Advertisement

L&Tಯ ನಿವೃತ್ತ ಅಧ್ಯಕ್ಷರಿಗೆ ಸಿಕ್ಕಿತು ಬರೋಬ್ಬರಿ ರೂ.21 ಕೋಟಿ !

11:49 AM Jan 30, 2019 | |

ನಿರ್ಮಾಣ ಕ್ಷೇತ್ರದ ದೈತ್ಯ ಲಾರ್ಸನ್ ಮತ್ತು ಟರ್ಬೋ (L&T) ಕಂಪೆನಿಯ ನಾನ್ ಎಕ್ಸಿಕ್ಯೂಟಿವ್ ಚಯರ್ ಮನ್ ಪದ್ಮವಿಭೂಷಣ ಅನಿಲ್ ಮನಿ ಭಾಯ್ ನಾಯ್ಕ್ ಅವರಿಗೆ ನಿವೃತ್ತಿ ಸಮಯದಲ್ಲಿ ಬರೋಬ್ಬರಿ 21 ಕೋಟಿ ರೂಪಾಯಿಗಳ ಮೊತ್ತ ಲಭಿಸಿದೆ. ಕಳೆದ 50 ವರ್ಷಗಳಲ್ಲಿ L&T ಸಂಸ್ಥೆಯಲ್ಲಿ ಸೇವೆ ಸಲ್ಲಿಕೆಯ ಸಂದರ್ಭದಲ್ಲಿ ನಾಯ್ಕ್ ಅವರು ಬಳಸದೇ ಇದ್ದ ಅಸೌಖ್ಯ ರಜೆಗೆ ನಗದು ಪಾವತಿ ರೂಪದಲ್ಲಿ ಸಿಕ್ಕಿದ ಮೊತ್ತ ಇದಾಗಿದೆ. ಕಂಪೆನಿಯ 2018ನೇ ವರ್ಷದ ಹಣಕಾಸು ವರ್ಷದ ವಾರ್ಷಿಕ ವರದಿಯ ಮೂಲಕ ಈ ವಿಷಯ ಬಹಿರಂಗವಾಗಿದೆ. ಇದು ಅನಿಲ್ ಮಣಿಭಾಯ್ ನಾಯ್ಕ್ ಅವರ ಕಾರ್ಯ ಬದ್ಧತೆಯ ಪ್ರತೀಕವಾಗಿದೆ ಎಂದೇ ಉದ್ಯಮ ವಲಯದಲ್ಲಿ ಬಣ್ಣಿಸಲಾಗುತ್ತಿದೆ.

Advertisement

ವಿಶ್ವದಲ್ಲಿಯೇ ಅತ್ಯುತ್ತಮ ಉದ್ಯಮ ನಾಯಕರಲ್ಲಿ ಒಬ್ಬರಾಗಿರುವ ನಾಯ್ಕ್ ಅವರು ಒಬ್ಬ ಶಾಲಾ ಶಿಕ್ಷಕರ ಪುತ್ರನಾಗಿದ್ದು ಗ್ರಾಮೀಣ ಪ್ರದೇಶದಿಂದ ಬಂದ ಪ್ರತಿಭೆಯಾಗಿದ್ದಾರೆ. ಇವರು 1965ರಲ್ಲಿ ಜೂನಿಯರ್ ಎಂಜಿನಿಯರ್ ಆಗಿ L&Tಗೆ ಸೇರ್ಪಡೆಗೊಂಡಿದ್ದರು, ಬಳಿಕ ನಾಯ್ಕ್ ಅವರು ಕಂಪೆನಿಯಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಕಂಪೆನಿಯ ಅದ್ಯಕ್ಷ ಹುದ್ದೆಗೆ ಏರಿದ್ದರು.

2018ರ ಹಣಕಾಸು ವರ್ಷದಲ್ಲಿ ನಾಯ್ಕ್ ಅವರು 137.2 ಕೋಟಿ ರೂಪಾಯಿಗಳನ್ನು ವಾರ್ಷಿಕ ವೇತನ ರೂಪದಲ್ಲಿ ಪಡೆದುಕೊಂಡಿದ್ದಾರೆ ಎಂದು ಕಂಪೆನಿ ವರದಿ ತಿಳಿಸಿದೆ. ಇದರಲ್ಲಿ ಭತ್ಯೆ, ESOP, ನಿವೃತ್ತಿ ಸೌಲಭ್ಯಗಳು ಮತ್ತು ಕಮಿಷನ್ ಸೇರಿದೆ. ನಾಯ್ಕ್ ಅವರ ಮೂಲವೇತನ 2.7ಕೋಟಿ ರೂಪಾಯಿಗಳಾಗಿತ್ತು. L&T ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ನಿವೃತ್ತರಾಗುವ ಸಂದರ್ಭದಲ್ಲಿ ನಾಯ್ಕ್ ಅವರಿಗೆ ಲಾರ್ಸನ್ ಆ್ಯಂಡ್ ಟರ್ಬೋ ಇನ್ಫೋಟೆಕ್ ಲಿಮಿಟೆಡ್ ಮತ್ತು L&T ಟೆಕ್ನಾಲಜಿ ಸರ್ವಿಸಸ್ ಲಿಮಿಟೆಡ್ ಗಳಲ್ಲಿ ಶೇರು ಪಾಲುದಾರಿಕೆಯ ಅವಕಾಶವನ್ನು ಆರಿಸಿಕೊಳ್ಳುವ ಆಯ್ಕೆಯನ್ನೂ ನೀಡಲಾಗಿತ್ತು.

ವಿಶೇಷವೆಂದರೆ ಅನಿಲ್ ಮಣಿಭಾಯ್ ನಾಯ್ಕ್ ಅವರು ತಮ್ಮ ಒಟ್ಟು ಆದಾಯದ 75 ಪ್ರತಿಶತ ಭಾಗವನ್ನು ಆರೋಗ್ಯ, ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಕ್ಷೇತ್ರಗಳಲ್ಲಿ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಾರೆ. ಇವರ ಈ ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಭಾರತ ಸರಕಾರವು ಇವರಿಗೆ ದ್ವಿತೀಯ ಅತ್ಯುನ್ನತ ನಾಗರಿಕ ಸಮ್ಮಾನವನ್ನು ಈ ವರ್ಷ ಘೋಷಿಸಿದೆ. 2009ರಲ್ಲಿ ಇವರಿಗೆ ಪದ್ಮಭೂಷಣ ಗೌರವ ಸಲ್ಲಿಕೆಯಾಗಿತ್ತು. ನಾಯ್ಕ್ ಅವರ ಪುತ್ರ ಗೂಗಲ್ ಉದ್ಯೋಗಿಯಾಗಿದ್ದಾರೆ. ಇವರ ಪುತ್ರಿ ಮತ್ತು ಅಳಿಯ ಇಬ್ಬರೂ ವೈದ್ಯರಾಗಿದ್ದಾರೆ. ನಾಯ್ಕ್ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next