ದು 14 ಅಂಕ ಕಲೆಹಾಕಿದೆ. ಅಂತಿಮ ಲೀಗ್‌ ಎದುರಾಳಿ ಚೆನ್ನೈ. ಹೀಗಾಗಿ ಸಂಜು ಸ್ಯಾಮ್ಸನ್‌ ಪಡೆಗೆ 16 ಅಂಕಗಳ ಸಂಪಾದನೆ ಅಸಾಧ್ಯವೇನಲ್ಲ. ಅಲ್ಲಿಗೆ ಮೊದಲ 3 ಸ್ಥಾನದಲ್ಲಿರುವ ತಂಡಗಳೇ ಪ್ಲೇ ಆಫ್ ಪ್ರವೇಶಿಸುವುದು ಬಹುತೇಕ ಖಚಿತ ಎಂಬುದೊಂದು ಲೆಕ್ಕಾಚಾರ. ಆದರೆ ಐಪಿಎಲ್‌ “ಲೆಕ್ಕಾಚಾರ’ಗಳೇ ಬೇರೆ ಇರುತ್ತವೆ!

Advertisement

ರಾಹುಲ್‌-ಡಿ ಕಾಕ್‌ ಆಸರೆ
ಲಕ್ನೋಗೆ ಹೆಚ್ಚಿನ ಆಸರೆ ಒದಗಿಸಿದವರೆಂದರೆ ಆರಂಭಿಕರಾದ ರಾಹುಲ್‌ ಮತ್ತು ಡಿ ಕಾಕ್‌. ಇವರಲ್ಲಿ ರಾಹುಲ್‌ ಕೆಲವು ಸೊನ್ನೆ ಸುತ್ತಿದರೂ 2 ಸೆಂಚುರಿ ಮೂಲಕ ಪ್ಯಾಚಪ್‌ ಮಾಡಿಕೊಂಡಿದ್ದಾರೆ; 12 ಪಂದ್ಯಗಳಿಂದ 459 ರನ್‌ ಪೇರಿಸಿದ್ದಾರೆ. 2 ಅರ್ಧ ಶತಕವೂ ಇದರಲ್ಲಿ ಸೇರಿದೆ. ಡಿ ಕಾಕ್‌ 12 ಪಂದ್ಯಗಳಿಂದ 355 ರನ್‌ ಬಾರಿಸಿದ್ದಾರೆ. ದೀಪಕ್‌ ಹೂಡಾ ತಂಡದ ಮತ್ತೋರ್ವ ಪ್ರಮುಖ ಸ್ಕೋರರ್‌. ಇವರ ಗಳಿಕೆ 347 ರನ್‌.

ಆದರೆ ಗುಜರಾತ್‌ ಎದುರಿನ ಕೊನೆಯ ಪಂದ್ಯದಲ್ಲಿ 82 ರನ್ನಿಗೆ ಗಂಟುಮೂಟೆ ಕಟ್ಟಿದ್ದು ಲಕ್ನೋಗೆ ಎದುರಾಗಿರುವ ದೊಡ್ಡ ಹಿನ್ನಡೆ. ಅಲ್ಲಿ ಮೂವರಿಂದಷ್ಟೇ ಎರಡಂಕೆಯ ಗಳಿಕೆ ಸಾಧ್ಯವಾಗಿತ್ತು. 27 ರನ್‌ ಮಾಡಿದ ಹೂಡಾ ಅವರದೇ ಹೆಚ್ಚಿನ ಗಳಿಕೆ. ಹೀಗಾಗಿ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ ಎದುರಾಗದಂತೆ ನೋಡಿಕೊಳ್ಳಬೇಕಿದೆ.

