ಶಿವಮೊಗ್ಗ: ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಜತೆ ಹೋಗದಂತೆ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮನವಿ ಮಾಡಿದರು.
ಗೋಪಾಳದ ಬಂಟರ ಭವನದಲ್ಲಿ ಬಿಜೆಪಿ ನಗರ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರ ನಾಮಪತ್ರ ಸಲ್ಲಿಕೆಗೆ ಬಿಜೆಪಿಯ ಕಾರ್ಯ ಕರ್ತರು ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ. ಈಶ್ವರಪ್ಪನವರ ನಾಮಪತ್ರ ಸಲ್ಲಿಕೆಗೆ ಎಷ್ಟು ಜನ ಪಾಲ್ಗೊಂಡಿದ್ದೀರಿ ಎಂದು ಮಹಿಳೆಯರನ್ನು ಪ್ರಶ್ನಿಸಿದರು. ಆಗ ಸಭೆಯಲ್ಲಿ ಭಾಗವಹಿಸಿದ್ದ ಕೆಲ ಮಹಿಳೆಯರು ಕೈ ಎತ್ತಿದಾಗ ಇನ್ನೊಮ್ಮೆ ಈ ತಪ್ಪು ಮಾಡದಿರಿ ಎಂದು ಮನವಿ ಮಾಡಿದರು.
ಏ.18 ರಂದು ಬೆಳಗ್ಗೆ 9.45ಕ್ಕೆ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಯಡಿಯೂರ ಪ್ಪನವರು ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ದೇಶದಲ್ಲಿ ಪ್ರಧಾನಿ ಮೋದಿಯವರು ಮಹಿಳೆಯರಿಗೆ ಶೇ.33 ಮೀಸಲಾತಿಯನ್ನು ಕೊಟ್ಟಿದ್ದಾರೆ. ಎಲ್ಲೆಡೆ ಚುನಾವಣಾ ಕಾವು ಏರುತ್ತಿದೆ. ಇಡೀ ಪ್ರಪಂಚದಲ್ಲಿ ಪ್ರಜ್ಞಾವಂತ ಮತದಾರರನ್ನು ಹೊಂದಿರುವ ದೇಶ ಭಾರತ. ಮೋದಿ ಮತ್ತೂಮ್ಮೆ ದೇಶದ ಪ್ರಧಾನಿಯಾಗಬೇಕು. ಮತದಾರರು ಬಿಜೆಪಿಗೆ ಬೆಂಬಲ ನೀಡಬೇಕು ಎಂದರು.
ಕಾಂಗ್ರೆಸ್ ಗ್ಯಾರಂಟಿ ಮೂಲಕ ಅವಕಾಶ ಕೋರುತ್ತಿದೆ ಎಂದು ಟೀಕಿಸಿದ ಅವರು, ಐದು ಕೆ.ಜಿ. ಅಕ್ಕಿ ಕೊಡುತ್ತಿರುವುದು ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಕೇಂದ್ರದ ಅಕ್ಕಿಗೆ ಸಿದ್ದರಾಮಯ್ಯ ಫೋಟೋ ಹಾಕಿದ್ದಾರೆ. ಶಕ್ತಿ ಯೋಜನೆ ಜಾರಿ ಬಳಿಕ ಹಳ್ಳಿಗಳಲ್ಲಿ ಬಸ್‌ಗಳು ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದರು.
ಶಾಸಕ ಎಸ್.ಎನ್. ಚೆನ್ನಬಸಪ್ಪ ಪ್ರಮುಖರಾದ ಎಂ.ಬಿ. ಭಾನುಪ್ರಕಾಶ್, ಮೋಹನ್ ರೆಡ್ಡಿ, ಜ್ಞಾನೇಶ್ವರ್, ಗಾಯತ್ರಿ ದೇವಿ, ಸುರೇಖಾ ಮುರುಳಿಧರ್, ಎನ್.ಕೆ. ಜಗದೀಶ್ ಇತರರು ಇದ್ದರು.