ಮುಂಬಯಿ : ಇನ್ನೊಂದು ತಿಂಗಳಲ್ಲಿ ನಿವೃತ್ತರಾಗಲಿರುವ 76 ವರ್ಷ ಪ್ರಾಯದ, ದೇಶದ ಪ್ರಖ್ಯಾತ ಲಾರ್ಸನ್ ಆ್ಯಂಡ್ ಟೋಬ್ರೋ ಕಂಪೆನಿಯ ಅಧ್ಯಕ್ಷ AM ನಾಯ್ಕ್ ಅವರಿಗೆ ಬರೋಬ್ಬರಿ 38.04 ಕೋಟಿ ರೂ.ಗಳ ಲೀವ್ ಎನ್‌ಕ್ಯಾಶ್‌ಮೆಂಟ್ (ರಜೆ ಪಾವತಿ ಮೊತ್ತ) ಸಿಗಲಿದೆ.
ಕಂಪೆನಿಯ 72ನೇ ವಾರ್ಷಿಕ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಅತ್ಯಂತ ಸದೃಢ ಕಂಪೆನಿಯಾಗಿ ಬೆಳೆದು ಬಂದಿರುವ ಎಲ್ ಆ್ಯಂಡ್ ಟಿ ಇಂದು ತಲುಪಿರುವ ಉನ್ನತ ಔದ್ಯಮಿಕ ಮಟ್ಟಕ್ಕೆ, ಆರ್ಥಿಕ ದೃಢತೆಗೆ ಶೇ.75ರಷ್ಟು ಕೊಡುಗೆ ಅಧ್ಯಕ್ಷ ನಾಯ್ಕ್ ಅವರಿಂದ ಸಂದಿರುವುದು ಗಮನಾರ್ಹವಾಗಿದೆ.
ತಮ್ಮ 52 ವರ್ಷಗಳ ಅವಿರತ ಸೇವೆಯಲ್ಲಿ ನಾಯ್ಕ ಅವರು ರಜೆ ಪಡೆದದ್ದು ಅತ್ಯಂತ ವಿರಳ. ನಾಯ್ಕ್ ಅವರು ವೇತನ ರೂಪದಲ್ಲಿ 3.36 ಕೋಟಿ ಮತ್ತು ಕಮಿಷನ್ ರೂಪದಲ್ಲಿ 18.24 ಕೋಟಿ ರೂ. ಪಡೆಯುತ್ತಾ ಬಂದಿದ್ದಾರೆ. ಅಲ್ಲದೆ 19.27 ಕೋಟಿ ರೂ. ಮೌಲ್ಯದ ಸೌಕರ್ಯ, ಸೌಲಭ್ಯಗಳನ್ನು ಪಡೆಯುತ್ತಾ ಬಂದಿದ್ದಾರೆ.
52 ವರ್ಷಗಳ ಸೇವೆ ಸಲ್ಲಿಸಿರುವ ನಾಯ್ಕ್ ಅವರು 2016-17ರ ಸಾಲಿಗೆ ಕಂಪೆನಿಯಿಂದ ಪಡೆದಿರುವ ಪಗಾರ ಒಟ್ಟಾರೆಯಾಗಿ 79 ಕೋಟಿ. ನಾಯ್ಕ ಅವರು ಎಲ್ ಆ್ಯಂಡ್ ಕಂಪೆನಿಯನ್ನು ಸೇರಿದ್ದು 1965ರಲ್ಲಿ – ಸಿಸ್ಟಮ್ಸ್ ಇಂಜಿನಿಯರ್ ಆಗಿ.