ಲಕ್ನೋ: 32ರ ಹರೆಯದ ಯುವ ವಕೀಲರೊಬ್ಬರನ್ನು ಮಂಗಳವಾರ ರಾತ್ರಿ ಹತ್ಯೆಗೈದಿರುವ ಘಟನೆ ಖಂಡಿಸಿ ಉತ್ತರಪ್ರದೇಶದಲ್ಲಿ ವಕೀಲರು ತೀವ್ರ ಪ್ರತಿಭಟನೆ ನಡೆಸಿದ್ದರು. ಏತನ್ಮಧ್ಯೆ ಪ್ರತಿಭಟನಾನಿರತ ವಕೀಲರು ತಮ್ಮ ಸಹೋದ್ಯೋಗಿಯ ಶವವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ರೂಂನೊಳಗೆ ಕೊಂಡೊಯ್ದು ಪ್ರತಿಭಟಿಸಿದ ಪ್ರಸಂಗ ಬುಧವಾರ ನಡೆಯಿತು.
ಪ್ರತಿಭಟನಾ ನಿರತ ವಕೀಲರು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಸಮೀಪದ ರಸ್ತೆಯನ್ನು ಬಂದ್ ಮಾಡಿ, ಪೊಲೀಸರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದರು. ಮಂಗಳವಾರ ರಾತ್ರಿ ಸುಮಾರು ಐದು ಮಂದಿ ದುಷ್ಕರ್ಮಿಗಳು ಕಲ್ಲು, ಕಬ್ಬಿಣದ ಸಲಾಕೆಯಿಂದ ಹೊಡೆದು 32 ವರ್ಷದ ವಕೀಲ ಶಿಶಿರ್ ತ್ರಿಪಾಠಿಯನ್ನು ಹತ್ಯೆಗೈದಿರುವ ಘಟನೆ ಲಕ್ನೋ ಹೊರವಲಯದಲ್ಲಿ ನಡೆದಿತ್ತು.
ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಉಳಿದ ನಾಲ್ವರು ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯೂ ವಕೀಲನಾಗಿರುವುದಾಗಿ ಪೊಲೀಸ್ ಅಧೀಕಾರಿಗಳು ತಿಳಿಸಿದ್ದಾರೆ.
ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದ ವೈಯಕ್ತಿಕ ವಿಚಾರದಲ್ಲಿ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ವರದಿ ವಿವರಿಸಿದೆ.
ಆಕ್ರೋಶಿತ ವಕೀಲರ ಪ್ರತಿಭಟನೆ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ಹರಸಾಹಸ ಪಟ್ಟ ನಂತರ ಕೊನೆಗೂ ಶವದ ಅಂತ್ಯ ಸಂಸ್ಕಾರ ನಡೆಸಲು ಮನವೊಲಿಸಿರುವುದಾಗಿ ವರದಿ ತಿಳಿಸಿದೆ.