Advertisement

LSGvsDC; ಪೂರನ್-ಅರ್ಷದ್ ವ್ಯರ್ಥ ಹೋರಾಟ; ಡೆಲ್ಲಿ ಸಮಾಧಾನದ ಗೆಲುವು: ಆರ್ ಸಿಬಿ ಹಾದಿ ಸಲೀಸು

11:33 PM May 14, 2024 | Team Udayavani |

ಹೊಸದಿಲ್ಲಿ: ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋಲು ಕಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪ್ಲೇ ಆಫ್ ಕನಸನ್ನು ಬಹುತೇಕ ಭಗ್ನ ಮಾಡಿಕೊಂಡಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಡೆಲ್ಲಿ ತಂಡವು ಸಮಾಧಾನದಿಂದ ಕೂಟ ಮುಗಿಸಿದೆ. ಈ ಪಂದ್ಯದ ಮೇಲೆ ಕಣ್ಣಿಟ್ಟಿದ್ದ ಆರ್ ಸಿಬಿ ನಿಟ್ಟುಸಿರು ಬಿಟ್ಟಿದೆ.

Advertisement

ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದರೆ, ಲಕ್ನೋ 189 ರನ್ ಮಾತ್ರ ಗಳಿಸಲು ಶಕ್ತವಾಯಿತು.

ಬೌಲಿಂಗ್‌ ಆಯ್ದುಕೊಂಡ ಲಕ್ನೋ ದ್ವಿತೀಯ ಎಸೆತದಲ್ಲೇ ಭರ್ಜರಿ ಯಶಸ್ಸು ಸಾಧಿಸಿತು. ಅಪಾಯಕಾರಿ ಆರಂಭಕಾರ ಜೇಕ್‌ ಫ್ರೆàಸರ್‌ ಮೆಕ್‌ಗರ್ಕ್‌ ಅವರನ್ನು ಅರ್ಷದ್‌ ಖಾನ್‌ ಖಾತೆ ತೆರೆಯುವ ಮೊದಲೇ ಪೆವಿಲಿಯನ್‌ಗೆ ಅಟ್ಟಿದರು. ಇದರೊಂದಿಗೆ ಡೆಲ್ಲಿ ಈ ಐಪಿಎಲ್‌ ಪವರ್‌ ಪ್ಲೇಯಲ್ಲಿ ಅತ್ಯಧಿಕ ವಿಕೆಟ್‌ ಕಳೆದುಕೊಂಡ ದಾಖಲೆಯನ್ನು 28ಕ್ಕೆ ಏರಿಸಿತು.

ದ್ವಿತೀಯ ವಿಕೆಟಿಗೆ ಜತೆಗೂಡಿದ ಅಭಿಷೇಕ್‌ ಪೊರೆಲ್‌ ಮತ್ತು ಶೈ ಹೋಪ್‌ ಭರವಸೆ ಮೂಡಿಸಿದರು. ಪವರ್‌ ಪ್ಲೇ ಅವಧಿಯಲ್ಲಿ ತಂಡಕ್ಕೆ ಹೆಚ್ಚಿನ ಹಾನಿ ಆಗದಂತೆ ತಡೆದರು. ಅಷ್ಟೇ ಅಲ್ಲ, ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ, 6 ಓವರ್‌ಗಳಲ್ಲಿ ಮೊತ್ತವನ್ನು 73ಕ್ಕೆ ಏರಿಸಿದರು. ಡೆಲ್ಲಿ ಈವರೆಗಿನ 17 ಆವೃತ್ತಿಗಳ ಪವರ್‌ ಪ್ಲೇಯಲ್ಲಿ 70 ಪ್ಲಸ್‌ ರನ್‌ ಬಾರಿಸಿದ 8ನೇ ನಿದರ್ಶನ ಇದಾಗಿದೆ. ಇದರಲ್ಲಿ 4 ಪ್ರಸಕ್ತ ಋತುವಿನಲ್ಲೇ ದಾಖಲಾಗಿರುವುದು ವಿಶೇಷ.

