Advertisement

LS Election; ಅಭ್ಯರ್ಥಿಯ ಚುನಾವಣ ವೆಚ್ಚದ ಮೇಲೆ ನಿಗಾ: ವೀಕ್ಷಕ ಅಲೋಕ್‌ ಕುಮಾರ್‌

12:55 AM Mar 31, 2024 | Team Udayavani |

ಮಣಿಪಾಲ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣೆ ಪ್ರಚಾರ ಸಹಿತ ಎಲ್ಲ ವೆಚ್ಚದ ಬಗ್ಗೆ ಪ್ರತೀ ದಿನ ನಿಗಾ ವಹಿಸಿ ವರದಿ ಸಲ್ಲಿಸುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಚುನಾವಣ ವೆಚ್ಚ ವೀಕ್ಷಕ ಅಲೋಕ್‌ ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಸಹಾಯಕ ವೆಚ್ಚ ವೀಕ್ಷಕರ ತಂಡದ ಅಧಿಕಾರಿಗಳು ಹಾಗೂ ಸಿಬಂದಿ ವರ್ಗದ ಸಭೆಯಲ್ಲಿ ಶನಿವಾರ ಮಾತನಾಡಿದರು.

ಎಫ್ಎಸ್‌ಟಿ, ಎಸ್‌ಎಸ್‌ಟಿ, ವಿವಿಟಿ ಹಾಗೂ ಇನ್ನಿತರ ತಂಡಗಳು ಜವಾಬ್ದಾರಿಯುತವಾಗಿ ತಮಗೆ ವಹಿಸಿರುವ ಚುನಾವಣ ಕಾರ್ಯ ನಡೆಸಿ, ಅಭ್ಯರ್ಥಿಗಳು ಚುನಾವಣ ಆಯೋಗದ ನಿರ್ದೇಶನಗಳನ್ನು ಪಾಲಿಸುತ್ತಿರುವ ಬಗ್ಗೆ ನಿಗಾ ವಹಿಸಬೇಕು ಎಂದರು.

ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಯಬೇಕು. ಚೆಕ್‌ಪೋಸ್ಟ್‌ ಗಳಲ್ಲಿ ತಪಾಸಣೆ ತೀವ್ರಗೊಳಿಸಬೇಕು. ತಪಾಸಣೆ ವೇಳೆ ದಾಖಲೆ ರಹಿತ ಹಣ ಸಿಕ್ಕಲ್ಲಿ ಕೂಡಲೇ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರತೀ ವಿಧಾನಸಭೆ ಕ್ಷೇತ್ರಕ್ಕೆ ಅಭ್ಯರ್ಥಿಗಳ ಚುನಾವಣ ವೆಚ್ಚ ನಿರ್ವಹಿಸಲು ನೇಮಕವಾಗಿರುವ ಅಧಿಕಾರಿಗಳು, ಸಿಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶಿಸಿದರು.

ಚುನಾವಣಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮಾತನಾಡಿ, ಚುನಾವಣ ನೀತಿ ಸಂಹಿತೆ ಉಲ್ಲಂಘನೆ ದೂರುಗಳು ಬಂದಾಗ ಕೂಡಲೇ ಫ್ಲೈಯಿಂಗ್‌ ಸ್ಕ್ವಾಡ್‌ ಕಾರ್ಯಪ್ರವೃತ್ತರಾಗಿ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಉಲ್ಲಂಘನೆಯಾದಲ್ಲಿ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಎಸ್‌ಪಿ ಡಾ| ಅರುಣ್‌ ಕೆ., ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್‌., ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಚುನಾವಣೆಗೆ ಸಂಬಂಧಿಸಿದ ಜಿಲ್ಲಾಮಟ್ಟದ ನೋಡೆಲ್‌ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಸಿ-ವಿಜಿಲ್‌ನಲ್ಲಿ ದೂರು ಸಲ್ಲಿಸಿ
ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ಸಿ-ವಿಜಿಲ್‌ ಮೂಲಕ ದಾಖಲಿಸಬಹುದು. ದೂರು ದಾಖಲಾದ ಕೂಡಲೇ ಸಂಬಂಧಪಟ್ಟ ತಂಡ ಕಾರ್ಯಪ್ರವೃತ್ತವಾಗಲಿದೆ.

ಮತದಾರರನ್ನು ಸೆಳೆಯಲು ಹಣ, ಮದ್ಯ, ಉಡುಗೊರೆಗಳನ್ನು ಹಂಚುವುದು ಸೇರಿದಂತೆ ಮತ್ತಿತರ ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ನೀಡುವುದು ಹೇಗೆ? ಎಂಬ ಹಲವು ಪ್ರಶ್ನೆಗಳಿಗೆ ಸಿ-ವಿಜಿಲ್‌ ಮೂಲಕ ಮೊಬೈಲ್‌ನಲ್ಲಿಯೇ ಉತ್ತರ ಕಂಡುಕೊಳ್ಳಬಹುದು.

ಗೂಗಲ್‌ ಪ್ಲೇ ಸ್ಟೋರ್‌/ಆ್ಯಪಲ್‌ ಸ್ಟೋರ್‌ನಿಂದ ಸಿ-ವಿಜಿಲ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡು ಆ್ಯಪ್‌ನಲ್ಲಿ ಹೆಸರು, ಮೊಬೈಲ್‌ ಸಂಖ್ಯೆ ಹಾಕಿ ನೋಂದಣಿ ಮಾಡಬೇಕು. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗಳ ಫೋಟೋ, ವೀಡಿಯೋಗಳನ್ನು ಸೆರೆ ಹಿಡಿದು ಅಪ್‌ಲೋಡ್‌ ಮಾಡಿ, ವಿವರ ಒದಗಿಸಿದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ.

