ಶಿವಮೊಗ್ಗ: ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲೇ ಬಿ.ವೈ.ರಾಘವೇಂದ್ರ ಅವರು ಒಂದು ಲಕ್ಷದ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪೆಸಿಟ್ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ಸೋಮವಾರ ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಐದನೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಮೂರನೇ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆಯವ ನಿರೀಕ್ಷೆ ಇದೆ ಎಂದರು.
ಐದು ಗ್ಯಾರಂಟಿಗಳು ಮಾತ್ರ ಕಾಂಗ್ರೆಸ್ ಸಾಧನೆ. ಸರ್ಕಾರದಿಂದ ಯಾವುದೇ ಕಾರ್ಯಕ್ರಮಗಳಿಲ್ಲ. ಕಾಂಗ್ರೆಸ್ ಸುಳ್ಳನ್ನು ಹೇಳಿ ಆಡಳಿತ ನಡೆಸುತ್ತಿದೆ. ರಾಜ್ಯದ ಖಜಾನೆ ಖಾಲಿ ಮಾಡುತ್ತಿದ್ದಾರೆ. 75 ವರ್ಷದಲ್ಲಿ ಅನುದಾನ ವಿಷಯದಲ್ಲಿ ಯಾವುದೇ ರಾಜ್ಯಗಳು ಕೇಂದ್ರದ ಜತೆ ಜಟಾಪಟಿಗೆ ಬಿದ್ದಿಲ್ಲ. ಐದು ಗ್ಯಾರಂಟಿಯಿಂದ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.
ಕಾಂಗ್ರೆಸ್‌ನ 94 ಶಾಸಕರು ದುಡ್ಡಿಲ್ಲ ಎನ್ನುತ್ತಾರೆ. ಖಾಲಿ ಚೊಂಬು ತೋರಿಸುತ್ತಿರುವುದು ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂಬುದರ ಸಂಕೇತ. ಸರ್ಕಾರದಿಂದ ಕೋಟ್ಯಂತರ ರೂ. ಅನ್ನು ಸ್ವೇಚ್ಛಾಚಾರವಾಗಿ ಖಾಲಿ ಮಾಡುತ್ತಿದ್ದಾರೆ. ಸಚಿವ ಸಂಪುಟದಲ್ಲಿ 34 ಹೊಸ ಕಾರು ಖರೀದಿಯಾಗಿದೆ. ನನ್ನ ಅವ ಧಿಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಆಗಲಿಲ್ಲ. ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗದ ಕಾರಣ ಮೋದಿ ಬಳಿ ಹೋಗಲಿಲ್ಲ. ನಿಭಾಯಿಸಿದೆ ಎಂದರು.
ಏಪ್ರಿಲ್‌ನಲ್ಲಿ ಮಳೆ ಬರಬೇಕಿತ್ತು. ಕಾಂಗ್ರೆಸ್ ಅಧಿ ಕಾರಕ್ಕೆ ಬಂದ ಒಂದು ವರ್ಷ ಮಳೆ ಬರುವುದಿಲ್ಲ. ಪಕ್ಷ ಅಧಿ ಕಾರಕ್ಕೆ ಬರುವ ಜತೆ ಬರಗಾಲವನ್ನೂ ತರಲಿದೆ. ರಾಘವೇಂದ್ರ ನಾಮಪತ್ರ ಹಾಕಿದಾಗ ಬಂದ ಮಳೆ ಶಿವಮೊಗ್ಗದಲ್ಲಿ ಮತ್ತೆ ಸುರಿದಿಲ್ಲ. ಸಿಗಂದೂರು ತಾಯಿಯ ಕೃಪೆಯಿಂದ ಉತ್ತಮ ಮಳೆಯಾಗಲಿ. ರೈತರು ನೆಮ್ಮದಿ ಬದುಕು ಕಾಣಲಿ ಎಂದು ಆಶಿಸಿದರು.
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಶಾಸಕರಾದ ಶಾರದಾ ಪೂರ್ಯಾನಾಯ್ಕ, ಎಂಎಲ್‌ಸಿ ಎಸ್.ಎಲ್. ಭೋಜೇಗೌಡ, ಎಸ್.ರುದ್ರೇಗೌಡ, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ರಘುಪತಿ ಭಟ್, ಮುಖಂಡರಾದ ಗಿರೀಶ್ ಪಟೇಲ್, ಎನ್.ಕೆ. ಜಗದೀಶ್, ಧನಂಜಯ ಸರ್ಜಿ ಇತರರಿದ್ದರು.