ಬೊಂಬಾಟ್‌ ಬಟ್ಲರ್‌
ರಾಜಸ್ಥಾನ್‌ ಬ್ಯಾಟಿಂಗ್‌ ಲಕ್ನೋಗಿಂತ ಹೆಚ್ಚು ಬಲಿಷ್ಠ. ಜಾಸ್‌ ಬಟ್ಲರ್‌ 3 ಸೆಂಚುರಿ, 3 ಅರ್ಧ ಶತಕಗಳ ನೆರವಿನಿಂದ 625 ರನ್‌ ಪೇರಿಸಿದ್ದಾರೆ. ನಾಯಕ ಸಂಜು ಸ್ಯಾಮ್ಸನ್‌ ಪೂರ್ಣ ಸಾಮರ್ಥ್ಯ ತೋರ್ಪಡಿಸದೇ ಹೋದರೂ 12 ಪಂದ್ಯಗಳಿಂದ 327 ರನ್‌ ಹೊಡೆದಿದ್ದಾರೆ. ದೇವದತ್ತ ಪಡಿಕ್ಕಲ್‌ 295 ರನ್‌, ಶಿಮ್ರನ್‌ ಹೆಟ್‌ಮೈರ್‌ 291 ರನ್‌ ಹೊಡೆದು ಬ್ಯಾಟಿಂಗ್‌ ಸರದಿಯ ಭರವಸೆಗಳಾಗಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ರಾಜಸ್ಥಾನ್‌ ಸರದಿಯ ಟಾಪ್‌ ಸ್ಕೋರರ್‌ ಆಗಿ ಮೂಡಿಬಂದವರು ಇವರ್ಯಾರೂ ಅಲ್ಲ, ಅದು ಆರ್‌. ಅಶ್ವಿ‌ನ್‌. ಅವರು ಟಿ20 ಮಾದರಿಯಲ್ಲೇ ಮೊದಲ ಶತಕಾರ್ಧ ಬಾರಿಸಿ ಗಮನ ಸೆಳೆದರು. ಅರ್ಥಾತ್‌, ರಾಜಸ್ಥಾನ್‌ ಬ್ಯಾಟಿಂಗ್‌ ವಿಭಾಗದಲ್ಲೂ ಸಮಸ್ಯೆ ಇದೆ ಎಂದಾಯಿತು!

ರಾಜಸ್ಥಾನ್‌ ಬೌಲಿಂಗ್‌ ಬಲಿಷ್ಠ
ಬೌಲಿಂಗ್‌ ವಿಭಾಗದಲ್ಲೂ ರಾಜಸ್ಥಾನ್‌ ರಾಯಲ್ಸ್‌ ಹೆಚ್ಚು ಬಲಿಷ್ಠ ಎನ್ನಲಡ್ಡಿಯಿಲ್ಲ. ಟೀಮ್‌ ಇಂಡಿಯಾದ ಸ್ಪಿನ್‌ ಜೋಡಿ ಚಹಲ್‌-ಅಶ್ವಿ‌ನ್‌ ಇಲ್ಲಿಯೂ ಮೋಡಿಗೈಯುತ್ತಿದೆ. ಚಹಲ್‌ 23 ವಿಕೆಟ್‌ ಹಾರಿಸಿ ಪರ್ಪಲ್‌ ಕ್ಯಾಪ್‌ ಧರಿಸಿದ್ದಾರೆ. ಟ್ರೆಂಟ್‌ ಬೌಲ್ಟ್ ಮತ್ತು ಪ್ರಸಿದ್ಧ್ ಕೃಷ್ಣ ವೇಗದ ವಿಭಾಗದ ಪ್ರಮುಖರು.

ಲಕ್ನೋ ಬೌಲಿಂಗ್‌ ಘಾತಕವೇನಲ್ಲ. ಆವೇಶ್‌ ಖಾನ್‌, ಮೊಹ್ಸಿನ್‌ ಖಾನ್‌, ದುಷ್ಮಂತ ಚಮೀರ, ಕೃಣಾಲ್‌ ಪಾಂಡ್ಯ, ಜೇಸನ್‌ ಹೋಲ್ಡರ್‌ ಅವರಿಂದ ಬಟ್ಲರ್‌, ಸ್ಯಾಮ್ಸನ್‌ ಆರ್ಭಟಕ್ಕೆ ಕಡಿವಾಣ ಹಾಕಲು ಸಾಧ್ಯವೇ ಎಂಬುದೊಂದು ಪ್ರಶ್ನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next