100 ನಿಮಿಷಗಳ ಒಳಗೆ ಕ್ರಮ
ಆ್ಯಪ್‌ನಲ್ಲಿ ದಾಖಲಿಸುವ ದೂರುಗಳ ಬಗ್ಗೆ ಜಿಲ್ಲಾ ಮಟ್ಟದ ಸಿ-ವಿಜಿಲ್‌ ನೋಡೆಲ್‌ ಅಧಿಕಾರಿಗಳು ದೂರಿಗೆ ಸಂಬಂಧಿಸಿ ಆ ಕ್ಷೇತ್ರ ವ್ಯಾಪ್ತಿಯ ಎಫ್‌ಎಸ್‌ಟಿ ತಂಡದವರಿಗೆ ಕ್ರಮ ಕೈಗೊಳ್ಳಲು ಕಳುಹಿಸುತ್ತಾರೆ. ಅವರು ಸಾರ್ವಜನಿಕರ ದೂರುಗಳಿಗೆ 100 ನಿಮಿಷಗಳ ಒಳಗಾಗಿ ಕ್ರಮ ಕೈಗೊಳ್ಳುತ್ತಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಗಾಗಲೇ ಕಂಟ್ರೋಲ್‌ ರೂಂ ಮತ್ತು ಸಿ-ವಿಜಿಲ್‌ ತಂಡ ಕಾರ್ಯನಿರ್ವಹಿಸುತ್ತಿದೆ. ಈವರೆಗೆ 245 ದೂರುಗಳು ದಾಖಲಾಗಿದ್ದು, ಎಲ್ಲ ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಸಿ-ವಿಜಿಲ್‌ನಲ್ಲಿ ದೂರು ನೀಡುವ ದೂರುದಾರರ ಹೆಸರು, ವಿಳಾಸವನ್ನು ಗೌಪ್ಯವಾಗಿ ಇಡಲಾಗುತ್ತದೆ. ಚುನಾವಣೆ ಮುಗಿಯುವವರೆಗೂ ಮೂರು ಪಾಳಿಗಳಲ್ಲಿ ದಿನದ 24 ಗಂಟೆಯೂ ಸಿಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಸಿ-ವಿಜಿಲ್‌ ನೋಡೆಲ್‌ ಅಧಿಕಾರಿ ಕುಮಾರ್‌ ಬಿ.ಆರ್‌. ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಯುತವಾಗಿ ನಡೆಸುವುದು ಅಗತ್ಯ. ಚುನಾವಣೆ ಅಕ್ರಮ, ಆಮಿಷ ತಡೆಯಲು ಸಿ-ವಿಜಿಲ್‌ ಬಳಸುವ ಮೂಲಕ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಿ, ಪ್ರಜಾಪ್ರಭುತ್ವವನ್ನು ದೃಢಗೊಳಿಸೋಣ.
-ಡಾ| ಕೆ. ವಿದ್ಯಾಕುಮಾರಿ, ಚುನಾವಣಾಧಿಕಾರಿ

ವೆಚ್ಚ ವೀಕ್ಷಕರ ನೇಮಕ
ಲೋಕಸಭೆ ಚುನಾವಣೆಗೆ ಸಂಬಂಧಿಸಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಚುನಾವಣ ವೆಚ್ಚ ವೀಕ್ಷಕರನ್ನಾಗಿ ಆಲೋಕ್‌ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ. ವೆಚ್ಚ ವೀಕ್ಷಕರ ಕಚೇರಿಯನ್ನು ಬನ್ನಂಜೆಯ ಪ್ರವಾಸಿ ಮಂದಿರದಲ್ಲಿ ತೆರೆಯಲಾಗಿದೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಚುನಾವಣೆಗೆ ಸಂಬಂಧಿಸಿದ ದೂರು ಗಳಿದ್ದಲ್ಲಿ 0820-2001204, 9482258424 ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

ಉಡುಪಿ: ಇಬ್ಬರಿಂದ ನಾಮಪತ್ರ
ಮಣಿಪಾಲ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸುಧೀರ್‌ ಕಾಂಚನ್‌, ಜನಹಿತ ಪಕ್ಷದಿಂದ ಸುಪ್ರೀತ್‌ ಕುಮಾರ್‌ ಪೂಜಾರಿ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ.
ಸುಧೀರ್‌ ಕಾಂಚನ್‌ 45 ಸಾವಿರ ನಗದು, 1.08 ಲಕ್ಷ ಮೌಲ್ಯದ ಬ್ಯಾಂಕ್‌ ಷೇರು ಸೇರಿ 1.53 ಲಕ್ಷ ಚರಾಸ್ತಿ, 46.80 ಲಕ್ಷ ಮೌಲ್ಯದ ಸ್ಥಿರಾಸ್ತಿ, ಪತ್ನಿ ಹೆಸರಲ್ಲಿ 10 ಗ್ರಾಂ ಚಿನ್ನ ಹೊಂದಿದ್ದಾರೆ. ಈವರೆಗೂ ಕ್ಷೇತ್ರದಲ್ಲಿ 2 ನಾಮಪತ್ರ ಸಲ್ಲಿಕೆಯಾಗಿದೆ.

97,000 ರೂ. ನಗದು ವಶ
ಮಾ. 29ರಂದು ಹೆಜಮಾಡಿ ಚೆಕ್‌ ಪೋಸ್ಟ್‌ನಲ್ಲಿ 97,000 ರೂ. ದಾಖಲೆ ರಹಿತ ನಗದನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಡಿಸಿ ಕಚೇರಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next