ನವದೆಹಲಿ: ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಜನರಿಗೆ ಕೇಂದ್ರ ಸರ್ಕಾರ ರಿಲೀಫ್ ನೀಡಲಿದೆಯೇ? ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆಯಾಗಲಿದೆಯೇ? ಹೌದು ಎನ್ನುತ್ತಿವೆ ಮೂಲಗಳು. 2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಜನರ ಹೊರೆ ತಗ್ಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮೂರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ತನ್ನ ಮಹತ್ವಾಕಾಂಕ್ಷೆಯ “ಹರ್ ಘರ್ ಜಲ್’ ಯೋಜನೆಗೆ ವೇಗ ನೀಡುವುದು, ಎಲ್‌ಪಿಜಿ ದರ ಇಳಿಸುವುದು ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ವಯ ನೀಡುವ ನಗದನ್ನು ಹೆಚ್ಚಳ ಮಾಡುವುದು ಸರ್ಕಾರದ ಯೋಜನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈವರೆಗೆ ಕನಿಷ್ಠ ಶೇ.67ರಷ್ಟು ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 4 ವರ್ಷಗಳ ಹಿಂದೆ ಜಲ ಜೀವನ್ ಮಿಷನ್ ಜಾರಿಗೂ ಮೊದಲು ಈ ಪ್ರಮಾಣ ಶೇ.17ರಷ್ಟಿತ್ತು. 2024ರ ವೇಳೆಗೆ ಶೇ.100ರಷ್ಟು ಮನೆಗಳಿಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಟಾರ್ಗೆಟ್ ಅನ್ನು ಲೋಕಸಭೆ ಚುನಾವಣೆಗೂ ಮುಂಚೆಯೇ ಸಾಧಿಸಬೇಕೆಂದು ಪಣತೊಟ್ಟಿರುವ ಸರ್ಕಾರ ಈಗ ಈ ಪ್ರಕ್ರಿಯೆಗೆ ವೇಗ ನೀಡಿದೆ. 2019ರ ಚುನಾವಣೆಯಲ್ಲಿ ಪಿಎಂ ಉಜ್ವಲ ಯೋಜನೆ ಮತ್ತು ಪಿಎಂ ಆವಾಸ ಯೋಜನೆಯು ಹೇಗೆ ಬಿಜೆಪಿ ಪರ ಮ್ಯಾಜಿಕ್ ಮಾಡಿತೋ, ಅದೇ ರೀತಿ ಹರ್ ಘರ್ ಜಲ್ ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು 2024ರ ಚುನಾವಣೆಯಲ್ಲಿ ಪಕ್ಷಕ್ಕೆ ಶಕ್ತಿ ಕೊಡಲಿದೆ ಎಂಬ ನಂಬಿಕೆ ಕೇಂದ್ರ ಸರ್ಕಾರದ್ದು.
ಬೆಲೆ ಇಳಿಕೆ:
ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಳವು ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಬಿಜೆಪಿಗೆ ಹೊಡೆತ ನೀಡಿದೆ. ಈ ವರ್ಷ 5 ರಾಜ್ಯಗಳ ವಿಧಾನಸಭೆ ಚುನಾವಣೆಯ ಜೊತೆಗೆ ಮುಂದಿನ ವರ್ಷ ಲೋಕಸಭೆ ಚುನಾವಣೆಯೂ ನಡೆಯಲಿರುವ ಕಾರಣ, ದುಬಾರಿ ಬದುಕು ಚುನಾವಣಾ ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಭೀತಿ ಸರ್ಕಾರಕ್ಕೆ ಆವರಿಸತೊಡಗಿದೆ. ಕಳೆದ 3 ವರ್ಷಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಮೂರು ಪಟ್ಟು ಹೆಚ್ಚಳವಾಗಿದ್ದು, ಅದನ್ನು ತಗ್ಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದೂ ಮೂಲಗಳು ತಿಳಿಸಿವೆ.
ಸಮ್ಮಾನ್ ನಿಧಿ ಹೆಚ್ಚಳ:
ದೇಶಾದ್ಯಂತ ರೈತರು ಕಿಸಾನ್ ಸಮ್ಮಾನ್ ನಿಧಿಯ ಮೊತ್ತ ಹೆಚ್ಚಳ ಮಾಡಬೇಕೆಂಬ ಇಚ್ಛೆ ವ್ಯಕ್ತಪಡಿಸಿರುವ ಕುರಿತು ಮಾಹಿತಿ ಸಂಗ್ರಹಿಸಿರುವ ಕೇಂದ್ರ ಸರ್ಕಾರ, ವಾರ್ಷಿಕ 6 ಸಾವಿರ ರೂ.ಗಳ ಮೊತ್ತವನ್ನು ಮತ್ತಷ್ಟು ಹೆಚ್ಚಳ ಮಾಡಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.