ಪೊರೆಲ್‌-ಹೋಪ್‌ 92 ರನ್‌ ಜತೆಯಾಟ ನಡೆಸಿದರು. ಪೊರೆಲ್‌ ಈ ಸೀಸನ್‌ನ 2ನೇ ಅರ್ಧ ಶತಕದೊಂದಿಗೆ ಮಿಂಚಿದರು. ಇವರ ಕೊಡುಗೆ 33 ಎಸೆತಗಳಿಂದ 58 ರನ್‌ (5 ಬೌಂಡರಿ, 4 ಸಿಕ್ಸರ್‌). ಹೋಪ್‌ 38 ರನ್‌ ಹೊಡೆದರು (27 ಎಸೆತ, 3 ಬೌಂಡರಿ, 2 ಸಿಕ್ಸರ್‌).

Advertisement

ಅರ್ಧ ಹಾದಿ ಕ್ರಮಿಸುವಾಗ ಡೆಲ್ಲಿ 2ಕ್ಕೆ 111 ರನ್‌ ಮಾಡಿತ್ತು. ಆದರೆ ಅನಂತರದ 5 ಓವರ್‌ಗಳಲ್ಲಿ ಡೆಲ್ಲಿ ರನ್‌ ಗತಿ ಕುಂಟಿತಗೊಂಡಿತು. ಕೇವಲ 25 ರನ್‌ ಬಂತು. ನಾಯಕ ರಿಷಭ್‌ ಪಂತ್‌ 33 ರನ್‌ ಕೊಡುಗೆ ಸಲ್ಲಿಸಿದರು. ಡೆತ್‌ ಓವರ್‌ಗಳಲ್ಲಿ ಟ್ರಿಸ್ಟನ್‌ ಸ್ಟಬ್ಸ್ ಸಿಡಿದು ನಿಂತರು. ಇವರ ಗಳಿಕೆ ಅಜೇಯ 57 ರನ್‌. 25 ಎಸೆತ ಎದುರಿಸಿದ ಅವರು 3 ಬೌಂಡರಿ ಹಾಗೂ 4 ಸಿಕ್ಸರ್‌ ಬಾರಿಸಿದರು. ಇವರ ಬಿರುಸಿನ ಬ್ಯಾಟಿಂಗ್‌ನಿಂದಾಗಿ ಕೊನೆಯ 5 ಓವರ್‌ಗಳಲ್ಲಿ 72 ರನ್‌ ಹರಿದು ಬಂತು.

ಸತತ ವಿಕೆಟ್ ಕಳೆದುಕೊಂಡ ಲಕ್ನೋ: ದೊಡ್ಡ ಮೊತ್ತ ಚೇಸ್ ಮಾಡಲು ಬಂದ ಲಕ್ನೋ ಸತತ ವಿಕೆಟ್ ಕಳೆದುಕೊಂಡಿತು. ಮೊದಲು ಓವರ್ ನಲ್ಲಿಯೇ ನಾಯಕ ರಾಹುಲ್ ವಾಪಾಸಾದರು. ಡಿಕಾಕ್ ಕೂಡಾ 12 ರನ್ ಮಾಡಿ ಮರಳಿದರು. ಸ್ಟೋಯಿನಸ್ ಮತ್ತು ಹೂಡಾ ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಪೂರನ್ ಮಾತ್ರ ದಿಟ್ಟ ಹೋರಾಟ ನಡೆಸಿದರು. ಕೇವಲ 27 ಎಸೆತ ಎದುರಿಸಿದ ಪೂರನ್ 61 ರನ್ ಮಾಡಿದರು. ಪೂರನ್ ಔಟಾಗುತ್ತಿದ್ದಂತೆ ಲಕ್ನೋ ಸೋಲು ಖಚಿತವಾಗಿತ್ತು. ಆದರೆ ಕೊನೆಯಲ್ಲಿ ಅರ್ಷದ್ ಖಾನ್ ಒಂದಷ್ಟು ಹೋರಾಟ ನಡೆಸಿದರು. 33 ಎಸೆತಗಳಿಂದ ಅರ್ಷದ್ ಅಜೇಯ 55 ರನ್ ಹೊಡೆದರು.

ಲಕ್ನೋ ಸೋಲಿನೊಂದಿಗೆ ಆರ್ ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸಲೀಸಾಗಿದೆ. ಈಗ ಲಕ್ನೋ ಭಯವಿಲ್ಲದೆ ಚೆನ್ನೈ ವಿರುದ್ದ ಗೆದ್ದು ಆರ್ ಸಿಬಿ ಪ್ಲೇ ಆಫ್ ತಲುಪಬಹುದು.

Advertisement

Udayavani is now on Telegram. Click here to join our channel and stay updated with the latest news.

Next