ಗಜೇಂದ್ರಗಡ: ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಇನ್ನೂ ಸಮವಸ್ತ್ರ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಮಕ್ಕಳು ಸಾಮಾನ್ಯ ಉಡುಪಿನಲ್ಲೇ ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲ್ಲ ಮಕ್ಕಳಲ್ಲಿ ಸಮಾನತೆ ಕಾಪಾಡುವ ಉದ್ದೇಶದಿಂದ ಸರ್ಕಾರ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದೆ. ಪ್ರತಿ ವರ್ಷವೂ ಸಮವಸ್ತ್ರ ಶೈಕ್ಷಣಿಕ ವರ್ಷ ಆರಂಭದ ದಿನದಲ್ಲಿಯೇ ನೀಡಲಾಗುತ್ತಿತ್ತು. ಆದರೆ ಶಾಲೆ ಆರಂಭವಾಗಿ ಎರಡು ತಿಂಗಳಾದರೂ ಇನ್ನೂ ಸಮವಸ್ತ್ರ ವಿತರಣೆ ಮಾಡದಿರುವುದು ದುರಾದೃಷ್ಟಕರ.
ಕೆಲವೆಡೆ ಪ್ರತ್ಯೇಕ ಸಮವಸ್ತ್ರ: ಎಸ್‌ಡಿಎಂಸಿ ಸದೃಢವಾಗಿರುವ ಶಾಲೆಗಳಲ್ಲಿ ಪ್ರತ್ಯೇಕ ಸಮವಸ್ತ್ರ ನೀಡಲಾಗಿದೆ. ಆದರೆ ಇದನ್ನು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ. ಬಟ್ಟೆ, ಬಿಸಿಯೂಟದ ಸಲುವಾಗಿಯೇ ಸರ್ಕಾರಿ ಶಾಲೆಗೆ ಬರುವ ಮಕ್ಕಳಿದ್ದಾರೆ. ಅವರಿಗೆ ಪ್ರತ್ಯೇಕ ಸಮವಸ್ತ್ರ ಹೊಲಿಸಿಕೊಳ್ಳುವಂತೆ ಒತ್ತಾಯ ಮಾಡಲು ಸಾಧ್ಯವಿಲ್ಲ. ಇಲಾಖೆ ಸಮವಸ್ತ್ರ ವಿತರಣೆ ಮಾಡದ ಕಾರಣ ಮಕ್ಕಳು ಹರಿದ, ಒಗೆಯದ ಬಟ್ಟೆಗಳನ್ನೇ ಧರಿಸಿ ಬರುತ್ತಿದ್ದಾರೆ. ಕೆಲವು ಮಕ್ಕಳ ಬಳಿ ಒಂದೇ ಜೊತೆ ಬಟ್ಟೆ ಇವೆ. ಅದನ್ನು ಒಗೆಯುವ ಕಾರಣಕ್ಕಾಗಿಯೇ ಮಕ್ಕಳು ಶಾಲೆಗೆ ಬರುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಕ್ಕಳ ಸ್ಥಿತಿಯನ್ನು ಕಣ್ಣಿನಿಂದ ನೋಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ಶಿಕ್ಷಕರೊಬ್ಬರು.
Advertisement
ಬೇಸಿಗೆ ರಜೆ ನಂತರ ಮೇ 28ರಂದು ಸರ್ಕಾರಿ ಶಾಲೆಗಳು ಆರಂಭವಾಗಿವೆ. ಶಾಲಾ ಪ್ರಾರಂಭೋತ್ಸವ ನಂತರ ಕೆಲ ದಿನಗಳಲ್ಲಿಯೇ ಪಠ್ಯಪುಸ್ತಕ, ನೋಟ್ಬುಕ್ ವಿತರಣೆ ಮಾಡಿದರು. ವಾರದಲ್ಲಿ ಸಮವಸ್ತ್ರ ವಿತರಣೆ ಮಾಡುವುದಾಗಿ ಮಕ್ಕಳಿಗೆ ಶಿಕ್ಷಕರು ಭರವಸೆ ನೀಡಿದ್ದರು. ಆದರೆ ಜುಲೈ ತಿಂಗಳು ಮುಗಿಯುತ್ತಾ ಬಂದರೂ ಸಮವಸ್ತ್ರ ವಿತರಣೆಯಾಗಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ರೋಣ ಮತ್ತು ಗಜೇಂದ್ರಗಡ ತಾಲೂಕಿನ ಯಾವ ಶಾಲೆಗಳಿಗೂ ಇನ್ನೂ ಸಮವಸ್ತ್ರ ವಿತರಿಸಿಲ್ಲ.
ಶಾಲೆಗಳಲ್ಲಿ ಹಾಜರಾತಿ ಕುಂಠಿತ:
ಗಜೇಂದ್ರಗಡ ಮತ್ತು ರೋಣ ತಾಲೂಕಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನೊಳಗೊಂಡು 150ಕ್ಕೂ ಅಧಿಕ ಪ್ರಾಥಮಿಕ, 42ಕ್ಕೂ ಅಧಿಕ ಪ್ರೌಢಶಾಲೆಗಳಿವೆ. ಶೈಕ್ಷಣಿಕ ವರ್ಷದಲ್ಲಿ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರಿದ್ದಾರೆ. ಅವರಿಗೆ ಸರ್ಕಾರ ಇದುವರೆಗೂ ಸಮವಸ್ತ್ರ ನೀಡದಿರುವುದರಿಂದ ಶಾಲೆಗಳಲ್ಲಿ ಹಾಜರಾತಿ ಕುಂಠಿತಗೊಳ್ಳಲು ಕಾರಣವಾಗಿದೆ. ಶಿಕ್ಷಣ ಇಲಾಖೆ ಕೂಡಲೇ ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಕೆಗೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
•ಡಿ.ಜಿ. ಮೋಮಿನ್