“ಸಚಿವರಾಗಿ ದೆಹಲಿಗೆ‘
ಮೈತ್ರಿ ಸರ್ಕಾರ ನಮ್ಮ ಸ್ವಾರ್ಥಕ್ಕೆ ಮಾಡಿಕೊಂಡಿಲ್ಲ. ನೀರು ಮತ್ತು ಮಾರುಕಟ್ಟೆ ದೊರಕಿದರೆ ರೈತರು ಸ್ವಾಭಿಮಾನದಿಂದ ಬದುಕುತ್ತಾರೆ. ಎನ್‌ಡಿಎ ಸರ್ಕಾರ ಬಂದರೆ ಸಚಿವರಾಗಿ ನಾನು ಮತ್ತು ಬಿ.ವೈ. ರಾಘವೇಂದ್ರ ಅವರು ದೆಹಲಿಗೆ ಹೋಗುವ ಸಾಧ್ಯತೆ ಇದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಡ್ಯದಲ್ಲಿ 2ರಿಂದ 3 ಲಕ್ಷ ಬಹುಮತದಿಂದ ಗೆಲ್ಲಲಿದ್ದೇನೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ್ಯಾನಾಯ್ಕ ಅವರನ್ನು ಗೆಲ್ಲಿಸಿದಂತೆ ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
“ಗ್ಯಾರಂಟಿ ಯೋಜನೆಗಳಿಂದ ಸಾಲದ ಹೊರೆ ಹೆಚ್ಚಳ‘
ಭದ್ರಾವತಿ: ರಾಜ್ಯದಲ್ಲಿ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಯೋಜನೆಗೆ ಆಗುತ್ತಿರುವ ಖರ್ಚು ರಾಜ್ಯದ ಜನರ ಮೇಲೆ ಸಾಲದ ಹೊರಯನ್ನು ಹೆಚ್ಚಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸೋಮವಾರ ಸಂಜೆ ಹಳೆನಗರದ ಕನಕಮಂಟಪ ಮೈದಾನದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸಾರ್ವಜನಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕಾರಣಿಗಳಾದ ನಾವು ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ತಗಲುವ ವೆಚ್ಚಕ್ಕೆ ಜನರ ತೆರಿಗೆ ಹಣವನ್ನು ಬಳಸುತ್ತೇವೆಯೇ ಹೊರತು ನಾವ್ಯಾರೂ ಅದನ್ನು ನಮ್ಮ ಮನೆಯಿಂದ ತಂದುಕೊಡುವುದಿಲ್ಲ. ಆದರೆ ಆ ರೀತಿ ನೀಡುವ ಯೋಜನೆಗಳು ಜನರಿಗೆ ಅನುಕೂಲವಾಗಬೇಕೇ ಹೊರತು ಹೊರೆಯಾಗಬಾರದು ಎಂದರು.
ಮಂಡ್ಯದ ಜನತೆ ಈಗಾಗಲೇ ನನ್ನನ್ನು ಸಂಸದನನ್ನಾಗಿ ಆಶೀರ್ವದಿಸಿದ್ದಾರೆ. ನೀವು ಸಹ ರಾಘವೇಂದ್ರ ಅವರನ್ನು ಆರಿಸಿ ಗೆಲ್ಲಿಸಿ.ನಾವಿಬ್ಬರೂ ದೆಹಲಿಗೆ ಸಂಸದರಾಗಿ ತೆರಳಿ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಿ ಪುನಶ್ಚೇತನಗೊಳಿಸಲು ಮೋದಿ ಅವರ ಗಮನ ಸೆಳೆಯುತ್ತೇವೆ ಎಂದರು.
ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮಾತನಾಡಿ, ಈ ಲೋಕಸಭಾ ಚುನಾವಣೆ ದೇಶದ ಭವಿಷ್ಯದ ಚುನಾವಣೆ ಎಂಬುದನ್ನು ಅರಿತು ಮೋದಿ ಅವರ ಕೈ ಬಲಪಡಿಸಲು ಮೇ 7ರ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ಚಲಾಯಿಸಿ ನನ್ನನ್ನು ಜಯಶಾಲಿಯಾಗಿ ಮಾಡಿ ಎಂದರು.
ಜೆಡಿಎಸ್ ರಾಜ್ಯ ಮುಖಂಡರಾದ ಶಾರದಾ ಅಪ್ಪಾಜಿ ಮಾತನಾಡಿ, ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯಾದ ರಾಘವೇಂದ್ರ ಅವರಿಗೆ ಭದ್ರಾವತಿ ಕ್ಷೇತ್ರದಲ್ಲಿ ಕನಿಷ್ಠ ಒಂದು ಲಕ್ಷ ಮತ ದೊರಕುವಂತೆ ಎಲ್ಲರೂ ಕಾರ್ಯ ನಿರ್ವಹಿಸೋಣ ಎಂದರು.
ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಚಂದ್ರೇಗೌಡ ಅವರು ಜೆಡಿಎಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾದರು.
ಬಿಜೆಪಿ ಅದ್ಯಕ್ಷ ಧರ್ಮಪ್ರಸಾದ್, ಜೆಡಿಎಸ್ ಅಧ್ಯಕ್ಷ ಆರ್. ಕರುಣಾಮೂರ್ತಿ, ಗ್ರಾಮಾಂತರ ಘಟಕದ ಅಧ್ಯಕ್ಷ ಧರ್ಮಣ್ಣ, ಕುಮ್ರಿ ಚಂದ್ರಣ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಷಾ, ಎಂಎಲ್‌ಸಿ ಭೋಜೇಗೌಡ, ಮುಖಂಡರಾದ ಯೋಗೇಶ್, ಮಧುಸೂಧನ್, ಅಜಿತ್ ಅಪ್ಪಾಜಿ, ಕುಮಾರ್, ನಗರಸಭಾ ಸದಸ್ಯರು, ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಕದಿರೇಶ್, ಮಂಜುನಾಥ್ ಕದಿರೇಶ್, ಬಿಜೆಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಇತರರು ಇದ್ದರು.